ಬುಧವಾರ, ಜನವರಿ 22, 2020
25 °C

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಡಿ.19ಕ್ಕೆ ಸಿಪಿಐ(ಎಂ) ಪಕ್ಷದಿಂದ ಜನಾಂದೋಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: 'ಪೌರತ್ವ ತಿದ್ದುಪಡಿ ಕಾಯ್ದೆಯು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ. ಬಿಜೆಪಿ ಈ ಕಾಯ್ದೆಯನ್ನು ಉದ್ದೇಶಪೂರ್ವಕವಾಗಿ ಜಾರಿಗೆ ತಂದಿರುವುದು ಖಂಡನಾರ್ಹ. ಈ ಕಾಯ್ದೆ ಕೂಡಲೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಡಿ. 19ರಂದು ಪಕ್ಷದಿಂದ ರಾಜ್ಯದಾದ್ಯಂತ ಜನಾಂದೋಲನ ಹಮ್ಮಿಕೊಳ್ಳಲಾಗಿದೆ' ಎಂದು ಸಿ.ಪಿ.ಎಂ. ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಹೇಳಿದರು.

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಅಂದು ಕೈ ಕೊಟ್ಟಿರುವ ಚಳವಳಿಯಲ್ಲಿ ದೇಶದ ಐದು ಎಡಪಕ್ಷಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳುವರು' ಎಂದು ತಿಳಿಸಿದರು.

'ಈ ಕಾಯ್ದೆಯು ದೇಶದ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಸಂವಿಧಾನವು ಅಖಂಡತೆ, ಎಲ್ಲಾ ಧರ್ಮೀಯರಿಗೆ ಸಮಾನ ಅವಕಾಶಗಳನ್ನು ಕೊಡಬೇಕೆಂದು ತಿಳಿಸುತ್ತದೆ. ಆದರೆ, ಬಿಜೆಪಿಯವರು ಬಹುಮತವಿದೆ ಎಂದು ಮನಬಂದಂತಹ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದಾರೆ. ಅಲ್ಪಸಂಖ್ಯಾತರು ಈ ದೇಶದ ಒಂದು ಭಾಗ ಅವರನ್ನು ಹೊರಗಿಟ್ಟು ಕಾಯ್ದೆ ರೂಪಿಸಿರುವುದು ಬಹುತ್ವಕ್ಕೆ ದೊಡ್ಡ ಕೊಡಲಿ ಏಟು ಬಿದ್ದಿದೆ' ಎಂದು ಹೇಳಿದರು.

'ದೇಶದಲ್ಲಿ ನೆಲೆಸಿರುವ ಅನ್ಯ ರಾಷ್ಟ್ರಗಳ ವಲಸಿಗರನ್ನು ಸಕ್ರಮಗೊಳಿಸುತ್ತಿರುವುದು ಸ್ವಾಗತಾರ್ಹ. ಆದರೆ, ಮುಸ್ಲಿಮರನ್ನು ಅದರಿಂದ ಹೊರಗಿಟ್ಟಿರುವುದು ಸರಿಯಲ್ಲ. ದೇಶದ ಪ್ರಜೆಗಳನ್ನು ಧರ್ಮದ ಆಧಾರದ ಮೇಲೆ ವಿಭಜಿಸಿ ವಿಷ ಬೀಜ ಬಿತ್ತುತ್ತಿರುವುದು ಅಪಾಯಕಾರಿ. ಧರ್ಮ, ಜಾತಿ, ಭಾಷೆ, ಪ್ರಾಂತದ ಆಧಾರದ ಮೇಲೆ ವಿಭಜನೆ ಸಲ್ಲದು' ಎಂದು ಹೇಳಿದರು.

'ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ನಿರುದ್ಯೋಗ ಪ್ರಮಾಣ ಎಂದೂ ಈ ಮಟ್ಟದಲ್ಲಿ ಇರಲಿಲ್ಲ. ಜ್ವಲಂತ ಸಮಸ್ಯೆಗಳಿಂದ ದೇಶದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಧರ್ಮದ ವಿಷಯಗಳನ್ನು ಮುಂಚೂಣಿಗೆ ತರುತ್ತಿದೆ. ಆದರೆ, ಇದರಿಂದ ದೇಶದ ಸೌಹಾರ್ದತೆ, ಭಾವೈಕ್ಯತೆ ಹಾಳಾಗಲಿದೆ' ಎಂದು ಆತಂಕ ವ್ಯಕ್ತಪಡಿಸಿದರು.

'ಅನೇಕ ಸಂಘ ಸಂಸ್ಥೆಗಳು ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿವೆ. ಅಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ. ಈಗಾಗಲೇ ದೇಶದ ಹಲವು ಕಡೆಗಳಲ್ಲಿ ಕಾಯ್ದೆ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟಗಳು ನಡೆಯುತ್ತಿವೆ. ಸರ್ಕಾರ ಅದಕ್ಕೆ ಕಿವಿಗೊಟ್ಟು ಕಾಯ್ದೆ ಹಿಂಪಡೆದರೆ ಸುಪ್ರೀಂಕೋರ್ಟ್ ನಲ್ಲಿ ಛೀಮಾರಿ ಹಾಕಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು' ಎಂದು ಹೇಳಿದರು.

ಪಕ್ಷದ ಬಳ್ಳಾರಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಆರ್.ಎಸ್. ಬಸವರಾಜ, ರಾಜ್ಯ ಸಮಿತಿ ಸದಸ್ಯೆ ಬಿ. ಮಾಳಮ್ಮ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮರಡಿ ಜಂಬಯ್ಯ ನಾಯಕ, ಆರ್ ಭಾಸ್ಕರ್ ರೆಡ್ಡಿ, ಆಟೊ ಫೆಡರೇಶನ್ ತಾಲ್ಲೂಕು ಅಧ್ಯಕ್ಷ ಕೆ.ಎಂ.ಸಂತೋಷ್ ಕುಮಾರ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು