ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರಕ್ಕೆ 8 ಲಕ್ಷ ಗ್ರಾಮಗಳಲ್ಲಿ ದೇಣಿಗೆ ಸಂಗ್ರಹ: ಆರೆಸ್ಸೆಸ್‌ ಮುಖಂಡ

Last Updated 5 ಜನವರಿ 2021, 14:14 IST
ಅಕ್ಷರ ಗಾತ್ರ

ಹೊಸಪೇಟೆ: ‘ಅಯೋಧ್ಯೆಯಲ್ಲಿ ₹1,100 ಕೋಟಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕಾಗಿ ದೇಶದ 8 ಲಕ್ಷ ಗ್ರಾಮಗಳಲ್ಲಿ ಅಭಿಯಾನ ನಡೆಸಿ, ಜನರಿಂದ ದೇಣಿಗೆ ಸಂಗ್ರಹಿಸಲಾಗುವುದು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕಾರ್ಯವಾಹ ಕೇಶವಜೀ ತಿಳಿಸಿದರು.

ತಾಲ್ಲೂಕಿನ ಕಮಲಾಪುರದಲ್ಲಿ ಮಂಗಳವಾರ ನಡೆದ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಸಮಿತಿಯ ಬೈಠಕ್‌ನಲ್ಲಿ ಅವರು ಮಾತನಾಡಿದರು.

‘ಅಭಿಯಾನದ ಭಾಗವಾಗಿ ಕಾರ್ಯಕರ್ತರು ಎಂಟು ಲಕ್ಷ ಗ್ರಾಮಗಳ ಪ್ರತಿಯೊಂದು ಮನೆಗೂ ಭೇಟಿ ನೀಡುವರು. ₹10ರಿಂದ ₹2,000 ವರೆಗೆ ದೇಣಿಗೆ ನೀಡಿ ಜನ ರಸೀದಿ ಪಡೆಯಬೇಕು. ದೇಶದ ಪ್ರತಿಯೊಬ್ಬ ಪ್ರಜೆಯೂ ಅವರ ದುಡಿಮೆಗೆ ತಕ್ಕಂತೆ ಈ ಪುಣ್ಯ ಕೆಲಸಕ್ಕೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಸಂಘದ ಉತ್ತರ ಪ್ರಾಂತದ ಪ್ರಮುಖ ರಾಜಶೇಖರ್‌ಜೀ ಮಾತನಾಡಿ, ‘ಹಿಂದೂಗಳ 500 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಬಹುಜನರ ಆಸೆಯಂತೆ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗಲಿದೆ. ಎಲ್ಲ ರಾಮಭಕ್ತರು ದೇಣಿಗೆ ನೀಡಿ, ಮಂದಿರ ನಿರ್ಮಾಣಕ್ಕೆ ಸಹಕರಿಸಬೇಕು’ ಎಂದು ಕೋರಿದರು.

‘2.77 ಎಕರೆಯಲ್ಲಿ 57,400 ಚದರ ಅಡಿ ವಿಸ್ತೀರ್ಣದಲ್ಲಿ ಭವ್ಯವಾದ ಮೂರು ಅಂತಸ್ತಿನ ಏಳು ಶಿಖರಗಳುಳ್ಳ 161 ಅಡಿ ಎತ್ತರದ ಸುಂದರ ಮಂದಿರ ನಿರ್ಮಾಣವಾಗಲಿದೆ. 67 ಎಕರೆ ಜಾಗದಲ್ಲಿ ವಸ್ತು ಸಂಗ್ರಹಾಲಯ, ಗ್ರಂಥಾಲಯ, ರಂಗಮಂದಿರ, ಯಜ್ಞ ಶಾಲೆ, ಸಮ್ಮೇಳನ ಕೇಂದ್ರ, ಸತ್ಸಂಗ ಭವನ, ಧರ್ಮ ಶಾಲೆ, ದಾಖಲೆಗಳ ಕೊಠಡಿ, ಭೋಜನ ಶಾಲೆ, ಯಾತ್ರಿ ನಿವಾಸ, ಮಾಹಿತಿ ಕೇಂದ್ರ, ವಿಚಾರಣಾ ಕೇಂದ್ರ, ವೇದಪಾಠ ಶಾಲೆ, ಪ್ರಸಾದ ನಿಲಯ ನಿರ್ಮಾಣವಾಗಲಿದೆ’ ಎಂದು ತಿಳಿಸಿದರು.

ಸಂಘದ ಜಿಲ್ಲಾ ಸಂಪರ್ಕ ಪ್ರಮುಖ ರೇವಣಸಿದ್ದಪ್ಪ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ, ಕಮಲಾಪುರದ ಪಟ್ಟಣ ಪಂಚಾಯತಿ ಸದಸ್ಯರಾದ ಮಾಳಗಿ ರಾಮಸ್ವಾಮಿ, ಲಿಂಗಪ್ಪ, ರಾಜು, ಹಂಪಿ ಗ್ರಾಮ ಪಂಚಾಯತಿ ಸದಸ್ಯರಾದ ಸ್ವಾತಿ ಸಿಂಗ್, ಸದಸ್ಯೆ ವಿನುತ, ಸುಧಾ, ಮೋಹನ್ ಚಿಕ್ಕಭಟ್ ಜೊಷಿ, ಶಿವರಾಜ್ ಕಟ್ಟೆ, ವೆಂಕಟೇಶ್ ಬುಡ್ಡೆ, ಯಲ್ಲಪ್ಪ ಬುಡ್ಡೆ, ಬಸವನಗೌಡ, ಮೌನೇಶ್ ಬಡಿಗೇರ್, ಮಂಜುನಾಥ ಮಾಸ್ಟರ್, ವಿಶ್ವನಾಥ ಮಾಳಗಿ, ಅಯ್ಯನಗೌಡ, ಶ್ರೀಕಾಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT