ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಸಂಚಲನ ಮೂಡಿಸಿದ ಶಿವಕುಮಾರ

ಕೆಪಿಸಿಸಿ ಅಧ್ಯಕ್ಷರಾಗಿ ಜಿಲ್ಲೆಗೆ ಮೊದಲ ಭೇಟಿ; ಕಾರ್ಯಕರ್ತರೇ ಪಕ್ಷದ ಶಕ್ತಿ–ಡಿಕೆಶಿ
Last Updated 22 ನವೆಂಬರ್ 2020, 16:02 IST
ಅಕ್ಷರ ಗಾತ್ರ

ಹೊಸಪೇಟೆ: ಕೆಪಿಸಿಸಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಗಣಿ ಜಿಲ್ಲೆಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ ಅವರು ಮಂಕಾಗಿದ್ದ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಭಾನುವಾರ ಸಂಚಲನ, ಹುಮ್ಮಸ್ಸು ಮೂಡಿಸಿದರು.

ತಮ್ಮ ಎಂದಿನ ಗತ್ತು, ಗೈರತ್ತಿನೊಂದಿಗೆ ನಗರಕ್ಕೆ ಬಂದಿದ ಅವರು ಸಾಮಾನ್ಯ ಕಾರ್ಯಕರ್ತರೊಂದಿಗೆ ಮುಕ್ತವಾಗಿ ಬೆರೆತರು. ಏಳೆಂಟು ಕಿ.ಮೀ ಪಕ್ಷದ ಕಾರ್ಯಕರ್ತನ ಬೈಕ್‌ ಮೇಲೆ ಕುಳಿತು ವೇದಿಕೆಯ ವರೆಗೆ ಬಂದಿದ್ದು ವಿಶೇಷವಾಗಿತ್ತು.

ಶಿವಕುಮಾರ ಅವರನ್ನು ಬರಮಾಡಿಕೊಳ್ಳಲು ಕಾಂಗ್ರೆಸ್‌ ಯುವ ಕಾರ್ಯಕರ್ತರು ನಗರ ಹೊರವಲಯದ ಗುಂಡಾ ಸಸ್ಯ ಉದ್ಯಾನದ ಬಳಿ ಸೇರಿದ್ದರು. ಶಿವಕುಮಾರ ಬರುತ್ತಿದ್ದಂತೆ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಯಿತು. ಶಿವಕುಮಾರ ಪರ, ಪಕ್ಷದ ಪರ ಘೋಷಣೆ ಕೂಗಿದರು. ನಂತರ ಅವರೊಂದಿಗೆ ಬೈಕ್‌ ಮೇಲೆ ನಗರಕ್ಕೆ ಬಂದರು. ನಗರದ ಪ್ರಮುಖ ವೃತ್ತಗಳಲ್ಲಿ ಕಾರ್ಯಕರ್ತರು ಬೈಕ್‌ ರ್‍ಯಾಲಿ ನಡೆಸಿ ಶಕ್ತಿ ಪ್ರದರ್ಶಿಸಿದರು. ಡಾ.ಬಿ. ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಶಿವಕುಮಾರ ಮಾಲಾರ್ಪಣೆ ಮಾಡಿದರು. ನಂತರ ಅಲ್ಲಿಂದ ಸಾಯಿ ರಂಗಲೀಲಾ ಮಂದಿರದತ್ತ ಮುಖ ಮಾಡಿದರು. ಅಲ್ಲಿ ಮಹಿಳಾ ಕಾರ್ಯಕರ್ತೆಯರು ಪೂರ್ಣಕುಂಭ ಸ್ವಾಗತ ನೀಡಿದರು.

ಸುಮಾರು ಮೂರು ಸಾವಿರಕ್ಕೂ ಹೆಚ್ಚು ಬೈಕ್‌ಗಳ ಮೇಲೆ ಕಾರ್ಯಕರ್ತರು ಅವರಿಗೆ ಸಾಥ್‌ ನೀಡಿದರು. ಅವರು ಹಾದು ಹೋದ ಮಾರ್ಗದಲ್ಲೆಲ್ಲಾ ಪಟಾಕಿ ಸಿಡಿಸಿದರು. ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ ನೂರಾರು ವಾಹನಗಳಲ್ಲಿ ಮುಖಂಡರು, ಕಾರ್ಯಕರ್ತರು ಬಂದದ್ದರಿಂದ ಕಾಲೇಜು ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಟಿ.ಬಿ. ಡ್ಯಾಂ ಕಡೆಗೆ ಹೋಗುವ ವಾಹನಗಳ ಮಾರ್ಗ ಬದಲಿಸಲಾಗಿತ್ತು.

ವಿಜಯ ಸಾಧನೆಗೆ ವಿಜಯನಗರದಿಂದ ಪ್ರವಾಸ:

ಕಿಕ್ಕಿರಿದು ತುಂಬಿದ ಸಭಾಂಗಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ, ‘ಪಕ್ಷ ಸಂಘಟನೆಗಾಗಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿರುವೆ. ವಿಜಯ ಸಾಧನೆಗೆ ವಿಜಯನಗರದಿಂದ ಪ್ರವಾಸ ಆರಂಭಿಸಿರುವೆ. ಸುದೀರ್ಘ ಇತಿಹಾಸವಿರುವ ಕಾಂಗ್ರೆಸ್‌ ಪಕ್ಷವನ್ನು ತಳಮಟ್ಟದಿಂದ ಕಟ್ಟಬೇಕಿದೆ. ಪ್ರತಿಯೊಂದು ಬೂತ್‌ಗಳಲ್ಲಿ ಕಾಂಗ್ರೆಸ್‌ ಬಲಪಡಿಸಬೇಕಿದೆ. ನಾನು ಸಹ ಸಾಮಾನ್ಯ ಕಾರ್ಯಕರ್ತನಾಗಿ ನಿಮ್ಮೊಂದಿಗೆ ಕೆಲಸ ಮಾಡುವೆ. ಎಲ್ಲರೂ ಸೇರಿಕೊಂಡು ಪಕ್ಷವನ್ನು ಪುನಃ ಅಧಿಕಾರಕ್ಕೆ ತರೋಣ’ ಎಂದರು.

‘ಯಾರೇ ಆಗಿರಲಿ ಬೂತ್‌ ಮಟ್ಟದ ಪದಾಧಿಕಾರಿ ಆಗಿರಬೇಕು. ಅವರಿಗೆ ‘ಪ್ರಜಾಪ್ರತಿನಿಧಿ’ ಎಂದು ಹೆಸರಿಡಲಾಗುವುದು. ಉಪಚುನಾವಣೆಗಳಲ್ಲಿ ಸಹಜವಾಗಿಯೇ ಅಧಿಕಾರದಲ್ಲಿರುವ ಪಕ್ಷ ಜಯಿಸುತ್ತ ಬಂದಿದೆ. ಸೋಲು ಒಪ್ಪಿಕೊಂಡಿರುವೆ. ಆದರೆ, ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಈ ಒಗ್ಗಟ್ಟು ಸದಾ ಇರಬೇಕು’ ಎಂದು ಹೇಳಿದರು.

‘ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್‌ನ ಅನೇಕ ಮುಖಂಡರು ಕಾಂಗ್ರೆಸ್‌ಗೆ ಬರಲು ತುದಿಗಾಲ ಮೇಲೆ ನಿಂತಿದ್ದಾರೆ. ಅವರ ದೊಡ್ಡ ಪಟ್ಟಿಯೇ ನನ್ನ ಬಳಿ ಇದೆ. ಯಾವುದೇ ಷರತ್ತು ಇಲ್ಲದೆ ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳಲಾಗುವುದು. ಯಾರನ್ನು ಸೇರಿಸಿಕೊಳ್ಳಬೇಕು, ಬಿಡಬೇಕು ಎನ್ನುವುದರ ಕುರಿತು ಸಮಿತಿ ರಚಿಸಲಾಗಿದೆ’ ಎಂದು ತಿಳಿಸಿದರು.

‘ಕಾರ್ಯಕರ್ತರು ಪಕ್ಷದ ಆಧಾರಸ್ತಂಭ. ಪ್ರತಿಯೊಬ್ಬ ಕಾರ್ಯಕರ್ತ ಶಕ್ತಿಶಾಲಿ ಆಗಬೇಕು. ಗೌರವ ಸಿಗಬೇಕು. ಆಗ ಪಕ್ಷ ಬೆಳೆಯುತ್ತದೆ. ಸರಿಯಾದ ಅಡಿಪಾಯ ಹಾಕುವುದಕ್ಕಾಗಿ ಇಲ್ಲಿಗೆ ಬಂದಿರುವೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮುಖಂಡರು ಪಕ್ಷ ಸಂಘಟನೆಗೆ ದುಡಿಯಬೇಕು’ ಎಂದು ಕಿವಿಮಾತು ಹೇಳಿದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೋವಿಡ್‌ ನಿರ್ವಹಣೆ, ವಲಸೆ ತಡೆಯುವುದು, ನಿರುದ್ಯೋಗ ಸಮಸ್ಯೆ ನಿಭಾಯಿಸಲು ವಿಫಲವಾಗಿದೆ. ಸಂಕಷ್ಟದ ಸಮಯದಲ್ಲೂ ವಿದ್ಯುತ್‌ ದರ, ಆಸ್ತಿ ತೆರಿಗೆ ಹೆಚ್ಚಿಸಿರುವುದು ಜನವಿರೋಧಿ ಕ್ರಮ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT