ಸೋಮವಾರ, ಆಗಸ್ಟ್ 8, 2022
21 °C
ಹೊಸಪೇಟೆಯಲ್ಲಿ ದಿನವಿಡೀ ಪರದಾಟ ನಡೆಸಿದ ಪ್ರಯಾಣಿಕರು

ಚಾಲಕ, ನಿರ್ವಾಹಕರು ಗೈರು; ರಸ್ತೆಗಿಳಿಯದ ಹೆಚ್ಚಿನ ಬಸ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದಾದ್ಯಂತ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿ ಇಲ್ಲಿನ ಉಪವಿಭಾಗದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರು ಶುಕ್ರವಾರ ಕೆಲಸಕ್ಕೆ ಗೈರಾಗಿದ್ದರಿಂದ ಹೆಚ್ಚಿನ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ.

ಕೆಎಸ್‌ಆರ್‌ಟಿಸಿ ಯೂನಿಯನ್‌ನವರು ಹೋರಾಟಕ್ಕೆ ಬೆಂಬಲ ಸೂಚಿಸಿರಲಿಲ್ಲ. ಅಷ್ಟೇ ಅಲ್ಲ, ಅವರು ಕೆಲಸಕ್ಕೆ ಹಾಜರಾಗಿದ್ದರಿಂದ ಕೆಲವೊಂದು ಭಾಗಗಳಲ್ಲಿ ಸೀಮಿತ ಬಸ್‌ ಸಂಚಾರ ಇತ್ತು. ಆದರೆ, ಹೆಚ್ಚಿನ ಸಿಬ್ಬಂದಿ ಹೋರಾಟ ಬೆಂಬಲಿಸಿ ಕೆಲಸಕ್ಕೆ ಗೈರಾಗಿದ್ದರಿಂದ ಬಹುತೇಕ ಕಡೆಗಳಿಗೆ ಬಸ್‌ ಸಂಚಾರ ಇರಲಿಲ್ಲ.

ಹೆಚ್ಚಿನ ಕಡೆ ಬಸ್‌ ಸಂಚಾರ ಇರದ ಕಾರಣದಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ತಡಹೊತ್ತಿನ ವರೆಗೆ ಬಸ್‌ ನಿಲ್ದಾಣದಲ್ಲೇ ಕಾದು ಕುಳಿತಿದ್ದರು. ಎಂದಿನಂತೆ ಬಸ್‌ ಸಂಚಾರ ಇದೆ ಎಂದು ತಿಳಿದುಕೊಂಡು ಕೆಲವು ಪ್ರಯಾಣಿಕರು ಬಸ್‌ ಒಳಗೆ ಹೋಗಿ ಕುಳಿತಿದ್ದರು. ಆದರೆ, ವಿಷಯ ಗೊತ್ತಾಗಿ ಕೆಳಗಿಳಿದು ಹೋದರು. ಕೆಲವರು ಮನೆ ಕಡೆ ಮುಖ ಮಾಡಿದರೆ, ಕೆಲವು ಜನ ಖಾಸಗಿ ವಾಹನಗಳ ಮೂಲಕ ಬೇರೆಡೆ ತೆರಳಿದರು.

ದಿನವಿಡೀ ಜನ ಬೇರೆ ಬೇರೆ ಭಾಗಗಳಿಂದ ಬಸ್‌ ನಿಲ್ದಾಣಕ್ಕೆ ಬಂದು, ಬಸ್‌ ಓಡಾಡದೇ ಇರುವ ವಿಷಯ ತಿಳಿದು ಹಿಂತಿರುಗುತ್ತಿರುವುದು ಸಾಮಾನ್ಯವಾಗಿತ್ತು.

‘ಹೋರಾಟದ ಕುರಿತು ಕೊನೆಯ ಕ್ಷಣದಲ್ಲಿ ನಮಗೆ ಮಾಹಿತಿ ಲಭ್ಯವಾಯಿತು. ಹೀಗಾಗಿ ಬೆಳಿಗ್ಗೆ 9ಗಂಟೆಗೆ ಕೆಲಸದಿಂದ ದೂರ ಉಳಿದೆವು’ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೋರಾಟಕ್ಕೆ ನಮ್ಮ ಬೆಂಬಲ ಇರಲಿಲ್ಲ. ನಾವು ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದೇವೆ’ ಎಂದು ಕೆಎಸ್‌ಆರ್‌ಟಿಸಿ ಯೂನಿಯನ್‌ ಅಧ್ಯಕ್ಷ ಶ್ರೀನಿವಾಸ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು