ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಲ್ಲಿ ಮಣ್ಣಾದ ಹುತಾತ್ಮ ಯೋಧ

ಅಮರ್‌ ರಹೇ.. ಅಮರ್‌ ರಹೇ.. ವೀರ್‌ ಸೈನಿಕ ಲೇಪಾಕ್ಷಿ ಅಮರ್‌ ರಹೇ ಘೋಷಣೆ ಕೂಗಿದ ಜನ
Last Updated 4 ಆಗಸ್ಟ್ 2019, 10:47 IST
ಅಕ್ಷರ ಗಾತ್ರ

ಹೊಸಪೇಟೆ: ‘ಅಮರ್‌ ರಹೇ.. ಅಮರ್‌ ರಹೇ.. ವೀರ್‌ ಜವಾನ್‌ ಅಮರ್‌ ರಹೇ, ಲೇಪಾಕ್ಷಿ ಅಮರ್‌ ರಹೇ, ಭಾರತ್‌ ಮಾತಾ ಕೀ ಜೈ...

ಕಣ್ಣಾಲಿಗಳು ಒದ್ದೆಯಾದರೂ ಕೈಯಲ್ಲಿ ತ್ರಿವರ್ಣ ಧ್ವಜಗಳನ್ನು ಹಿಡಿದುಕೊಂಡು ಜನ ಹುರುಪಿನಿಂದ ಮೇಲಿನಂತೆ ಘೋಷಣೆಗಳನ್ನು ಕೂಗುತ್ತ ಹೆಜ್ಜೆ ಹಾಕಿದರು. ರಾಷ್ಟ್ರ ಧ್ವಜ ಹಾಗೂ ಹೂಗಳಿಂದ ಅಲಂಕರಿಸಿದ ವಾಹನದಲ್ಲಿ ಹುತಾತ್ಮ ಯೋಧನ ಪಾರ್ಥೀವ ಶರೀರ ಬರುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನ ಕೈಮುಗಿದು ಗೌರವ ಸೂಚಿಸಿದರು. ಹೂಮಾಲೆ ಹಾಕಿ ಅಂತಿಮ ನಮನ ಸಲ್ಲಿಸಿದರು. ತುಂತುರು ಮಳೆಯನ್ನೂ ಲೆಕ್ಕಿಸದೆ ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಭಾನುವಾರ ನಡೆದ ಗಡಿ ಭದ್ರತಾ ಪಡೆಯ (ಬಿ.ಎಸ್‌.ಎಫ್‌.) ಯೋಧ ವರದ ಲೇಪಾಕ್ಷಿ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳಿವು.

ರಾಜಸ್ತಾನದ ಬಿಕನೇರ ಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಲೇಪಾಕ್ಷಿ ಅವರು ಶುಕ್ರವಾರ ಹೃದಯಾಘಾತದಿಂದ ನಿಧನ ಹೊಂದಿದರು. ಶನಿವಾರ ರಾತ್ರಿ ನಗರದ ಜಂಬುನಾಥ ರಸ್ತೆಯಲ್ಲಿರುವ ಅವರ ಮನೆಗೆ ಪಾರ್ಥೀವ ಶರೀರ ತರಲಾಯಿತು. ಈ ವೇಳೆ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಲೇಪಾಕ್ಷಿ ಅವರ ಪತ್ನಿ ಲತಾ, ಹಾಗೂ ಅವರ ಇಬ್ಬರು ಮಕ್ಕಳಾದ ಪ್ರಜ್ವಲ್‌,ಪ್ರಗತಿ, ಪಾರ್ಥೀವ ಶರೀರವನ್ನು ಬಿಗಿದಪ್ಪಿಕೊಂಡು ಬಿಕ್ಕಿಬಿಕ್ಕಿ ಅತ್ತರು. ಈ ಸಂದರ್ಭದಲ್ಲಿ ಅಲ್ಲಿದ್ದವರ ಕಣ್ಣಾಲಿಗಳು ಒದ್ದೆಯಾಗಿದ್ದವು. ದುಃಖದ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿದು ಸುತ್ತಮುತ್ತಲಿನ ಬಡಾವಣೆಗಳಿಂದ ಜನ ಬಂದು ಗೌರವ ಸೂಚಿಸಿ ಹೋದರು. ತಡರಾತ್ರಿಯ ವರೆಗೆ ಇದು ಮುಂದುವರೆದಿತ್ತು. ಬೆಳಿಗ್ಗೆ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿರುವ ಟೌನ್‌ ರೀಡಿಂಗ್‌ ರೂಂನಲ್ಲಿ ಸಾರ್ವಜನಿಕ ದರ್ಶನಕ್ಕೆ ಪಾರ್ಥೀವ ಶರೀರ ಇಡಲಾಯಿತು. ನಗರಸಭೆ ಪೌರಾಯುಕ್ತ ವಿ. ರಮೇಶ, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರು ಮಾಲಾರ್ಪಣೆ ಮಾಡಿ ತಾಲ್ಲೂಕು ಆಡಳಿತದ ಪರವಾಗಿ ಗೌರವ ಸಲ್ಲಿಸಿದರು.

ನಂತರ ಅಮರ್‌ ರಹೇ.. ಅಮರ್‌ ರಹೇ.. ಲೇಪಾಕ್ಷಿ ಅಮರ್‌ ರಹೇ.., ಭಾರತ್‌ ಮಾತಾ ಕೀ ಜೈ ಘೋಷಣೆಗಳು ಮೊಳಗಿದವು. ತ್ರಿವರ್ಣ ಧ್ವಜ ಹೊದಿಸಿದ ಶವಪೆಟ್ಟಿಗೆಯನ್ನು ಹೂ, ರಾಷ್ಟ್ರ ಧ್ವಜಗಳಿಂದ ಅಲಂಕರಿಸಿದ ವಾಹನದಲ್ಲಿ ಇರಿಸಲಾಯಿತು. ಬಳಿಕ ಅಲ್ಲಿಂದ ಪುಣ್ಯಮೂರ್ತಿ ವೃತ್ತ, ರೋಟರಿ ವೃತ್ತ, ಮದಕರಿ ನಾಯಕ ವೃತ್ತ, ವಾಲ್ಮೀಕಿ ವೃತ್ತ, ಸಂಡೂರು ರಸ್ತೆ ಮೂಲಕ ಹಾದು ಆಕಾಶವಾಣಿ ಬಡಾವಣೆಯಲ್ಲಿರುವ ಸಾರ್ವಜನಿಕ ರುದ್ರಭೂಮಿ ವರೆಗೆ ಮೆರವಣಿಗೆಯಲ್ಲಿ ಪಾರ್ಥೀವ ಶರೀರ ಕೊಂಡೊಯ್ಯಲಾಯಿತು.

ಅಲ್ಲಿ ಜಿಲ್ಲಾ ಪೊಲೀಸರು ಹಾಗೂ ಗಡಿ ಭದ್ರತಾ ಪಡೆಯ ಯೋಧರು ತಲಾ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸೂಚಿಸಿದರು. ನಂತರ ಪದ್ಮಶಾಲಿ ಸಮಾಜದ ವಿಧಿ ವಿಧಾನದ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಈ ವೇಳೆ ಮತ್ತೆ ಲೇಪಾಕ್ಷಿ ಪರ ಘೋಷಣೆಗಳು ಮೊಳಗಿದವು.

ಜೈನ ಸಮಾಜದ ಮುಖಂಡರಾದ ಭವರ್‌ ಲಾಲ್‌, ಬಾಬುಲಾಲ್‌ ಜೈನ್‌, ರಜಪೂತ ಸಮಾಜದ ಅಶೋಕ್‌ ಮೋದಿ, ಜಿತೇಂದ್ರ ಸಿಂಗ್‌, ಶೇರ್‌ ಸಿಂಗ್‌, ಸುಖದೇವ್‌ ಸಿಂಗ್‌, ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ಸಂದೀಪ್‌ ಸಿಂಗ್‌, ರತನ್‌ ಸಿಂಗ್‌, ಶ್ರೀನಿವಾಸ್‌ ರಾಯಸಂ, ಎನ್‌. ವೆಂಕಟೇಶ, ಜೀವರತ್ನಂ, ಪ್ರಕಾಶ, ಮಧುರಚೆನ್ನ ಶಾಸ್ತ್ರಿ, ಬಸವರಾಜ ನಾಲತ್ವಾಡ, ಗುದ್ಲಿ ಪರಶುರಾಮಪ್ಪ, ಪ್ರವೀಣ, ಖಾರದಪುಡಿ ಮಹೇಶ, ನಿಂಬಗಲ್‌ ರಾಮಕೃಷ್ಣ, ಗುಜ್ಜಲ್‌ ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT