ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಗಣಿನಾಡಿನಲ್ಲಿ ಕೈ– ಕಮಲ ಹಣಾಹಣಿ

ಕಾಂಗ್ರೆಸ್‌ನಲ್ಲಿ ಭಿನ್ನಮತ: ಬಿಜೆಪಿಯಲ್ಲಿ ಒಗ್ಗಟ್ಟು
Last Updated 7 ಮೇ 2019, 6:47 IST
ಅಕ್ಷರ ಗಾತ್ರ

ಬಳ್ಳಾರಿ: ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಅಭ್ಯರ್ಥಿ, ಸಂಸದ ವಿ.ಎಸ್‌.ಉಗ್ರಪ್ಪ ಹಾಗೂ ಬಿಜೆಪಿಯ ವೈ.ದೇವೇಂದ್ರಪ್ಪ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.

2018ರ ಉಪ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಬೆಂಬಲದಿಂದ ಉಗ್ರಪ್ಪ 2,43,161 ಮತಗಳ ಅಂತರದಲ್ಲಿ ಗೆದ್ದಿದ್ದರು. ಈ ಬಾರಿ ಅಂಥ ಸನ್ನಿವೇಶವಿಲ್ಲ.

ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಸೇರಿ ಸರ್ಕಾರದ ಗಣ್ಯರಿಗೆ ಚುನಾವಣೆಯ ವೈಯಕ್ತಿಕ ಮಹತ್ವಾಕಾಂಕ್ಷೆ ಇರುವುದರಿಂದ ಉಗ್ರಪ್ಪ ಸ್ಥಳೀಯ ನಾಯಕರೊಂದಿಗೆ, ವೈಯಕ್ತಿಕ ವರ್ಚಸ್ಸೆಲ್ಲವನ್ನೂ ಪಣಕ್ಕಿಟ್ಟಿದ್ದಾರೆ. ಪಕ್ಷದೊಳಗಿನ ಭಿನ್ನಮತವೇ ಅವರಿಗೆ ಸವಾಲಾಗಿದೆ.

ಶಾಸಕರಾದ ಬಿ.ನಾಗೇಂದ್ರ, ಎಲ್‌.ಬಿ.ಪಿ ಭೀಮಾನಾಯ್ಕ, ಆನಂದಸಿಂಗ್ ಮತ್ತು ಗಣೇಶ್‌ ಉಪಚುನಾವಣೆಯಲ್ಲಿ ಸಕ್ರಿಯರಾಗಿದ್ದರು. ಈ.ತುಕಾರಾಂ ಮತ್ತು ಪರಮೇಶ್ವರ ನಾಯ್ಕ ಸಚಿವರಾದ ಬಳಿಕ ಮೂಡಿದ್ದ ಅಸಮಾಧಾನ ಕರಗಿಲ್ಲ. ಆನಂದ್‌ಸಿಂಗ್‌ ಅವರ ಮೇಲಿನ ಹಲ್ಲೆ ಪ್ರಕರಣದಲ್ಲಿ ಗಣೇಶ್‌ ಜೈಲು ಸೇರಿರುವುದು ಹಾಗೂ ಅವರನ್ನು ಪಕ್ಷದಿಂದ ಅಮಾನತ್ತು ಮಾಡಿರುವುದು ಕಂಪ್ಲಿಯಲ್ಲಿ ಕಾಂಗ್ರೆಸ್‌ ಬಲವನ್ನು ಉಡುಗಿಸಿದೆ.

‘ಗ್ರಾಮಾಂತರ ಕ್ಷೇತ್ರಗಳ ಪ್ರಚಾರ ಸಮಿತಿ ಅಧ್ಯಕ್ಷ ಸಿರಾಜ್‌ ಶೇಖ್‌ ಅವರನ್ನು ಪಕ್ಷದಿಂದ ಅಮಾನತು ಮಾಡದಿದ್ದರೆ ಉಗ್ರಪ್ಪ ಪರ ಪ್ರಚಾರ ಮಾಡಲು ಯೋಚಿಸಬೇಕಾಗುತ್ತದೆ’ ಎಂದಿದ್ದ ಭೀಮಾನಾಯ್ಕ, ‘ಪಕ್ಷ ಬಿಡುವುದಿಲ್ಲ’ ಎಂದಿರುವ ನಾಗೇಂದ್ರ, ಅನಾರೋಗ್ಯದ ನಡುವೆ ಆನಂದ್‌ಸಿಂಗ್ ಪ್ರಚಾರದಲ್ಲಿದ್ದರೂ, ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದೆ. ಆರು ಶಾಸಕರಿದ್ದರೂ,ಚುನಾವಣೆ ಸಂದರ್ಭದಲ್ಲಿ ಏರ್ಪಟ್ಟಿರುವ ರಾಜಕೀಯ ಬೆಳವಣಿಗೆಗಳಿಂದ, ಕಾಂಗ್ರೆಸ್‌ ಒಡಕು ಮನೆಯಂತಾಗಿದೆ.

ಇಂಥ ಸನ್ನಿವೇಶದಲ್ಲೇ ಉಗ್ರಪ್ಪ ಅವರಿಗೆ, ಇಬ್ಬರೇ ಶಾಸಕರುಳ್ಳ ಬಿಜೆಪಿಯೇ ದೊಡ್ಡ ಸವಾಲಾಗಿದೆ. ಉಪ ಚುನಾವಣೆಯಲ್ಲಿ ಜೆ.ಶಾಂತಾ ಅವರನ್ನು ಸೋಲಿಸಿದಷ್ಟು ಸಲೀಸು ವಾತಾವರಣವಿಲ್ಲ.

ಅವರ ಪಕ್ಷದ, ಜಿಲ್ಲೆಯ ಮಾಜಿ ಸಚಿವರೊಬ್ಬರು ಹೇಳುವಂತೆ, ‘ಉಗ್ರಪ್ಪ ಈ ಚುನಾವಣೆಯನ್ನು ಸಲೀಸಾಗಿ ತೆಗೆದುಕೊಳ್ಳುವಂತಿಲ್ಲ. ಉಪಚುನಾವಣೆಯಲ್ಲಿ ಗಳಿಸಿದಷ್ಟೇ ಮತಗಳಿಕೆ ಈ ಬಾರಿ ಅಸಾಧ್ಯ. ಮೋದಿ ಅಲೆಯೊಂದಿಗೆ ಬಿಜೆಪಿಗೆ ಹಣದ ಬಲವೂ ಸೇರಿಕೊಂಡಿದೆ’.

ಚುನಾವಣೆ ಘೋಷಣೆಯಾಗುವ 10 ದಿನಕ್ಕೆ ಮುಂಚೆ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ ದೇವೇಂದ್ರಪ್ಪ, ಟಿಕೆಟ್‌ಗಾಗಿಯೇ ಬಿಜೆಪಿ ಸೇರಿದ ನಾಗೇಂದ್ರ ಸೋದರ ಬಿ.ವೆಂಕಟೇಶ ಪ್ರಸಾದ್ ಅವರನ್ನೂ ಮೀರಿದ ಪ್ರಭಾವ ಬಳಸಿ ಟಿಕೆಟ್‌ ಗಿಟ್ಟಿಸಿಕೊಂಡವರು.

ಜಾರಕಿಹೊಳಿ ಕುಟುಂಬದ ಮಗಳು ದೇವೇಂದ್ರಪ್ಪ ಅವರ ಸೊಸೆ. ಪತ್ನಿ ಸುಶೀಲಮ್ಮ ಕಾಂಗ್ರೆಸ್‌ನಲ್ಲಿದ್ದು, ಹರಪನಹಳ್ಳಿಯ ಅರಸೀಕೆರೆ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯೆ. ಅವರದ್ದು ಈಗ ಒಂದು ಮನೆ ಎರಡು ಪಕ್ಷ.

‘ಕ್ಷೇತ್ರ ಪುನರ್‌ವಿಂಗಡಣೆಗೂ ಮುನ್ನ ಬಳ್ಳಾರಿಗೆ ಸೇರಿದ್ದ (ಈಗ ಮತ್ತೆ ಸೇರ್ಪಡೆಗೊಂಡಿದೆ) ಹರಪನಹಳ್ಳಿ ಭಾಗದಿಂದ ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದೆ. ಇಲ್ಲಿ ನನಗೆ ಬಹಳಷ್ಟು ನೆಂಟರಿದ್ದಾರೆ’ ಎಂಬ ಮಾತನ್ನು ಮುಂದಿಟ್ಟಿರುವ ದೇವೇಂದ್ರಪ್ಪ ಕ್ಷೇತ್ರದಲ್ಲಿ ಅಪರಿಚಿತರಂತೆಯೇ ಕಾಣುತ್ತಿದ್ದಾರೆ. ಅದನ್ನು ಮೀರಿ ನಿಲ್ಲಲು ಅವರು ‘ಮೋದಿ ಮಂತ್ರ’ದ ಮೊರೆ ಹೋಗಿದ್ದಾರೆ.

ಅವರ ಎದುರು, ಕೇವಲ ಆರು ತಿಂಗಳ ಸಂಸದರಾಗಿ ಉಗ್ರಪ್ಪ, ಸಂಸತ್ತಿನಲ್ಲಿ ದನಿಯೆತ್ತಿದ ರೀತಿ, ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿದ ಜನಪರ ನಿಲುವುಗಳೇ ಹೆಚ್ಚು ಹೊಳೆಯುತ್ತಿವೆ. ‘ಆರು ತಿಂಗಳಲ್ಲಿ ಜನ ನನ್ನ ಕಾರ್ಯವೈಖರಿಯನ್ನು ನೋಡಿದ್ದಾರೆ.ಗೆಲ್ಲಲು ಅಷ್ಟೇ ಸಾಕು’ ಎಂಬುದು ಉಗ್ರಪ್ಪ ವಿಶ್ವಾಸ. ‘ಒಮ್ಮೆ ಗೆಲ್ಲಿಸಿ, ಕ್ಷೇತ್ರವನ್ನು ಹೇಗೆ ಬದಲಾಯಿಸುವೆ ನೋಡಿ’ ಎಂದು ದೇವೇಂದ್ರಪ್ಪ ಮತ ಯಾಚಿಸುತ್ತಿದ್ದಾರೆ.

ಜೆಡಿಎಸ್‌ ದುರ್ಬಲ: ಇಂಥ ಸನ್ನಿವೇಶದಲ್ಲಿ, ಉಗ್ರಪ್ಪಗೆ ಬೆಂಬಲ ನೀಡಲು ನಿಂತಿರುವ ಜೆಡಿಎಸ್‌ ಇಡೀ ಕ್ಷೇತ್ರದಲ್ಲಿ ದುರ್ಬಲವಾಗಿದೆ. ಸಭೆ, ರೋಡ್‌ಶೋ, ಸಮಾರಂಭಗಳಲ್ಲಿ ಪಕ್ಷದ ಕೆಲವೇ ಮುಖಂಡರು ಬಿಟ್ಟರೆ, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿಲ್ಲ. ಇದನ್ನು ಕಾಂಗ್ರೆಸ್‌ ಕೂಡ ಗಂಭೀರವಾಗಿ ಪರಿಗಣಿಸದೆ, ಆಕ್ಷೇಪಿಸದೆ, ತನ್ನ ಪಾಡಿಗೆ ತಾನು ಪ್ರಚಾರ ಯಾತ್ರೆ ನಡೆಸುತ್ತಿದೆ.

2018ರ ಉಪಚುನಾವಣೆಗೂ ಮುನ್ನ, 17 ಚುನಾವಣೆಗಳ ಪೈಕಿ 14ರಲ್ಲಿ ಸತತವಾಗಿ ಗೆದ್ದಿದ್ದ ಕಾಂಗ್ರೆಸ್‌ 14 ವರ್ಷದಿಂದ ಅಜ್ಞಾತವಾಸದಲ್ಲಿತ್ತು. ಉಪ ಚುನಾವಣೆ ಅದಕ್ಕೆ ಮುಕ್ತಾಯ ಹಾಡಿತ್ತು. ‘ಆರು ತಿಂಗಳಿಗಲ್ಲ, ಐದೂವರೆ ವರ್ಷಕ್ಕೆ ಉಗ್ರಪ್ಪನವರಿಗೆ ಮತ ಕೊಡಿ’ ಎಂದು ಮೈತ್ರಿ ಸರ್ಕಾರ ಕೇಳಿತ್ತು. ಜನರೂ ಕೊಟ್ಟಿದ್ದರು. ಆರು ತಿಂಗಳ ಬಳಿಕ ಬಂದ ಚುನಾವಣೆ ಎರಡೂ ಪಕ್ಷಗಳಿಗೆ ಅಗ್ನಿಪರೀಕ್ಷೆಯಂತಾಗಿದೆ.

ಮೋದಿ ಅಲೆ ಇದ್ದರೆ ದೇವೇಂದ್ರಪ್ಪ ಯಾಕೆ?

‘ಮೋದಿ ಅಲೆಯಿಂದ ಗೆಲ್ಲುತ್ತೇವೆ ಎಂದು ದೇವೇಂದ್ರಪ್ಪ ಸೇರಿ ಬಿಜೆಪಿಯ ಎಲ್ಲ ಮುಖಂಡರೂ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಮೋದಿ ಅಲೆ ಇದ್ದ ಮೇಲೆ ದೇವೇಂದ್ರಪ್ಪನವರನ್ನೇ ಏಕೆ ಕಾಂಗ್ರೆಸ್‌ನಿಂದ ಕರೆತಂದು ಕಣಕ್ಕೆ ಇಳಿಸಬೇಕಾಗಿತ್ತು? ಪಕ್ಷದಲ್ಲಿ ಬೇರೆ ಯಾರೂ ಇರಲಿಲ್ಲವೇ? ತಮ್ಮದೇ ಪಕ್ಷದಲ್ಲಿದ್ದ ಆಕಾಂಕ್ಷಿಗಳಲ್ಲೊಬ್ಬರಿಗೋ, ಸಾಮಾನ್ಯ ಕಾರ್ಯಕರ್ತರೊಬ್ಬರಿಗೋ ಅಥವಾ ಆರ್‌ಎಸ್‌ಎಸ್‌ನ ಯುವಕರಿಗೋ ಟಿಕೆಟ್‌ ನೀಡಬಹುದಿತ್ತಲ್ಲಾ’ ಎಂಬುದು ಉಗ್ರಪ್ಪನವರ ಆಕ್ಷೇಪಣೆ.

ಅದಕ್ಕೆ, ‘ದೇವೇಂದ್ರಪ್ಪ ಹೈಕಮಾಂಡ್‌ ಆಯ್ಕೆ. ಉಗ್ರಪ್ಪ ಆಕ್ಷೇಪಣೆಗೆ ಮೋದಿ ಅಲೆಯೇ ಉತ್ತರ’ ಎಂಬುದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಶ್ರೀರಾಮುಲು ಎದುರುತ್ತರ. ಉಪ ಚುನಾವಣೆಯ ಸೋಲಿನಿಂದ ಪಕ್ಷವನ್ನು ಮತ್ತೆ ಮೇಲಕ್ಕೆತ್ತುವ ಹೊಣೆಯೂ ಅವರ ಮೇಲಿದೆ.

**

ಬಿಜೆಪಿ ಸೇರಿ ಮೋದಿ ಮಂತ್ರವನ್ನು ದೇವೇಂದ್ರಪ್ಪ ಹೇಳಿದ ಮಾತ್ರಕ್ಕೆ ಜನ ವೋಟು ಹಾಕುತ್ತಾರೆಯೇ? ನನ್ನನ್ನು ಜನ ಕಡೆಗಣಿಸಲು ಕಾರಣಗಳೇ ಇಲ್ಲ.
-ವಿ.ಎಸ್‌.ಉಗ್ರಪ್ಪ,ಕಾಂಗ್ರೆಸ್‌ ಅಭ್ಯರ್ಥಿ

**

ಉಪಚುನಾವಣೆಯಲ್ಲಿ ಬಿಜೆಪಿ ಸೋತಿತೆಂದ ಮಾತ್ರಕ್ಕೆ ಜನ ಬದಲಾವಣೆ ಬಯಸುವುದಿಲ್ಲ ಎನ್ನಲಾಗುತ್ತದೆಯೇ? ಮೋದಿ ಅಲೆಯೇ ನನಗೆ ಶ್ರೀರಕ್ಷೆ.
-ವೈ.ದೇವೇಂದ್ರಪ್ಪ, ಬಿಜೆಪಿ ಅಭ್ಯರ್ಥಿ

**
ಹಳಿಯುವ ಭಾಷಣಗಳಿಗಿಂತಲೂ, ಅಭಿವೃದ್ಧಿಯ ಕನಸುಗಳ ಬಗ್ಗೆ ಅಭ್ಯರ್ಥಿಗಳು ಮಾತನಾಡಬೇಕು. ಇಲ್ಲವಾದರೆ ಪ್ರಜಾಪ್ರಭುತ್ವದ ಅಂದ ಮತ್ತು ಅರ್ಥ ಎರಡೂ ಕೆಡುತ್ತದೆ.
-ಡಾ.ಟೇಕೂರು ರಾಮನಾಥ್, ವೈದ್ಯರು

**
ರೈತರ ಏಳ್ಗೆ, ಯುವಜನರ ಶಿಕ್ಷಣ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಿ ತಮ್ಮ ಕ್ಷೇತ್ರವನ್ನು ಮಾದರಿ ಮಾಡುವಂಥ ಕನಸು ಎಲ್ಲ ಸಂಸದರಲ್ಲೂ ಮೂಡಿಬರಬೇಕು.
-ಸುಜಾತ ಜಿ.ಜೆ., ಕೂಡ್ಲಿಗಿ

ಬಳ್ಳಾರಿ ಲೋಕಸಭಾ ಕ್ಷೇತ್ರದ ಇನ್ನಷ್ಟು ಚುನಾವಣಾ ಸುದ್ದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT