ಸೋಮವಾರ, ಜುಲೈ 4, 2022
21 °C
ಜೀವ ವೈವಿಧ್ಯ ರಕ್ಷಣೆಗೆ ಅರಣ್ಯ ಇಲಾಖೆಯಿಂದ ಹಲವು ಯೋಜನೆಗಳು

ವಿಜಯನಗರ: ಬದಲಾಗಲಿದೆ ದರೋಜಿ ಸಂರಕ್ಷಿತ ಅರಣ್ಯ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಮುಂಬರುವ ಐದು ವರ್ಷಗಳಲ್ಲಿ ದರೋಜಿ ಸಂರಕ್ಷಿತ ಅರಣ್ಯ ಪ್ರದೇಶದ ಚಹರೆ ಬದಲಾಗಲಿದೆ.

ದರೋಜಿ ಅರಣ್ಯ ಪ್ರದೇಶ ಜೀವ ವೈವಿಧ್ಯದ ಅಪರೂಪದ ತಾಣವಾಗಿದೆ. ಕರಡಿ, ಚಿರತೆ, ಮೊಲ, ನವಿಲು, ಕಾಡುಹಂದಿ ಸೇರಿದಂತೆ ವಿವಿಧ ಜಾತಿಯ ವನ್ಯಮೃಗಗಳು, ಪಕ್ಷಿಗಳು ಅಲ್ಲಿ ನೆಲೆಸಿವೆ. ಅರಣ್ಯ ಇಲಾಖೆಯು ಅವುಗಳನ್ನು ಸಂರಕ್ಷಿಸಿ, ಅವುಗಳ ಸಂತತಿ ವೃದ್ಧಿಗೆ ಇಡೀ ಅರಣ್ಯ ಪ್ರದೇಶವನ್ನು ಒಂದು ದ್ವೀಪದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ನಿರ್ಧರಿಸಿದೆ.

ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ಕೊಡಲು ಸಾವಿರಾರು ಸಂಖ್ಯೆಯಲ್ಲಿ ಸಸಿಗಳನ್ನು ನೆಡುವ ಯೋಜನೆ ಇದೆ. ಬೇಟೆ ಸಂಪೂರ್ಣವಾಗಿ ನಿಯಂತ್ರಿಸಲು ವಿಶೇಷ ಪಡೆ ರಚನೆ, ಮಳೆ ನೀರು ಭೂಮಿಯಲ್ಲಿ ಇಂಗಿಸಿ ಅಂತರ್ಜಲ ವೃದ್ಧಿಸಲು ಅಲ್ಲಲ್ಲಿ ಕಂದಕ, ಚೆಕ್‌ ಡ್ಯಾಂ ನಿರ್ಮಿಸಲು ರೂಪುರೇಷೆ ತಯಾರಿಸಲಾಗುತ್ತಿದೆ.

ಅರಣ್ಯ ಇಲಾಖೆಯ ಸಿಬ್ಬಂದಿಗೆ ಜಿಪಿಎಸ್‌, ಡ್ರೋಣ್‌ ಕ್ಯಾಮೆರಾ ಸೇರಿದಂತೆ ಇತರೆ ಅತ್ಯಾಧುನಿಕ ಸಾಧನಗಳನ್ನು ನೀಡಿ ಹೆಚ್ಚಿನ ನಿಗಾ ವಹಿಸುವ ಯೋಜನೆ ಇಲಾಖೆಯದ್ದು. ದರೋಜಿಯೊಂದಿಗೆ ತೋರಣಗಲ್ಲು ಸಂರಕ್ಷಿತ ಅರಣ್ಯ ಪ್ರದೇಶವೂ ಜೀವವೈವಿಧ್ಯದ ನೆಲೆವೀಡಾಗಿದೆ. ಅಲ್ಲೂ ಇದೇ ರೀತಿಯ ಉಪಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.

‘ಜೆಎಸ್‌ಡಬ್ಲ್ಯೂ ಫೌಂಡೇಶನ್‌ನೊಂದಿಗೆ ಅರಣ್ಯ ಇಲಾಖೆಯು ಒಡಂಬಡಿಕೆ ಮಾಡಿಕೊಂಡು, ಅದರ ಸಿಎಸ್‌ಆರ್‌ ಯೋಜನೆಯಡಿ ₹6.86 ಕೋಟಿ ವೆಚ್ಚದಲ್ಲಿ ಐದು ವರ್ಷಗಳಲ್ಲಿ ಹಂತ ಹಂತವಾಗಿ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಒತ್ತುವರಿ ತಡೆಯುವುದು, ಚೆಕ್‌ ಡ್ಯಾಂ ನಿರ್ಮಿಸಿ ಅಂತರ್ಜಲ ಹೆಚ್ಚಿಸುವುದು, ಇಕೊ ಟೂರಿಸಂಗೆ ಒತ್ತು ಕೊಡುವ ಉದ್ದೇಶ ಇದೆ’ ಎಂದು ಡಿಸಿಎಫ್‌ ಸಂದೀಪ್‌ ಸೂರ್ಯವಂಶಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೆಎಸ್‌ಡಬ್ಲ್ಯೂ ಕಾರ್ಪೊರೇಟ್‌ ಸಂಸ್ಥೆಯಾಗಿದ್ದರೂ ಅದಕ್ಕೆ ಪರಿಸರ, ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ವಿಶೇಷ ಕಾಳಜಿ ಇದೆ. ಈ ಕಾರಣಕ್ಕಾಗಿಯೇ ಜೆಎಸ್‌ಡಬ್ಲ್ಯೂ ಫೌಂಡೇಷನ್ ಅಧ್ಯಕ್ಷೆ ಸಂಗೀತಾ ಜಿಂದಾಲ್‌ ಅವರು ವಿಶೇಷ ಕಾಳಜಿ ವಹಿಸಿ ₹6.86 ಕೋಟಿ ಅರಣ್ಯ ಇಲಾಖೆಗೆ ನೀಡಲು ನಿರ್ಧರಿಸಿದ್ದಾರೆ. ಆ ಹಣದಿಂದ ದರೋಜಿ, ತೋರಣಗಲ್ಲು ಸಂರಕ್ಷಿತ ಅರಣ್ಯ ಪ್ರದೇಶ ಅಭಿವೃದ್ಧಿ ಹೊಂದಬೇಕು’ ಎಂದು ಜೆಎಸ್‌ಡಬ್ಲ್ಯೂನ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು