ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಳದರಾಶಿ ಗುಡ್ಡದ ಮೇಲೆ ಬುದ್ಧನ ಪುತ್ಥಳಿಗೆ ಆಗ್ರಹ

Last Updated 13 ಜನವರಿ 2021, 3:33 IST
ಅಕ್ಷರ ಗಾತ್ರ

ಹೊಸಪೇಟೆ: ನಗರದ ಜೋಳದರಾಶಿ ಗುಡ್ಡದ ಮೇಲೆ ಭಗವಾನ್‌ ಗೌತಮ ಬುದ್ಧನ ಏಕಶಿಲಾ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಬೇಕು ಎಂದು ಹಂಪಿ–ವಿಜಯನಗರ ಬುದ್ಧ ವಿಹಾರ ನಿರ್ಮಾಣ ಟ್ರಸ್ಟ್ ಆಗ್ರಹಿಸಿದೆ.

ಈ ಸಂಬಂಧ ಟ್ರಸ್ಟ್‌ ಮುಖಂಡರು ಮಂಗಳವಾರ ನಗರದಲ್ಲಿ ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.

‘ನಗರದ ಮುಕುಟ ಪ್ರಾಯವಾಗಿರುವ ಜೋಳದರಾಶಿ ಗುಡ್ಡವು ಜನಪದೀಯ ಹಾಗೂ ಐತಿಹಾಸಿಕವಾದ ಸ್ಥಳ. ಸ್ಥಳೀಯರು ಈ ಗುಡ್ಡ ಹುಲಿಗೆಮ್ಮನ ಗುಡ್ಡವೆಂದೂ ಕರೆಯುತ್ತಾರೆ. ಅನೇಕ ಪುರಾಣ ಹೆಸರುಗಳಿಂದ ಕೂಡ ಕರೆಯುತ್ತಾರೆ. ಆದರೆ, ಗುಡ್ಡದ ಮೇಲೆ ಸ್ವಾಮಿ ವಿವೇಕಾನಂದ ಅಥವಾ ಕೃಷ್ಣದೇವರಾಯನ ಪುತ್ಥಳಿ ಪ್ರತಿಷ್ಠಾಪಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಹಂಪಿ ಪರಿಸರದಲ್ಲಿ ಕೃಷ್ಣದೇವರಾಯನ ಪುತ್ಥಳಿ ಸ್ಥಾಪಿಸಿದರೆ ಸೂಕ್ತ. ಇನ್ನು ಬೇರೆ ಗುಡ್ಡದ ಮೇಲೆ ವಿವೇಕಾನಂದರದ್ದು ಪ್ರತಿಷ್ಠಾಪಿಸಬೇಕು. ಇಡೀ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಬುದ್ಧನ ಪುತ್ಥಳಿ ಪ್ರತಿಷ್ಠಾಪಿಸಿದರೆ ಬಹಳ ಅರ್ಥಪೂರ್ಣ’ ಎಂದು ತಿಳಿಸಿದರು.

‘ಹಂಪಿ, ಆನೆಗೊಂದಿ, ಕಂಪ್ಲಿ, ಕೊಪ್ಪಳ, ಗಂಗಾವತಿ ಪ್ರಾಗೈತಿಹಾಸಿಕ ಹಾಗೂ ಚಾರಿತ್ರಿಕ ನೆಲೆಗಳು. ಆರಂಭದಿಂದಲೂ ಬುದ್ಧನ ಹಾಗೂ ಬೌದ್ಧ ಧರ್ಮದ ತತ್ವಸಿದ್ದಾಂತಗಳನ್ನು ಅಳವಡಿಸಿಕೊಂಡ ಪ್ರದೇಶಗಳೇ ಆಗಿವೆ. ಕೊಪ್ಪಳ, ಮಸ್ಕಿ, ಸಂಗನಕಲ್ಲು, ಜಟ್ಟಿಗರಾಮೇಶ್ವರ, ಸನ್ನತ್ತಿಗಳಂತಹ ಐತಿಹಾಸಿಕ ಸ್ಥಳಗಳಲ್ಲಿ ದೇವನಾಂಪ್ರಿಯ ಪ್ರಿಯದರ್ಶಿನಿ ಅಶೋಕ ಮಹಾರಾಜನ ಬೌದ್ಧ ಧರ್ಮದ ತತ್ವ ಸಿದ್ದಾಂತಗಳನ್ನು ವ್ಯಕ್ತಪಡಿಸುವ ಶಾಸನಗಳು ನಿರ್ಮಾಣಗೊಂಡಿರುವುದು ಐತಿಹಾಸಿಕ ಸತ್ಯ. ಹಂಪಿಯಲ್ಲಿ ಬೌದ್ಧ ಧರ್ಮದ ಮಹತ್ವದ ಕುರುಹುಗಳು ದೊರಕಿರುವುದು ಚಾರಿತ್ರಿಕವಾಗಿ ಸತ್ಯವಾಗಿದೆ. ಹಾಗಾಗಿ ಬುದ್ಧನ ಪುತ್ಥಳಿ ಪ್ರತಿಷ್ಠಾಪಿಸುವುದು ಸೂಕ್ತ’ ಎಂದು ವಿವರಿಸಿದರು.

ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ, ದುರುಗಪ್ಪ ಪೂಜಾರ್, ರವಿ, ಮಧು, ರಮೇಶ್, ಎಚ್.ಎಲ್.ಸಂತೋಷ್, ನೀಲಕಂಠ, ಪ್ರಕಾಶ್, ಬಿ.ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT