ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.20, 21ಕ್ಕೆ ನೇಕಾರರ ವೃತ್ತಿ, ಸಂಸ್ಕೃತಿ ವಿಚಾರ ಸಂಕಿರಣ

ದೇವರ ದಾಸಿಮಯ್ಯ ಅಧ್ಯಯನ ಪೀಠದ ಸಂಚಾಲಕ ಗೋವಿಂದ ಹೇಳಿಕೆ
Last Updated 18 ಡಿಸೆಂಬರ್ 2019, 9:47 IST
ಅಕ್ಷರ ಗಾತ್ರ

ಹೊಸಪೇಟೆ: ‘ನೇಕಾರಿಕೆ; ವೃತ್ತಿ ಮತ್ತು ಸಂಸ್ಕೃತಿ’ ಕುರಿತ ವಿಚಾರ ಸಂಕಿರಣ ಡಿ. 20, 21ರಂದು ತಾಲ್ಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ವಿಶ್ವವಿದ್ಯಾಲಯದ ದೇವರ ದಾಸಿಮಯ್ಯ ಅಧ್ಯಯನ ಪೀಠದ ಸಂಚಾಲಕ ಗೋವಿಂದ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನೇಕಾರಿಕೆ ಅವಸಾನದ ಅಂಚಿನಲ್ಲಿದೆ. ನೇಕಾರರು ಬಹಳ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ನೇಕಾರ ಸಮಾಜವನ್ನು ಮುಖ್ಯವಾಹಿನಿಗೆ ತರುವುದರ ಕುರಿತು ಚರ್ಚೆಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು.

‘ನೇಕಾರರು ಈಗ ನೇಕಾರಿಗಷ್ಟೇ ಸೀಮಿತವಾಗಿಲ್ಲ. ಸಾಹಿತ್ಯ, ಕೃಷಿ, ಕಲೆ, ಪತ್ರಿಕೋದ್ಯಮ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವೇದಿಕೆ ಮೂಲಕ ಎಲ್ಲರನ್ನೂ ಒಂದು ಕಡೆ ಸೇರಿಸಲಾಗುವುದು. ಎಲ್ಲರ ಅಭಿಪ್ರಾಯ ಪಡೆದು, ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುವುದು’ ಎಂದು ಹೇಳಿದರು.

‘ಡಿ. 20ರಂದು ಬೆಳಿಗ್ಗೆ 10.30ಕ್ಕೆ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ. ಲಕ್ಷ್ಮಿನಾರಾಯಣ ಉದ್ಘಾಟಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ.ವಿ. ವಸಂತಕುಮಾರ ಆಶಯ ಭಾಷಣ ಮಾಡುವರು. ಹಿರಿಯ ರಂಗಕರ್ಮಿ ಪ್ರಸನ್ನ ಅವರು ಪುಸ್ತಕ ಬಿಡುಗಡೆಗೊಳಿಸುವರು. ಕುಲಪತಿ ಪ್ರೊ. ಸ.ಚಿ. ರಮೇಶ ಅಧ್ಯಕ್ಷತೆ ವಹಿಸುವರು’ ಎಂದರು.

‘ನೇಕಾರಿಗೆ ವೃತ್ತಿಯ ಪ್ರಾಚೀನತೆ; ಉನ್ನತ–ಅವನತಿ’, ‘ಸಾಹಿತ್ಯ ಕ್ಷೇತ್ರಕ್ಕೆ ನೇಕಾರರ ಕೊಡುಗೆ’, ‘ನೇಕಾರಿಕೋದ್ಯಮದ ಜ್ವಲಂತ ಸಮಸ್ಯೆಗಳು ಮತ್ತು ಪರಿಹಾರ’, ‘ನೇಕಾರಿಕೆ ಸಮಾಜದ ಪುರಾಣ ಪುರುಷರು–ಸಂತರು’, ‘ನೇಕಾರ ಸಮುದಾಯದ ಪತ್ರಿಕೆ’ ಕುರಿತು ಗೋಷ್ಠಿಗಳು ಜರುಗಲಿವೆ’ ಎಂದು ವಿವರಿಸಿದರು.

‘ಡಿ. 21ರಂದು ಸಂಜೆ 4ಕ್ಕೆ ನಡೆಯಲಿರುವ ಸಮಾರೋಪದ ಸಾನ್ನಿಧ್ಯವನ್ನು ಮುದನೂರು ಮಹಾ ಸಂಸ್ಥಾನ ಮಠದ ಈಶ್ವರನಾಂದ ಸ್ವಾಮೀಜಿ ವಹಿಸುವರು. ಅದಕ್ಕೂ ಮುನ್ನ ದೇವರ ದಾಸಿಮಯ್ಯನ ವಚನಗಳ ಗಾಯನ, ವಚನ ಗಾಯನ ಕುಂಚ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

ಮುದನೂರು ಮಹಾಸಂಸ್ಥಾನ ಮಠದ ಈಶ್ವರಾನಂದ ಸ್ವಾಮೀಜಿ, ನೇಕಾರ ಸಮಾಜದ ತಾಲ್ಲೂಕು ಅಧ್ಯಕ್ಷ ಬಸವರಾಜ ನಾಲತ್ವಾಡ, ಪ್ರಧಾನ ಕಾರ್ಯದರ್ಶಿ ಕಾಶಿ ವಿಶ್ವನಾಥ, ಮುಖಂಡರಾದ ರಾಮಸ್ವಾಮಿ, ಮಾರ್ಕಂಡಪ್ಪ, ಜಯಣ್ಣ, ಮಾಚಲ ಮಹೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT