ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾದ ಚಹರೆ, ಬದಲಾಗದ ಬವಣೆ

ಹೂವಿನಹಡಗಲಿಗೆ ಹೈಟೆಕ್‌ ಸ್ಪರ್ಶ ಸಿಕ್ಕರೂ ಮೂಲಸೌಕರ್ಯ ಮರೀಚಿಕೆ
Last Updated 27 ಮೇ 2019, 19:45 IST
ಅಕ್ಷರ ಗಾತ್ರ

ಹೂವಿನಹಡಗಲಿ: ಎರಡೇ ವರ್ಷದಲ್ಲಿ ಹೂವಿನಹಡಗಲಿ ಗಮನಾರ್ಹ ಬದಲಾವಣೆ ಕಂಡಿದೆ. ಪ್ರಮುಖ ರಸ್ತೆಗಳು ದ್ವಿಪಥಗಳಲ್ಲಿ ಅಭಿವೃದ್ಧಿಯಾಗಿವೆ. ಅಲಂಕಾರಿಕ ಸಾಲು ವಿದ್ಯುತ್ ದೀಪ ಅಳವಡಿಕೆಯಿಂದ ನಗರದ ಕಳೆ ಬಂದಿದೆ. ಮುಖ್ಯ ಬೀದಿಯಲ್ಲಿ ನಿಂತು ನೋಡುವುದಾದರೆ ಮಲ್ಲಿಗೆ ನಗರಿಗೆ ಆಧುನಿಕ ಸ್ಪರ್ಶ ಸಿಕ್ಕಿದೆ.

ಪಟ್ಟಣದ ಹಳೆಓಣಿ, ಬಡಾವಣೆಗಳನ್ನು ಹೊಕ್ಕು ನೋಡಿದರೆ ಪರಿಸ್ಥಿತಿ ಭಿನ್ನವಾಗಿದೆ. ಸಚಿವ ಪಿ.ಟಿ.ಪರಮೇಶ್ವರ ನಾಯ್ಕರ ಅಭಿವೃದ್ಧಿಯ ಕಾಳಜಿಯಿಂದ ಪಟ್ಟಣದ ಮುಖ್ಯ ಬೀದಿಗಳು ಝಗಮಗಿಸುತ್ತಿವೆ. ಪ್ರಮುಖ ವೃತ್ತಗಳಿಗೆ ಹೈಟೆಕ್‌ ಸ್ಪರ್ಶ ಸಿಕ್ಕಿದೆ. ಆದರೆ, ಪಟ್ಟಣದ ಕೆಲ ಪ್ರದೇಶಗಳು ಅಷ್ಟೇ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಹೊರಗೆ ಹೊಳಪು, ಒಳಗೆ ಹುಳುಕು ಎನ್ನುವಂತಾಗಿದೆ.

ಬಡಾವಣೆಗಳ ಕೆಲ ರಸ್ತೆಗಳು ಅಭಿವೃದ್ಧಿಯಾಗಿದ್ದರೆ, ಒಳ ರಸ್ತೆಗಳು ತೀರಾ ಹದಗೆಟ್ಟಿವೆ. ಅಭಿವೃದ್ಧಿಯಾಗದೇ ಉಳಿದಿರುವ ನಜೀರ್‌ ನಗರ, ರಾಜೀವ್‌ ನಗರದ ಒಳ ರಸ್ತೆಗಳು ಮಳೆಗಾಲದಲ್ಲಿ ಕೆಸರುಗದ್ದೆಯಾಗಿ ಮಾರ್ಪಡುತ್ತವೆ. ಕಪ್ಪು ಭೂಮಿಯ ಈ ಪ್ರದೇಶದಲ್ಲಿ ವಾಹನ ಓಡಾಟವಿರಲಿ, ಜನರು ನಡೆದಾಡಲು ತೊಂದರೆ ಪಡುತ್ತಾರೆ.

ರಾಜೀವ್‌ ನಗರ, ನಜೀರ್‌ ನಗರ, ಅಂಬೇಡ್ಕರ್‌ ನಗರ, ಜನತಾ ಪ್ಲಾಟ್‌, ಬಂಗಾರಪ್ಪ ನಗರ ನಿವಾಸಿಗಳು ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ದಿನ ದೂಡುತ್ತಾರೆ. ಎತ್ತರದ ಪ್ರದೇಶದಿಂದ ಬರುವ ಮಳೆ ನೀರು ಮನೆಗಳಿಗೆ ನುಗ್ಗಿ ದೊಡ್ಡ ಅವಾಂತರವನ್ನೇ ಸೃಷ್ಟಿಸುತ್ತದೆ. ಜನತೆ ಪ್ರತಿ ಬಾರಿಯೂ ವಾರ್ಡ್‌ ಸದಸ್ಯರ ಬಳಿ ಅಳಲು ತೋಡಿಕೊಂಡರೂ ಪ್ರಯೋಜನವಾಗಿಲ್ಲ. ಬಹುವರ್ಷಗಳ ಈ ತರಹದ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವಲ್ಲಿ ಪುರಸಭೆ ಸೋತಿದೆ.

ಪುರಸಭೆಯ ಅನುದಾನಗಳನ್ನು ಒಟ್ಟುಗೂಡಿಸಿ ದೊಡ್ಡ ಮೊತ್ತದಲ್ಲಿ ಶಾಶ್ವತ ಪರಿಹಾರ ಕಾಮಗಾರಿ ಕೈಗೊಳ್ಳುವ ಬದಲು ವಾರ್ಡ್‌ ಸದಸ್ಯರು ಅನುದಾನಗಳನ್ನು ತಲಾವಾರು ಹಂಚಿಕೆ ಮಾಡಿಕೊಳ್ಳುತ್ತಾ ಬಂದಿರುವುದು ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ ಎಂದು ಜನರು ದೂರುತ್ತಿದ್ದಾರೆ.

‘ಅವೈಜ್ಞಾನಿಕ ಚರಂಡಿ, ರಸ್ತೆ ನಿರ್ಮಿಸಿರುವುದರಿಂದ ಮಳೆಗಾಲದಲ್ಲಿ ಅಡುಗೆ ಮನೆವರೆಗೂ ನೀರು ನುಗ್ಗುತ್ತದೆ. ಮಕ್ಕಳನ್ನು ಸುರಕ್ಷಿತ ಜಾಗಗಳಿಗೆ ಕಳಿಸಿ ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ. ಈ ಚುನಾವಣೆಯಲ್ಲಿ ಗೆಲ್ಲಿಸ್ರಿ ಸಮಸ್ಯೆ ಬಗೆಹರಿಸ್ತೀವಿ ಅಂತಾ ಓಟು ಹಾಕಿಸಿಕೊಂಡು ಹೋಗ್ತಾರ. ನಂತರ ಈ ಕಡೆ ಸುಳಿಯೋದಿಲ್ಲ’ ಎಂದು ಅಂಬೇಡ್ಕರ್ ನಗರದ ಜ್ಯೋತೆಮ್ಮ, ಲಕ್ಷ್ಮಮ್ಮ, ಶಂಕ್ರಮ್ಮ ಅಸಮಾಧಾನ ತೋಡಿಕೊಂಡರು.

ಹೂವಿನಹಡಗಲಿ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣವಾಗಿದ್ದರೂ ಜನತೆಗೆ ಸಮರ್ಪಕ ಮೂಲಸೌಕರ್ಯಗಳು ಸಿಗುತ್ತಿಲ್ಲ. ಚರಂಡಿಗಳು ದುರ್ನಾತ ಬೀರುತ್ತಿವೆ. ಬೀದಿ ದೀಪ ನಿರ್ವಹಣೆ ಸರಿಯಿಲ್ಲ. ದಶಕ ಕಳೆದರೂ ಒಳಚರಂಡಿ ಯೋಜನೆ ಕೆಲ ಓಣಿಗಳಲ್ಲಿ ಕಾರ್ಯಗತಗೊಂಡಿಲ್ಲ. ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನದ ಬಳಿಕ ನೀರು ಪೂರೈಕೆ ಒಂದಿಷ್ಟು ಸಮಾಧಾನ ತಂದಿದೆ.

ತಾಲ್ಲೂಕು ಕೇಂದ್ರವಾಗಿದ್ದರೂ ಪಟ್ಟಣದಲ್ಲಿ ಒಂದೂ ಮೂತ್ರಾಲಯ ಇಲ್ಲ. ಕೆಲಸ ಕಾರ್ಯ ನಿಮಿತ್ತ ಪಟ್ಟಣಕ್ಕೆ ಬರುವ ಜನರು ಸಂದಿಗೊಂದಿ, ಕಾಂಪೌಂಡ್ ಗೋಡೆಯ ಮರೆಗೆ ಹೋಗುವಂತಾಗಿದೆ. ಜಲಬಾಧೆ ಅನುಭವಿಸಿದ ಜನರು ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಮುಖ್ಯ ರಸ್ತೆಯ ಪಾದಾಚಾರಿ ಮಾರ್ಗಗಳನ್ನು ವ್ಯಾಪಾರಿಗಳು ಆಕ್ರಮಿಸಿದ್ದಾರೆ. ಬ್ಯಾಂಕ್‌ಗಳ ಮುಂಭಾಗದ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದ ಸಂಚಾರಕ್ಕೆ ತೊಡಕುಂಟಾಗಿದೆ. ಪುರಸಭೆಯವರು ತನಗೆ ಸಂಬಂಧವಿಲ್ಲ ಎಂಬಂತೆ ವರ್ತಿಸುವುದರಿಂದ ಇದು ಸಮಸ್ಯೆಯಾಗಿ ಮಾರ್ಪಟ್ಟಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಮಲ್ಲಿಗೆ ನಗರಿಯ ಚಹರೆ ಬದಲಾಗಿದೆ. ಜನರ ಬವಣೆಗಳು ಬದಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT