ಅತೃಪ್ತಿ ಶಮನವೇ ಕಾಂಗ್ರೆಸ್‌ಗೆ ಸವಾಲು

ಬುಧವಾರ, ಏಪ್ರಿಲ್ 24, 2019
30 °C
ಬಗೆಹರಿಯದ ಕಂಪ್ಲಿ ಬಿಕ್ಕಟ್ಟು; ಹಗರಿಬೊಮ್ಮನಹಳ್ಳಿಯಲ್ಲಿ ಒಳ ಬೇಗುದಿ

ಅತೃಪ್ತಿ ಶಮನವೇ ಕಾಂಗ್ರೆಸ್‌ಗೆ ಸವಾಲು

Published:
Updated:

ಹೊಸಪೇಟೆ: ಕಾಂಗ್ರೆಸ್‌ ಪಕ್ಷದಲ್ಲಿ ಹೊಗೆಯಾಡುತ್ತಿರುವ ಅತೃಪ್ತಿ ಶಮನಗೊಳಿಸುವುದೇ ಪಕ್ಷದ ಮುಖಂಡರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಉಳಿದಿವೆ. ಹೀಗಿದ್ದರೂ ಇದುವರೆಗೆ ಅತೃಪ್ತಿ ಶಮನವಾಗಿಲ್ಲ. ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಸಂಕಷ್ಟಕ್ಕೆ ಈಡಾದಾಗ ಪಕ್ಷವನ್ನು ಪಾರು ಮಾಡುವ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ ಅವರಿಗೂ ಇದು ಸಾಧ್ಯವಾಗಿಲ್ಲ. 

ಪಕ್ಷದ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪನವರ ಪರವಾಗಿ ಜಿಲ್ಲೆಯಾದ್ಯಂತ ಪ್ರಚಾರ ಕೈಗೊಳ್ಳಲು ಕೆಲವು ದಿನಗಳಿಂದ ಡಿ.ಕೆ. ಶಿವಕುಮಾರ ಜಿಲ್ಲೆಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಪಕ್ಷದ ಮುಖಂಡರ ಜತೆ ಹಲವು ಸಲ ಸಮಾಲೋಚನೆ ನಡೆಸಿದ್ದಾರೆ. ಹೀಗಿದ್ದರೂ ಬಿಕ್ಕಟ್ಟು ಮುಂದುವರಿದಿದೆ.

ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾಗಿರುವ ಶಾಸಕ ಜೆ.ಎನ್‌. ಗಣೇಶ್‌ ಬೆಂಬಲಿಗರು ಬಹಿರಂಗವಾಗಿಯೇ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ. ‘ಗಣೇಶ್‌ ಅವರನ್ನು ಜೈಲಿನಿಂದ ಬಿಡಿಸಿ ತರಬೇಕು. ಅವರ ವಿರುದ್ಧದ ಪ್ರಕರಣಗಳನ್ನು ವಾಪಸ್‌ ಪಡೆಯಲು ಆನಂದ್‌ ಸಿಂಗ್‌ ಮನವೊಲಿಸಬೇಕು. ಇಲ್ಲವಾದಲ್ಲಿ ಲೋಕಸಭೆ ಚುನಾವಣೆಯಲ್ಲಿ ಉಗ್ರಪ್ಪನವರ ಪರ ಪ್ರಚಾರ ಕೈಗೊಳ್ಳುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ. 

ಕಂಪ್ಲಿ, ಕುರುಗೋಡಿನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಸಮಾವೇಶದ ಸಂದರ್ಭದಲ್ಲಿ ಇದು ಮತ್ತೆ ಪ್ರತಿಧ್ವನಿಸಿದೆ. ಡಿ.ಕೆ. ಶಿವಕುಮಾರ ಸಮ್ಮುಖದಲ್ಲೇ ಗಣೇಶ್‌ ಬೆಂಬಲಿಗರು ಈ ಹಕ್ಕೊತ್ತಾಯ ಮಾಡಿದ್ದಾರೆ. ಆದರೆ, ಸಚಿವರು ಹಲ್ಲೆ ಘಟನೆಗೆ ಸಂಬಂಧಿಸಿದಂತೆ ವಿಷಾದ ವ್ಯಕ್ತಪಡಿಸಿರುವುದು ಬಿಟ್ಟರೆ ಖಚಿತವಾದ ಭರವಸೆ ನೀಡಲಿಲ್ಲ. ಹೀಗಾಗಿ ಕಂಪ್ಲಿ ಕಾಂಗ್ರೆಸ್‌ನಲ್ಲಿ ತಲೆದೋರಿರುವ ಬಿಕ್ಕಟ್ಟು ಸದ್ಯಕ್ಕಂತೂ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದು ಚುನಾವಣೆಯಲ್ಲಿ ವ್ಯತಿರಿಕ್ತವಾದ ಪರಿಣಾಮ ಬೀರಿದರೂ ಅಚ್ಚರಿ ಪಡಬೇಕಿಲ್ಲ.

ಶಿವಕುಮಾರ ಅವರ ಮಧ್ಯ ಪ್ರವೇಶದಿಂದ ಹಗರಿಬೊಮ್ಮನಹಳ್ಳಿ ಶಾಸಕ ಎಲ್‌.ಬಿ.ಪಿ. ಭೀಮಾ ನಾಯ್ಕ ಹಾಗೂ ಕಾಂಗ್ರೆಸ್‌ ಗ್ರಾಮೀಣ ಪ್ರಚಾರ ಸಮಿತಿ ಅಧ್ಯಕ್ಷ ಸಿರಾಜ್‌ ಶೇಖ್‌ ನಡುವಿನ ಜಟಾಪಟಿ ಸದ್ಯಕ್ಕೆ ಕೊನೆಗೊಂಡಿದೆ. ಆದರೆ, ಇಬ್ಬರು ಮುಖಂಡರ ಬೆಂಬಲಿಗರು ಪರಸ್ಪರ ಒಬ್ಬರ ವಿರುದ್ಧ ಒಬ್ಬರು ಒಳಗೊಳಗೆ ಕತ್ತಿ ಮಸೆಯುತ್ತಿದ್ದಾರೆ.

‘ವಿಧಾನಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಪ್ರಚಾರ ಕೈಗೊಂಡಿರುವ ಸಿರಾಜ್‌ ಶೇಖ್‌ ಅವರನ್ನು ಪಕ್ಷದಿಂದ ವಜಾಗೊಳಿಸಬೇಕು’ ಎಂದು ಭೀಮಾ ನಾಯ್ಕ ಪಟ್ಟು ಹಿಡಿದಿದ್ದರು. ‘ಒಂದುವೇಳೆ ಸಿರಾಜ್‌ ಶೇಖ್‌ ಅವರನ್ನು ಪಕ್ಷದಿಂದ ತೆಗೆದು ಹಾಕದಿದ್ದರೆ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುವುದಿಲ್ಲ’ ಎಂದು ಭೀಮಾ ನಾಯ್ಕ ಹೇಳಿಕೆ ನೀಡಿದ್ದರು. ಅದಕ್ಕೆ ಸಿರಾಜ್‌ ಶೇಖ್ ಮತ್ತು ಅವರ ಬೆಂಬಲಿಗರು ಸಿಟ್ಟಿಗೇಳಲು ಕಾರಣವಾಗಿತ್ತು. ಆರೋಪ–ಪ್ರತ್ಯಾರೋಪ ತಾರಕಕ್ಕೇರಿತ್ತು. ಇದರಿಂದ ಚುನಾವಣೆಯಲ್ಲಿ ಆಗಬಹುದಾದ ನಷ್ಟ ಅರಿತು ಶಿವಕುಮಾರ ಸಭೆ ನಡೆಸಿ, ಇಬ್ಬರು ಮುಖಂಡರನ್ನು ಸಮಾಧಾನ ಪಡಿಸಿದ್ದಾರೆ. ಆದರೆ, ಒಳಬೇಗುದಿ ಈಗಲೂ ಹಾಗೆಯೇ ಇದೆ.

ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌ ಇದುವರೆಗೆ ಒಮ್ಮೆಯೂ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿಲ್ಲ. ಇದರಿಂದ ಪಕ್ಷಕ್ಕೆ ಹಿನ್ನಡೆ ಆಗಬಹುದು. ಆದರೆ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ, ಪ್ರಚಾರ ಕಾರ್ಯದಲ್ಲಿ ತೊಡಗಿರುವುದು ಕಾಂಗ್ರೆಸ್‌ಗೆ ಸ್ವಲ್ಪ ಸಮಾಧಾನ ತಂದಿದೆ.

‘ಸಹಜವಾಗಿಯೇ ಗಣೇಶ್‌ ಬೆಂಬಲಿಗರಿಗೆ ನೋವಾಗಿದೆ. ಆ ನೋವು ಮುಖಂಡರ ಎದುರು ತೋಡಿಕೊಂಡಿದ್ದಾರೆ. ಅವರೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಎಲ್ಲರೂ ಪಕ್ಷದ ಜತೆಗಿದ್ದಾರೆ. ಉಗ್ರಪ್ಪನವರು ಮತ್ತೆ ಜಯ ಸಾಧಿಸುವುದು ಖಚಿತ’ ಎಂದು ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !