ಗುರುವಾರ , ಮಾರ್ಚ್ 30, 2023
24 °C

ಬ್ಯಾಂಕ್‌ಗಳಲ್ಲಿ ಕನ್ನಡಿಗರ ನೇಮಕವಾಗಲಿ: ಕರವೇ ಪದಾಧಿಕಾರಿಗಳ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೂಡ್ಲಿಗಿ: ಬ್ಯಾಂಕುಗಳಲ್ಲಿ ಗ್ರಾಹಕರ ಮೇಲೆ ಹಿಂದಿ ಹೇರಿಕೆ ಮಾಡಬಾರದು ಮತ್ತು ದೌರ್ಜನ್ಯ ನಿಲ್ಲಿಸಿ, ಕನ್ನಡದಲ್ಲಿಯೇ ವ್ಯವಾಹಾರ ನಡೆಸಬೇಕು ಎಂದು ಒತ್ತಾಯಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಪಟ್ಟಣದ ವಿವಿಧ ಬ್ಯಾಂಕುಗಳ ಮುಂದೆ ಪ್ರತಿಭಟನೆ ನಡೆಸಿ, ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳಲ್ಲಿ ಕನ್ನಡದಲ್ಲಿ ವ್ಯಾವಹಾರ ಮಾಡದೆ ಗ್ರಾಹಕರನ್ನು ಹಿಂದಿಯಲ್ಲಿ ಮಾತನಾಡುವಂತೆ ಒತ್ತಾಯಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಹೆಚ್ಚಾಗುತ್ತಿದೆ. ಅದ್ದರಿಂದ ಎಲ್ಲಾ ಬ್ಯಾಂಕುಗಳಲ್ಲಿನ ಎಲ್ಲಾ ಸೇವೆಗಳನ್ನು ಕನ್ನಡದಲ್ಲಿಯೇ ಒದಗಿಸಬೇಕು. ಇದಕ್ಕೆ ಅನುಕೂಲವಾಗುವ ರೀತಿಯಲ್ಲಿ ಬ್ಯಾಂಕುಗಳಲ್ಲಿ ಕನ್ನಡಿಗರನ್ನೆ ನೇಮಕ ಮಾಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಭಾರತೀಯ ಸ್ಟೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಕರ್ನಾಟಕ ಗ್ರಾಮೀಣ ವ್ಯವಸ್ಥಾಪಕರು ಮನವಿ ಪ್ರತ್ರ ಸ್ವೀಕರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಕಾಟೇರ್ ಹಾಲೇಶ್, ಸಾಲುಮನಿ ರಾಘವೇಂದ್ರ, ಕೆ. ತಿಪ್ಪೇಸ್ವಾಮಿ, ನಾಗಪ್ಪ, ಕೆ. ಮಾರೇಶ, ಎಂ.ಚ್ ಚಂದ್ರಪ್ಪ, ವೀರೇಶ, ಶಿವಯೋಗಿ ಇದ್ದರು.

ತೋರಣಗಲ್ಲು ವರದಿ: ಕುಡುತಿನಿ ಪಟ್ಟಣದ ಕರ್ನಾಟಕ ರಕ್ಷಣಾ (ಟಿ.ಎ.ನಾರಾಯಣಗೌಡ ಬಣ) ವೇದಿಕೆ ಕಾರ್ಯಕರ್ತರು ಕೇಂದ್ರ ಸರ್ಕಾರದ ಹಿಂದಿ ಭಾಷಾ ಹೇರಿಕೆ ವಿರೋಧಿಸಿ ಕುಡುತಿನಿ ಎಸ್‍ಬಿಐ ಶಾಖೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಕುಡುತಿನಿ ಘಟಕದ ಕರವೇ ಅಧ್ಯಕ್ಷ ಭಾವಿ ಶಿವಕುಮಾರ್ ಮಾತನಾಡಿ, ಭಾರತ ಒಕ್ಕೂಟ ದೇಶವು ಪ್ರತಿ ವರ್ಷ ಸೆ.14 ರಂದು ಹಿಂದಿ ದಿವಸವನ್ನು ಆಚರಿಸಿ ಕೇವಲ ಹಿಂದಿ ಭಾಷೆಗೆ ಮಾತ್ರ ಹೆಚ್ಚಿನ ಆದ್ಯತೆಯನ್ನು ನೀಡುವುದು ಅನ್ಯಾಯ ಹಾಗೂ ಇತರ ಭಾಷೆಗಳನ್ನು ಕಡೆಗಣಿಸುತ್ತಿವುದು ಎಷ್ಟು ಸರಿ? ಕೇಂದ್ರ ಸರ್ಕಾರದ ಈ ನಡೆಯನ್ನು ನಮ್ಮ ಸಂಘಟನೆಯು ತೀವ್ರವಾಗಿ ಖಂಡಿಸುತ್ತಿದೆ ಅಲ್ಲದೆ ಬ್ಯಾಂಕಿನ ಎಲ್ಲಾ ಸೇವೆಗಳು ಕನ್ನಡದಲ್ಲೇ ನೀಡಬೇಕು. ಕರ್ನಾಟಕದವರನ್ನೇ ವಿವಿಧ ಹುದ್ದೆಗಳಿಗೆ ನೇಮಿಸಿಬೇಕು ಎಂದು ಒತ್ತಾಯಿಸಿದರು.

ಬ್ಯಾಂಕಿನ ವ್ಯವಸ್ಥಾಪಕ ವಿರೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮುಖಂಡರಾದ ಜಂಗ್ಲಿಸಾಬ್, ನಾಗಾಲಿಂಗಾಚಾರಿ, ಕನ್ನಿಕೇರಿಭೀಮಯ್ಯ, ಪಲ್ಲೆದಗುರುಬಸಪ್ಪ, ಕೆ.ನಾಗರಾಜ್, ಹುಲಿಸ್ವಾಮಿ, ಸಿ.ಬಸಪ್ಪ, ವಿರೇಶ್ ಇದ್ದರು.

ಕುರುಗೋಡು ವರದಿ: ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಕಾರ್ಯಕರ್ತರು ಇಲ್ಲಿನ ಸ್ಟೇಟ್‍ ಬ್ಯಾಂಕ್‍ ಆಫ್ ಇಂಡಿಯಾ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ, ಅವೈಜ್ಞಾನಿಕವಾಗಿ ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ನೀಡದೆ ಬಲವಂತವಾಗಿ ಹಿಂದಿ ಭಾಷೆ ಹೇರಲು ಮುಂದಾಗಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಗುಡಿಸಲಿ ರಾಜಾ ಮಾತನಾಡಿದರು. ಬ್ಯಾಂಕಿನ ಪ್ರಭಾರ ಶಾಖಾ ವ್ಯವಸ್ಥಾಪಕ ಓಂಕಾರ ಮನವಿ ಸ್ವೀಕರಿಸಿದರು. ಹಂಪಿ ಬಸವರಾಜ, ಪಿ.ಸಿದ್ದಿಸಾಬ್,ಗಾಳೆಪ್ಪ, ಮುದ್ದಪ್ಪ,ಸಿದ್ದಪ್ಪ, ಆದಿ, ಗುರು ಮತ್ತು ರಾಮಣ್ಣ ಇದ್ದರು.

ಹೂವಿನಹಡಗಲಿ ವರದಿ: ರಾಜ್ಯದಲ್ಲಿರುವ ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಅಧಿಕಾರಿ, ಸಿಬ್ಬಂದಿಯನ್ನು ಕನ್ನಡಿಗರನ್ನೇ ನೇಮಿಸಬೇಕು. ಎಲ್ಲ ಬ್ಯಾಂಕ್ ಸೇವೆಗಳನ್ನು ಕನ್ನಡದಲ್ಲಿಯೇ ನೀಡಬೇಕು ಎಂದು ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಆಗ್ರಹಿಸಿದರು. ಕರವೇ ಅಧ್ಯಕ್ಷ ಜಿ. ಹಾಲೇಶನಾಯ್ಕ, ಹಂಪಸಾಗರ ಮಹ್ಮದ್ ರಫಿಕ್, ಎಂ.ಶಿವನಗೌಡ, ವೀರಸಿಂಗ್ ರಾಠೋಡ್, ರಿಯಾಜ್, ಎಚ್.ಉಮೇಶ, ಕೆ.ಶೇಖಪ್ಪ, ಸುಭಾಷ್, ಬಿ.ಶಿವರಾಜ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು