ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಬದಲಿಸುವುದು ಸುಲಭವಲ್ಲ: ಪ್ರೊ. ಬಾಬು ಮ್ಯಾಥಿವ್‌

12ನೇ ಸಮಾಜಶಾಸ್ತ್ರ ಸಮ್ಮೇಳನದಲ್ಲಿ ಹೇಳಿಕೆ
Last Updated 31 ಆಗಸ್ಟ್ 2018, 11:23 IST
ಅಕ್ಷರ ಗಾತ್ರ

ಹೊಸಪೇಟೆ: ‘ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನವನ್ನು ಬದಲಿಸಿ ಹೊಸ ಸಂವಿಧಾನ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಆದರೆ, ಅದನ್ನು ಬದಲಿಸುವುದು ಅಷ್ಟು ಸುಲಭದ ಮಾತಲ್ಲ’ ಎಂದು ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಸಾರ್ವಜನಿಕ ನೀತಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಪ್ರೊ. ಬಾಬು ಮ್ಯಾಥಿವ್‌ ಹೇಳಿದರು.

ತಾಲ್ಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 12ನೇ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನ ಉದ್ಘಾಟಿಸಿ, ‘ಸಾಮಾಜಿಕ ಸ್ಥಿತ್ಯಂತರ; ಸವಾಲುಗಳು ಮತ್ತು ಸಾಧ್ಯತೆಗಳು’ ಕುರಿತು ಮಾತನಾಡಿದರು.

‘ಯಾರೋ ಇಪ್ಪತ್ತು ಜನರು ಸೇರಿಕೊಂಡು ಈ ದೇಶದ ಸಂವಿಧಾನ ರಚಿಸಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ವಿವಿಧ ಭಾಗದ ರೈತರು, ಕಾರ್ಮಿಕರು, ಹಾಗೂ ಬುದ್ಧಿಜೀವಿಗಳನ್ನು ಒಳಗೊಂಡ ಸಮಿತಿಯಲ್ಲಿ ಕೂಲಂಕಷವಾಗಿ ಚರ್ಚಿಸಿದ ನಂತರ ಅಂಬೇಡ್ಕರ್‌ ಅವರುಸಂವಿಧಾನಕ್ಕೆ ಒಂದು ರೂಪ ಕೊಟ್ಟಿದ್ದಾರೆ. ಅದನ್ನು ಏಕಾಏಕಿ ಬದಲಿಸಲು ಯಾರಿಂದಲೂ ಆಗದು’ ಎಂದರು.

‘ಈ ದೇಶದ ಆದಿವಾಸಿಗಳು, ದಲಿತರು ಹಾಗೂ ಮುಸ್ಲಿಮರು ಇದುವರೆಗೆ ಮುಖ್ಯವಾಹಿನಿಗೆ ಬಂದಿಲ್ಲ. ಹೀಗಿರುವಾಗ ಸಂವಿಧಾನ ಬದಲಿಸುವುದು ಸರಿಯಲ್ಲ. ಸಂವಿಧಾನದಲ್ಲಿರುವ ಕೆಲವೊಂದು ನ್ಯೂನತೆಗಳನ್ನು ಸರಿಪಡಿಸುವ ಕೆಲಸವಾಗಬೇಕೇ ಹೊರತು ಅದನ್ನು ಬದಲಿಸಬಾರದು. ಮೊಹಮ್ಮದ್‌ ಅಲಿ ಜಿನ್ನಾ ಅವರು ಎರಡು ದೇಶಗಳಾಗಬೇಕೆಂದು ಬಯಸಿದ್ದರು. ಆದರೆ, ಸ್ವಾತಂತ್ರ್ಯ ಹೋರಾಟಗಾರರು ಅದನ್ನು ವಿರೋಧಿಸಿದ್ದರು. ಅಷ್ಟೇ ಅಲ್ಲ, ಎಲ್ಲರನ್ನೂ ಒಳಗೊಳ್ಳುವ ಸಂವಿಧಾನ ರಚನೆಯಾಗಬೇಕೆಂದು ಬಯಸಿ, ಆ ಕೆಲಸ ಮಾಡಿದ್ದರು. ಈಗ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

‘ದೇಶದಲ್ಲಿ ವ್ಯವಸ್ಥಿತವಾಗಿ ಸಂವಿಧಾನವನ್ನು ಹಾಳು ಮಾಡುವ ಹುನ್ನಾರ ನಡೆಯುತ್ತಿದೆ. ಒಂದುವೇಳೆ ಅದು ಹಾಳಾದರೆ ಈ ದೇಶದ ಅಧಿಕಾರ ಬಂಡವಾಳಷಾಹಿಗಳ ಕೈಗಳಿಗೆ ಹೋಗಲಿದೆ. ಅದನ್ನು ತಡೆಯಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಮಾತನಾಡಿ, ‘ಸಾಂಸ್ಕೃತಿಕ ವಿದ್ಯಮಾನಗಳು ಸಮಾಜದ ಮೇಲೆ ಪರಿಣಾಮ ಬೀರುತ್ತಿವೆ. ಜಾತಿ ಆಧಾರಿತ ಸಮಾಜಗಳು ಹುಟ್ಟಿಕೊಂಡಿರುವ ಇಂದಿನ ಸಂದರ್ಭದಲ್ಲಿ ಸಮಾಜಶಾಶ್ತ್ರವನ್ನು ಮರುಶೋಧಿಸಿ, ಪುನಃ ಕಟ್ಟುವ ಕೆಲಸವಾಗಬೇಕು. ತಾಂತ್ರಿಕವಾಗಿ ಸಮಾಜಶಾಸ್ತ್ರ ಓದದೆ ಭಾವನಾತ್ಮಕವಾಗಿ ಗ್ರಹಿಸಿ, ಸಮಾಜವನ್ನು ನೋಡದಿದ್ದರೆ ಸಮಾಜಶಾಸ್ತ್ರಕ್ಕೆ ಮಹತ್ವ ಬರುವುದಿಲ್ಲ’ ಎಂದರು.

ಭಾರತೀಯ ಸಮಾಜಶಾಸ್ತ್ರೀಯ ಸಂಘದ ಅಧ್ಯಕ್ಷೆ ಪ್ರೊ. ಆರ್‌. ಇಂದಿರಾ ಅವರು, ಇರಾವತಿ ಕರ್ವೆ ಬರೆದಿರುವ ‘ಹಿಂದೂ ಸಮಾಜ–ಒಂದು ವ್ಯಾಖ್ಯಾನ’, ಎಂ.ಎನ್‌.ಶ್ರೀನಿವಾಸ್‌ ಅವರ ‘ಆಧುನಿಕ ಭಾರತದಲ್ಲಿ ಸಾಮಾಜಿಕ ಬದಲಾವಣೆ’ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.

ಕುಲಸಚಿವ ಪಿ. ಮಹದೇವಯ್ಯ, ಕರ್ನಾಟಕ ಸಮಾಜಶಾಸ್ತ್ರ ಸಂಘದ ಅಧ್ಯಕ್ಷ ಪ್ರೊ. ಸಿ.ಎ. ಸೋಮಶೇಖರಪ್ಪ, ಕಾರ್ಯದರ್ಶಿ ಜಿ.ಡಿ. ನಾರಾಯಣ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿಗಳಾದ ಕೆ.ಎಂ. ಮೇತ್ರಿ, ಎಚ್‌.ಡಿ. ಪ್ರಶಾಂತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT