ಮಂಗಳವಾರ, ಫೆಬ್ರವರಿ 25, 2020
19 °C

ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ 'ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ' ಸಂಘಟನೆಯ ಕಾರ್ಯಕರ್ತರು ಮಂಗಳವಾರ ಇಲ್ಲಿನ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

'ಬೇಡ ಬೇಡ ತಿದ್ದುಪಡಿ ಕಾಯ್ದೆ ಬೇಡ' , 'ದೇಶ ವಿಭಜಿಸುವ ಕಾಯ್ದೆ ಬೇಡವೇ ಬೇಡ' ಎಂದು ಘೋಷಣೆಗಳನ್ನು ಕೂಗಿದರು. ಮಸೂದೆಯ ಪ್ರತಿಗಳನ್ನು ಹರಿದು, ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.

ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಲ್ತಾಫ್ ಮಾತನಾಡಿ, ‘ಮೋದಿ ಸರ್ಕಾರ ತರಲು ಹೊರಟಿರುವ ಕಾಯ್ದೆ ಜನವಿರೋಧಿಯಾಗಿದೆ. ಇದು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಹುನ್ನಾರ. ಪ್ರಜಾಪ್ರಭುತ್ವ, ಜಾತ್ಯತೀತ ರಾಷ್ಟ್ರದಲ್ಲಿ ಈ ತರಹದ ತಾರತಮ್ಯವೇಕೇ?' ಎಂದು ಪ್ರಶ್ನಿಸಿದರು.

‘ಕೇಂದ್ರ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದ ನಿರ್ದಿಷ್ಟವಾದ ಒಂದೇ ಸಮುದಾಯವನ್ನು ಗುರಿ ಮಾಡುತ್ತಿದೆ. ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ಮಾಡುವ ಹುನ್ನಾರ ನಡೆಸುತ್ತಿದ್ದು, ಇದು ಖಂಡನಾರ್ಹ’ ಎಂದರು.

‘ಜನರ ಸಂವಿಧಾನಬದ್ಧವಾದ ಹಕ್ಕು ಮೊಟಕುಗೊಳಿಸುವ ಅಧಿಕಾರ ಯಾರಿಗೂ ಇಲ್ಲ. ಮಸೂದೆ ವಿರುದ್ಧ ಹಂತ ಹಂತವಾಗಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು.

ಮುಖಂಡ ಜಾಫರ್ ಮಾತನಾಡಿ, 'ಇಡೀ ಜಗತ್ತಿನಲ್ಲಿಯೇ ಭಾರತವನ್ನು ಜಾತ್ಯತೀತ ರಾಷ್ಟ್ರವೆಂದು ಗುರುತಿಸಲಾಗುತ್ತದೆ. ಆದರೆ, ಬಿಜೆಪಿ ನೇತೃತ್ವದ ಸರ್ಕಾರ ಅದನ್ನು ಹಾಳು ಮಾಡುತ್ತಿದೆ. ಪದೇ ಪದೇ ಒಂದೇ ಸಮುದಾಯವನ್ನು ಗುರಿ ಮಾಡಿ ಅಭದ್ರತೆಯ ಭಾವನೆ ಸೃಷ್ಟಿಸಲಾಗುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಜೆಂಡಾಗಳನ್ನು ಜಾರಿಗೆ ತರುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಲಾಗುತ್ತಿದೆ' ಎಂದು ಟೀಕಿಸಿದರು.

‘ಈ ತಿದ್ದುಪಡಿ ಮಸೂದೆ ಕಾಯ್ದೆಯಾದರೆ ದೇಶದ ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವ ಅಪಾಯವಿದೆ. ಈ ಸರ್ಕಾರ ಅಲ್ಪಸಂಖ್ಯಾತರು, ದಲಿತರ ವಿರುದ್ಧವಾದ ನೀತಿಗಳನ್ನು ಜಾರಿಗೆ ತಂದು ಸಮಾಜ ಒಡೆಯುವ ಕೆಲಸ ಮಾಡುತ್ತಿದೆ' ಎಂದು ಆರೋಪಿಸಿದರು.

ಸಂಘಟನೆಯ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಗೌಸ್, ಕಾರ್ಯದರ್ಶಿ ಸಲೀಂ ಮಲಿಕ್, ಮುಖಂಡರಾದ ಮುಜಿಬುರ್ ರೆಹಮಾನ್, ಮೊಹಮ್ಮದ್ ಸೊಹೆಲ್, ಜಾಫರ್, ಅಲ್ತಾಫ್, ಮೊಯಿನ್ ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು