ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ದಿನದ ಹಂಪಿ ಉತ್ಸವ: ಅಸಮಾಧಾನ

ಹಂಪಿಯ ಹೆಸರೇಕೆ? ‘ಮಂಗಳಾರತಿ ಉತ್ಸವ’ ಎನ್ನಿ!
Last Updated 6 ನವೆಂಬರ್ 2020, 10:24 IST
ಅಕ್ಷರ ಗಾತ್ರ

ಬಳ್ಳಾರಿ: ಈ ಬಾರಿಯ ಹಂಪಿ ಉತ್ಸವವನ್ನು ಒಂದು ದಿನಕ್ಕಷ್ಟೇ ಸೀಮಿತಗೊಳಿಸಿರುವ ಸರ್ಕಾರದ ನಿರ್ಧಾರದ ವಿರುದ್ಧ ಜಿಲ್ಲೆಯಲ್ಲಿ ಅಸಮಾಧಾನದ ಅಲೆ ಎದ್ದಿದೆ.

‘ಶೋಭಾಯಾತ್ರೆ ಮತ್ತು ತುಂಗಾ ಆರತಿಯಷ್ಟನ್ನೇ ನಡೆಸುವುದು ಸರಿಯಲ್ಲ’ ಎಂಬ ಟೀಕೆಗಳೂ ಹೊರಬಿದ್ದಿವೆ. ಇದೇ ವೇಳೆ ವೇದಿಕೆ ಕಾರ್ಯಕ್ರಮಗಳನ್ನೂ ಉತ್ಸವದಲ್ಲಿ ಹಮ್ಮಿಕೊಳ್ಳಬೇಕು ಎಂದು ಕಲಾವಿದರು ಆಗ್ರಹಿಸಿದ್ದಾರೆ.

‘ಈ ಕಾಟಾಚಾರಕ್ಕೆ ಹಂಪಿ ಉತ್ಸವದ ಹೆಸರೇಕೆ ಬಳಸಬೇಕು? ಮಂಗಳಾರತಿ ಉತ್ಸವವೆಂದು ಕರೆದುಕೊಳ್ಳಿ’ ಎಂಬ ಆಕ್ರೋಶವೂ ಫೇಸ್‌ಬುಕ್‌ನಲ್ಲಿ ಶುಕ್ರವಾರ ಕಂಡುಬಂದಿದೆ. ಕಲಾವಿದ ಕೆ.ಜಗದೀಶ್‌ ಅವರ ಈ ಪ್ರತಿಪಾದನೆಗೆ ಹೊಸಪೇಟೆಯ ಗುರುರಾಜ್‌ ಎಂಬುವವರು ‘ಬೇಡವೇ ಬೇಡ, ಇಂಥಹ ಉತ್ಸವ ಬೇಕಾಗಿಲ್ಲ ನಮಗೆ’ ಎಂದು ಕಿಡಿ ಕಾರಿದ್ದಾರೆ.

ಆಗ್ರಹ: ಉತ್ಸವದಲ್ಲಿ ವೇದಿಕೆಯ ಕಾರ್ಯಕ್ರಮಗಳನ್ನು ಏರ್ಪಡಿಸಲೇಬೇಕು ಎಂದು ಆಗ್ರಹಿಸಿ ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆಯ ಪ್ರಮುಖರು ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರಿಗೆ ಮನವಿಯನ್ನೂ ಸಲ್ಲಿಸಿದ್ದಾರೆ.

‘ಮೈಸೂರು ದಸರಾ ಉತ್ಸವಕ್ಕೆ ಮುಖ್ಯ ಸ್ಫೂರ್ತಿಯಾಗಿರುವ ಹಂಪಿ ಉತ್ಸವವವನ್ನು ನ.13ರಂದು ಒಂದೇ ದಿನ ಹಮ್ಮಿಕೊಳ್ಳಲು ನಿರ್ಧರಿಸಿರುವುದು ಕಲಾವಿದರಲ್ಲಿ ಆತಂಕ ಸೃಷ್ಟಿಸಿದೆ. ಪ್ರತಿ ವರ್ಷವೂ ಈ ಎರಡು ಉತ್ಸವಗಳ ಕುರಿತು ತಾರತಮ್ಯ ಧೋರಣೆಯನ್ನು ಸರ್ಕಾರಗಳು ಮುಂದುವರಿಸುತ್ತಲೇ ಇವೆ’ ಎಂದು ವೇದಿಕೆಯ ಸಂಚಾಲಕ ಕೆ.ಜಗದೀಶ್‌ ಮನವಿಪತ್ರದಲ್ಲಿ ಆರೋಪಿಸಿದ್ದಾರೆ.

‘ಏಳೆಂಟು ತಿಂಗಳಿಂದ ಕೊರೊನಾ ಲಾಕ್‌ಡೌನ್‌ ಕಾರಣದಿಂದಾಗಿ ಕಾರ್ಯಕ್ರಮಗಳಿಗೆ ಪ್ರಾಯೋಕತ್ವ ದೊರಕದೇ ಕಲಾವಿದರ ಸಂಘಗಳು ಹಾಗೂ ಕಲಾವಿದರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಉತ್ಸವದಲ್ಲಿ ಸರಳ ವೇದಿಕೆಗಳನ್ನು ಏರ್ಪಡಿಸಿ ಕಲಾವಿದರಿಗೆ ಅವಕಾಶಗಳನ್ನು ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ಮನವಿಗೆ ನಿರ್ಲಕ್ಷ್ಯ: ಉತ್ಸವವವನ್ನು ಎಂದಿನಂತೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಬೇಕು ಎಂದು ಕೆಲವು ತಿಂಗಳಿಂದ ಜಿಲ್ಲಾಧಿಕಾರಿಗಳಿಗೆ. ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಏಕಾಏಕಿ ಒಂದು ದಿನದ ಉತ್ಸವವನ್ನು ಘೋಷಿಸಿರುವ ಸರ್ಕಾರವು ಸಂಪ್ರದಾಯವನ್ನು ಮುರಿದಿದೆ. ಜನರ ಮನವಿಯನ್ನೂ ಮೂಲೆಗುಂಪು ಮಾಡಿದೆ’ ಎಂದು ನವಕರ್ನಾಟಕ ಯುವಶಕ್ತಿಯ ಸಿದ್ಮಲ್‌ ಮಂಜುನಾಥ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂರು ದಿನ ನಡೆಸಲಿ: ‘ಹಂಪಿ ಉತ್ಸವವನ್ನು ನಡೆಸಲಾಗುವುದು ಎಂದು ಸಚಿವರು ಹೇಳಿದ್ದೇ ಸಂತಸದ ವಿಚಾರ. ಆದರೆ ಜಿಲ್ಲೆಯ ಕಲಾವಿದರಿಗೆ ನೆರವಾಗುವ ಸಲುವಾಗಿ ಮೂರು ದಿನಗಳ ಕಾಲ ಸರಳವಾಗಿ ಉತ್ಸವವನ್ನು ಹಮ್ಮಿಕೊಳ್ಳಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ ಆಗ್ರಹಿಸಿದ್ದಾರೆ.

ನಾಳೆ ಸಭೆ: ಉತ್ಸವವನ್ನು ಒಂದೇ ದಿನ ಹಮ್ಮಿಕೊಳ್ಳುವುದರ ವಿರುದ್ಧ ಪ್ರತಿಭಟಿಸುವ ಸಲುವಾಗಿ ಕಲಾವಿದರ ವೇದಿಕೆಯು ನಗರದ ಮುಳ್ಳೂರು ರಾಮಪ್ಪ ಸಭಾಂಗಣದಲ್ಲಿ ಶನಿವಾರ ಕಲಾವಿದರು, ಲೇಖಕರು ಮತ್ತು ಕನ್ನಡ ಪರ ಹೋರಾಟಗಾರರ ಸಭೆಯನ್ನು ಏರ್ಪಡಿಸಲಿದೆ. ಸಭೆಯ ಬಳಿಕ ಪ್ರತಿಭಟನೆಯ ರೂಪರೇಷೆಯನ್ನು ನಿರ್ಧರಿಸಲಾಗುವುದು ಎಂದು ಕೆ.ಜಗದೀಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT