ಗುರುವಾರ , ಜೂನ್ 17, 2021
29 °C
ಸಾರ್ವಜನಿಕರು, ಹಿರಿಯ ನಾಗರಿಕರಿಂದ ಆತಂಕ, ಕಳವಳ

ಸೋಂಕಿತರ ತಿರುಗಾಟದಿಂದ ಸೋಂಕು ಹೆಚ್ಚಳ: ಹಿರಿಯ ನಾಗರಿಕರಿಂದ ಆತಂಕ, ಕಳವಳ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

PTI

ಹೊಸಪೇಟೆ (ವಿಜಯನಗರ): ಕೋವಿಡ್‌–19 ದೃಢಪಟ್ಟ ನಂತರ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರು ಬೇಕಾಬಿಟ್ಟಿ ಹೊರಗೆ ತಿರುಗಾಡುತ್ತಿರುವುದರಿಂದಲೇ ಸೋಂಕು ವ್ಯಾಪಕವಾಗಿ ಉಲ್ಬಣಿಸಲು ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.

ಈ ವಿಷಯವನ್ನು ಸ್ವತಃ ವೈದ್ಯರು, ಕೋವಿಡ್‌ ಕರ್ತವ್ಯದಲ್ಲಿ ನಿರತರಾಗಿರುವ ಅಧಿಕಾರಿಗಳೇ ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.

ಇತ್ತೀಚೆಗೆ ಸ್ವತಃ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರು ಪ್ರಕಟಣೆ ಹೊರಡಿಸಿ, ‘ಸೋಂಕಿತರು ಹೊರಗೆ ತಿರುಗಾಡುತ್ತಿದ್ದರೆ ಕರೆ ಮಾಡಿ ಸಾರ್ವಜನಿಕರು ಮಾಹಿತಿ ನೀಡಬೇಕು’ ಎಂದು ತಿಳಿಸಿದ್ದರು. ಆದರೆ, ಅದರಿಂದ ಹೆಚ್ಚಿನ ಪ್ರಯೋಜನವಾದಂತೆ ಕಾಣಿಸುತ್ತಿಲ್ಲ. ಸೋಂಕಿತರು ಹೊರಗೆ ಓಡಾಡುತ್ತಿದ್ದಾರೆ ಎನ್ನುವುದನ್ನು ಸ್ವತಃ ಅವರೇ ಒಪ್ಪಿಕೊಂಡ ನಂತರವೂ ಬಿಗಿ ಕ್ರಮಗಳನ್ನು ಕೈಗೊಂಡಿಲ್ಲ.

ಎಲ್ಲ ನಿಯಮಗಳನ್ನು ಪಾಲಿಸಿಕೊಂಡು ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳ ಬಯಸುವವರಿಗೆ ಆರೋಗ್ಯ ಇಲಾಖೆಯು ಅನುಮತಿ ನೀಡುತ್ತಿದೆ. ಕೋವಿಡ್‌ ಖಚಿತವಾದ ನಂತರ ಅವರಿಗೆ ಅಗತ್ಯ ಔಷಧ ಕೊಟ್ಟು, ಅವರ ಮನೆ ಎದುರು ಪೋಸ್ಟರ್‌ ಅಂಟಿಸಲಾಗುತ್ತಿದೆ. ಆದರೆ, ಆರೋಗ್ಯ ಇಲಾಖೆಯವರು ಅವರ ಮನೆಗಳಿಂದ ತೆರಳಿದ ನಂತರ ಪೋಸ್ಟರ್‌ ಹರಿದು ಹಾಕುತ್ತಿದ್ದಾರೆ. ಮತ್ತೆ ಕೆಲವರು ಅದಕ್ಕೆ ಅಡ್ಡಲಾಗಿ ಬಟ್ಟೆ ಹಾಕಿ ಮರೆಮಾಚುವ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಎಲ್ಲೆಡೆ ಬೇಕಾಬಿಟ್ಟಿ ಹೊರಗೆ ತಿರುಗಾಡುತ್ತಿದ್ದಾರೆ. ಇದರಿಂದಾಗಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ನಾನು ಪಟೇಲ್‌ ನಗರದ ನಿವಾಸಿ. ಈ ಬಡಾವಣೆಯಲ್ಲಿ ಸೋಂಕಿತರ ಸಂಖ್ಯೆ ಬಹಳ ಹೆಚ್ಚಿದೆ. ಯುವಕರು, ಹಿರಿಯ ನಾಗರಿಕರು ಸೇರಿದ್ದಾರೆ. ಆದರೆ, ಯುವಕರು ಮನೆಯಲ್ಲಿ ಇದ್ದುಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಬಿಟ್ಟು ಹೊರಗೆ ಓಡಾಡುತ್ತಿದ್ದಾರೆ. ಮನಸ್ಸಿಗೆ ಬಂದ ಜಾಗಕ್ಕೆ ಹೋಗುತ್ತಿದ್ದಾರೆ, ಬೇಕಾದಲ್ಲಿ ಕೂರುತ್ತಿದ್ದಾರೆ. ಸಹಜವಾಗಿಯೇ ಬಡಾವಣೆಯ ನಿವಾಸಿಗಳು ಆತಂಕದಲ್ಲಿದ್ದಾರೆ’ ಎಂದು ಅನಂತ್‌ ಎಂಬುವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಸೋಂಕಿತರ ಮನೆ ಎದುರು ಪೋಸ್ಟರ್‌ ಅಂಟಿಸಿದರೆ ಇಂತಹವರು ಸೋಂಕಿತರು ಎಂದು ಗೊತ್ತಾಗುತ್ತದೆ. ಆದರೆ, ಅನೇಕರು ಆ ಪೋಸ್ಟರ್‌ಗಳನ್ನು ತೆಗೆದು ಹಾಕುತ್ತಿದ್ದಾರೆ. ಯಾರು ಸೋಂಕಿತರು ಎನ್ನುವುದು ಗೊತ್ತಾಗುತ್ತಿಲ್ಲ. ಒಂದುವೇಳೆ ಗೊತ್ತಿದ್ದು, ಅವರಿಗೆ ತಿಳಿ ಹೇಳಲು ಹೋದರೆ ಜಗಳಕ್ಕೆ ಇಳಿಯುತ್ತಿದ್ದಾರೆ’ ಎಂದು ವೈ. ಯಮುನೇಶ್‌ ಹೇಳಿದ್ದಾರೆ.

‘ದಿನಸಿ, ತರಕಾರಿ, ಮಾಂಸ ಖರೀದಿಗೆ ಜನ ಮುಗಿ ಬೀಳುತ್ತಿದ್ದಾರೆ. ಅಂತಹ ಕಡೆಗಳಲೆಲ್ಲಾ ಸೋಂಕಿತರು ಓಡಾಡುತ್ತಿದ್ದಾರೆ. ಜಿಲ್ಲಾಡಳಿತಕ್ಕೂ ಅವರನ್ನು ತಡೆಯಲು ಆಗುತ್ತಿಲ್ಲ. ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ವ್ಯವಸ್ಥೆ ತೆಗೆದು ಹಾಕಬೇಕು. ಎಲ್ಲ ಸೋಂಕಿತರಿಗೆ ಕೋವಿಡ್‌ ಆರೈಕೆ ಕೇಂದ್ರಗಳಲ್ಲೇ ಚಿಕಿತ್ಸೆ ನೀಡಿ, ಗುಣಮುಖರಾದ ನಂತರ ಮನೆಗೆ ಕಳುಹಿಸಬೇಕು. ಇಲ್ಲವಾದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗು‌ತ್ತದೆ. ಈಗಾಗಲೇ ಗ್ರಾಮೀಣ ಪ್ರದೇಶಗಳಿಗೂ ಸೋಂಕು ಹರಡಿದೆ ಎನ್ನುವುದನ್ನು ಜಿಲ್ಲಾಡಳಿತ ಮರೆಯಬಾರದು’ ಎಂದು ಸಲಹೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು