ಮಂಗಳವಾರ, ಆಗಸ್ಟ್ 16, 2022
21 °C
ಹರಪನಹಳ್ಳಿ, ಹೂವಿನಹಡಗಲಿಯಲ್ಲಿ ಬೆರಳೆಣಿಕೆ ನೌಕರರು ಕೆಲಸಕ್ಕೆ ಹಾಜರು

ಹೊಸಪೇಟೆಯಲ್ಲಿ ಪೊಲೀಸರ ಕಾವಲಿನಲ್ಲಿ ಬಸ್‌ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಬಹುತೇಕ ಬೇಡಿಕೆಗಳನ್ನು ಸರ್ಕಾರ ಈಡೇರಿಸಿರುವುದರಿಂದ ಸಾರಿಗೆ ನೌಕರರು ಸೋಮವಾರ ಕೆಲಸಕ್ಕೆ ಮರಳಿದ್ದು, ಹೆಚ್ಚಿನ ಕಡೆಗಳಲ್ಲಿ ಬಸ್‌ ಸಂಚಾರ ಆರಂಭಗೊಂಡಿದೆ.

ಹೊಸಪೇಟೆ ವಿಭಾಗ ವ್ಯಾಪ್ತಿಯ ಸಂಡೂರು, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ ನಿಲ್ದಾಣದಿಂದ ಬಹುತೇಕ ಎಲ್ಲ ಕಡೆಗಳಿಗೆ ಬಸ್‌ಗಳು ಸಂಚರಿಸುತ್ತಿವೆ. ಆದರೆ, ಹೂವಿನಹಡಗಲಿ, ಹರಪನಹಳ್ಳಿಯಲ್ಲಿ ಇನ್ನು ಕೆಲ ನೌಕರರು ಮುಷ್ಕರ ಬೆಂಬಲಿಸಿ ಕೆಲಸಕ್ಕೆ ಗೈರಾಗಿದ್ದಾರೆ. ಹಾಗಾಗಿ ಅಲ್ಲಿ ಪೂರ್ಣ ಪ್ರಮಾಣದಲ್ಲಿ ಬಸ್‌ ಸಂಚಾರ ಇದುವರೆಗೆ ಆರಂಭಗೊಂಡಿಲ್ಲ. ಬೆರಳೆಣಿಕೆಯಷ್ಟೇ ಬಸ್‌ಗಳು ಸಂಚರಿಸುತ್ತಿದ್ದು, ಪ್ರಯಾಣಿಕರ ಪರದಾಟ ತಪ್ಪಿಲ್ಲ.

ಹೊಸಪೇಟೆ ಕೇಂದ್ರ ಬಸ್‌ ನಿಲ್ದಾಣದಿಂದ ಭಾನುವಾರ ರಾತ್ರಿ ಮೂರು ಬಸ್‌ಗಳು ಪ್ರಯಾಣ ಬೆಳೆಸಿದ್ದವು. ಬಳಿಕ ಹೆಚ್ಚಿನ ಪ್ರಯಾಣಿಕರು ನಿಲ್ದಾಣದ ಕಡೆಗೆ ಸುಳಿಯದ ಕಾರಣ ಬಸ್‌ ಬಿಟ್ಟಿರಲಿಲ್ಲ. ಸೋಮವಾರ ಬೆಳಿಗ್ಗೆ ನಗರ ಸಾರಿಗೆ ಸೇರಿದಂತೆ ಎಲ್ಲ ಕಡೆಗಳಿಗೆ ಬಸ್‌ಗಳು ಸಂಚಾರ ಆರಂಭಿಸಿವೆ.

ಬಸ್‌ ನಿಲ್ದಾಣದ ಸುತ್ತ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಇಷ್ಟೇ ಅಲ್ಲ, ಪ್ರತಿಯೊಂದು ಬಸ್ಸಿಗೆ ನಿಲ್ದಾಣದಿಂದ ಊರು ದಾಟುವವರೆಗೆ ಪೊಲೀಸ್‌ ಭದ್ರತೆ ಒದಗಿಸಲಾಗುತ್ತಿದೆ. ಆಯಾ ಠಾಣೆ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಎಲ್ಲ ಬಸ್‌ಗಳಿಗೆ ಪೊಲೀಸರು ಭದ್ರತೆ ಕಲ್ಪಿಸಿದ್ದಾರೆ.

ನಿಲ್ದಾಣದಲ್ಲಿ ಜನಜಾತ್ರೆ:

ಮುಷ್ಕರ ಕೈಬಿಟ್ಟು ಹೆಚ್ಚಿನ ನೌಕರರು ಕೆಲಸಕ್ಕೆ ಮರಳಿರುವ ವಿಷಯ ಗೊತ್ತಾಗುತ್ತಿದ್ದಂತೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನ ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದು ಅವರ ಊರುಗಳಿಗೆ ತೆರಳಿದರು.

ಬೆಳಿಗ್ಗೆಯಿಂದಲೇ ನಿಲ್ದಾಣದಲ್ಲಿ ಜನಜಾತ್ರೆ ಕಂಡು ಬಂತು. ಪ್ರತಿಯೊಂದು ಬಸ್‌ಗಳಲ್ಲಿ ಜನದಟ್ಟಣೆ ಇತ್ತು. ಮೂರು ದಿನಗಳ ಮುಷ್ಕರದಿಂದ ದೈನಂದಿನ ಕೆಲಸಕ್ಕೆ ಹೋಗುವವರು ತೀವ್ರ ಪರದಾಟ ನಡೆಸಿದ್ದರು. ಖಾಸಗಿ ವಾಹನಗಳವರಿಗೆ ಹೆಚ್ಚಿನ ದುಡ್ಡು ಕೊಟ್ಟು ಪ್ರಯಾಣ ಬೆಳೆಸಿದ್ದರು. ಬಸ್‌ ಸಂಚಾರ ಆರಂಭಗೊಂಡಿದ್ದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸೋಮವಾರ ದಿನವಿಡೀ ಜನದಟ್ಟಣೆ ಇತ್ತು. ಮೂರು ದಿನ ಕೈತುಂಬ ಹಣ ಗಳಿಸಿದ್ದ ಮ್ಯಾಕ್ಸಿಕ್ಯಾಬ್‌, ಕ್ರೂಸರ್‌, ಆಟೊದವರ ಕಡೆ ಪ್ರಯಾಣಿಕರು ಸುಳಿಯಲಿಲ್ಲ.

‘ಸಾರಿಗೆ ಸಂಸ್ಥೆ ಜನರ ಜೀವನಾಡಿ. ಖಾಸಗಿಯವರು ಏನಿದ್ದರೂ ಹಣ ಸುಲಿಯುವವರು. ಜನಸಾಮಾನ್ಯರಿಗೆ ತೀರ ಅಗತ್ಯವಾದ ಸೇವೆಗಳಲ್ಲಿ ವ್ಯತ್ಯಯವಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಬಹಳ ತೊಂದರೆ ಎದುರಾಗುತ್ತದೆ’ ಎಂದು ಬಸ್‌ ಪ್ರಯಾಣಿಕ ಬಸವರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು