ಭಾನುವಾರ, ಜನವರಿ 26, 2020
23 °C
ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ ಆಗ್ರಹ

ದಾಸಿಮಯ್ಯ ಜನ್ಮದಿನ ನೇಕಾರರ ದಿನವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ನೇಕಾರರ ಪರಿಸ್ಥಿತಿ ಶೋಚನೀಯವಾಗಿದ್ದು, ಸರ್ಕಾರ ಅವರ ನೆರವಿಗೆ ಧಾವಿಸಬೇಕು. ಹಾಗೆಯೇ ದೇವರ ದಾಸಿಮಯ್ಯನವರ ಜನ್ಮದಿನವನ್ನು ನೇಕಾರರ ದಿನವಾಗಿ ಆಚರಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ ಹೇಳಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ದೇವರ ದಾಸಿಮಯ್ಯ ಅಧ್ಯಯನ ಪೀಠ ಹಾಗೂ ಮುದನೂರು ಮಹಾಸಂಸ್ಥಾನ ಮಠ ಟ್ರಸ್ಟ್‌ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ‘ನೇಕಾರಿಕೆ; ವೃತ್ತಿ ಮತ್ತು ಸಂಸ್ಕೃತಿ’ ಕುರಿತ ಎರಡು ದಿನಗಳ ವಿಚಾರ ಸಂಕಿರಣದ ಸಮಾರೋಪದಲ್ಲಿ ಶನಿವಾರ ಮಾತನಾಡಿದರು.

‘ಪ್ರಸ್ತುತ ದಿನಗಳಲ್ಲಿ ನೇಕಾರಿಕೆ ಸಮುದಾಯವು ನಶಿಸಿ ಹೋಗುತ್ತಿದೆ, ಇದಕ್ಕೆ ಮೂಲ ಕಾರಣ ಯಂತ್ರಗಳ ಪ್ರಭಾವ. ನೇಕಾರಿಕೆ ವೃತ್ತಿಯು ವೃತ್ತಿಯಾಗಿ, ಧರ್ಮವಾಗಿ, ಸಂಸ್ಕೃತಿಯಾಗಿ ಉಳಿಯಬೇಕು. ಆಗ ನೇಕಾರರು ಉಳಿಯಲು ಸಾಧ್ಯ. ಹಿಂದಿನ ಸರ್ಕಾರದ ಅವಧಿಯಲ್ಲಿ ನೇಕಾರರ ಗಣತಿ ಮಾಡಿದ್ದು, ಸರ್ಕಾರ ಅದರ ವರದಿ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ಕುಲಪತಿ ಪ್ರೊ. ಸ.ಚಿ. ರಮೇಶ, ‘ಕನ್ನಡ ವಿಶ್ವವಿದ್ಯಾಲಯವು ಬರುವ ದಿನಗಳಲ್ಲಿ ದೇವರ ದಾಸಿಮಯ್ಯನವರ ವಚನಗಳನ್ನು ಅನ್ಯ ಭಾಷೆಗಳಿಗೆ ಭಾಷಾಂತರಿಸಲಿದೆ. ನೇಕಾರರಲ್ಲಿ 28 ಉಪ ಸಮುದಾಯಗಳಿದ್ದು, ಸಂಶೋಧನೆ ಮೂಲಕ ಅವುಗಳ ಚರಿತ್ರೆಯನ್ನು ನಾಡಿಗೆ ಪರಿಚಯಿಸಲಾಗುವುದು’ ಎಂದು ಹೇಳಿದರು.

ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ, ‘ಸರ್ಕಾರವು ಬರುವ ದಿನಗಳಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ದೇವರ ದಾಸಿಮಯ್ಯನವರ ಭವನ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

ಕುಲಸಚಿವ ಎ. ಸುಬ್ಬಣ್ಣ ರೈ, ದೇವರ ದಾಸಿಮಯ್ಯ ಅಧ್ಯಯನ ಪೀಠದ ಸಂಚಾಲಕ ಗೋವಿಂದ, ಮುದನೂರ ಮಹಾಸಂಸ್ಥಾನ ಮಠದ ಈಶ್ವರಾನಂದ ಸ್ವಾಮಿ, ಮಠದ ಕಾರ್ಯದರ್ಶಿ ರಾಮಸ್ವಾಮಿ, ನೇಕಾರ ಸಮಾಜದ ಮುಖಂಡರಾದ ರವೀಂದ್ರ ಕಲಬುರ್ಗಿ, ಗೋ.ತಿಪ್ಪೇಶ್, ಕೆ.ಜಿ.ಲಕ್ಷ್ಮಿನಾರಾಯಣಪ್ಪ, ಜಿ.ರಮೇಶ್, ಕೆ.ವಿ.ಶೇಖರ್, ಹೊಸಪೇಟೆ ತಾಲ್ಲೂಕು ನೇಕಾರ ಸಂಘದ ಅಧ್ಯಕ್ಷ ಬಸವರಾಜ ನಾಲತ್ವಾಡ ಇದ್ದರು. ಅಶೋಕ್‌ ಹುಗ್ಗೆಣ್ಣನವರ ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ರೇಣುಕಾ ಅವರು ತಂಬೂರಿ, ದೇವರಾಜ ಹಾಲಗೇರಿ ಅವರು ಹಾರ್ಮೋನಿಯಂ, ಮಲ್ಲಿಕಾರ್ಜುನ ಅವರು ತಬಲ ಸಾಥ್‌ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು