ಗುರುವಾರ , ಸೆಪ್ಟೆಂಬರ್ 23, 2021
22 °C
ನರೇಗಾ ಅಡಿ ಅನುಷ್ಠಾನಗೊಳ್ಳುತ್ತಿರುವ ರಾಜ್ಯದ ಮೊದಲ ಯೋಜನೆ

ಸೋವೇನಹಳ್ಳಿ ಬಳಿ ಇಕೋ ಪಾರ್ಕ್‌; ₹1.16 ಕೋಟಿ ಮಂಜೂರು

ಕೆ. ಸೋಮಶೇಖರ Updated:

ಅಕ್ಷರ ಗಾತ್ರ : | |

Prajavani

ಹೂವಿನಹಡಗಲಿ: ತಾಲ್ಲೂಕಿನ ಸೋವೇನಹಳ್ಳಿ ಬಳಿ ಇಕೋ ಪಾರ್ಕ್‌ ನಿರ್ಮಿಸುವ ಕ್ರಿಯಾ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದ್ದು, ಅಲ್ಲಿ ಸದ್ಯದಲ್ಲೇ ಸುಂದರ ‘ಹಸಿರು ಉದ್ಯಾನ’ ರೂಪುಗೊಳ್ಳಲಿದೆ.

ಸೋವೇನಹಳ್ಳಿ ಸಮೀಪದ 27 ಎಕರೆ ಸರ್ಕಾರಿ ಭೂಮಿಯನ್ನು ಈ ಯೋಜನೆಗೆ ಗುರುತಿಸಲಾಗಿದೆ. ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ಈ ಯೋಜನೆಗೆ ₹1.16 ಕೋಟಿ ಮಂಜೂರಾಗಿದೆ. ನರೇಗಾ ಅಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ರಾಜ್ಯದ ಮೊದಲ ಇಕೋ ಪಾರ್ಕ್‌ ಇದಾಗಿದೆ. ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಅಧಿಕಾರಿಗಳು ಯೋಜನೆ ಸಿದ್ಧಪಡಿಸಿದ್ದಾರೆ.

ಜಿಲ್ಲಾ ಪಂಚಾಯ್ತಿಯ ಈ ಹಿಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರ ಕನಸಿನ ಯೋಜನೆ ಇದಾಗಿದೆ. ನರೇಗಾ ಯೋಜನೆ ಅಡಿ ಪಶ್ಚಿಮ ಬಂಗಾಳ ಮಾದರಿಯ ಸುಂದರ ಹಸಿರು ಉದ್ಯಾನ ನಿರ್ಮಿಸಲು ಅವರು ಸೋವೇನಹಳ್ಳಿ ಬಳಿ ಸ್ಥಳ ಗುರುತಿಸಿದ್ದರು. ಈಗಿನ ಸಿ.ಇ.ಒ. ಕೆ.ನಿತೀಶ್ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಉತ್ಸಾಹ ತೋರಿದ್ದು, ತಾಲ್ಲೂಕು ಪಂಚಾಯ್ತಿಯ ಕಾರ್ಯನಿರ್ವಾಹಕ ಅಧಿಕಾರಿ ಯು.ಎಚ್.ಸೋಮಶೇಖರ ಇಚ್ಛಾಶಕ್ತಿ ಮೇರೆಗೆ ಮಾದರಿ ಯೋಜನೆ ಸಿದ್ಧವಾಗಿದೆ.

ಜನರಲ್ಲಿ ಹಸಿರು ಪರಿಸರದ ಬಗ್ಗೆ ಅರಿವು ಮೂಡಿಸುವ ಜತೆಗೆ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಇಕೋ ಪಾರ್ಕ್‌ಗೆ ಗುರುತಿಸಿರುವ 27 ಎಕರೆ ಪ್ರದೇಶದ ಸುತ್ತಲೂ ಅಂದಾಜು 3,000 ಮೀಟರ್ ಉದ್ದ ಚೈನ್‌ಲಿಂಕ್‌ ತಂತಿ ಬೇಲಿ ಹಾಕಲಾಗುತ್ತಿದ್ದು, ಆಕರ್ಷಣೆ ಹೆಚ್ಚಿಸಲು ಅಲಂಕಾರಿಕ ಗಿಡ, ಬಳ್ಳಿಯಿಂದಲೇ ಜೀವಂತ ಬೇಲಿಯನ್ನು ರೂಪಿಸಲಾಗುತ್ತಿದೆ. ಇಲ್ಲಿ ವಿಶೇಷವಾಗಿ ಅಳಿವಿನ ಅಂಚಿನಲ್ಲಿರುವ ಗಿಡಮರಗಳು, ವಿವಿಧ ಜಾತಿಯ ಹಣ್ಣಿನ ಮರಗಳನ್ನು ಬೆಳೆಸಲಾಗುತ್ತಿದೆ.

ಒಂದು ಭಾಗದಲ್ಲಿ ಸುಂದರ ಉದ್ಯಾನ ಅಭಿವೃದ್ಧಿಪಡಿಸಿ ಸಿಮೆಂಟ್‌ ಕಲಾಕೃತಿ ಇರುವ ರಾಕ್‌ ಗಾರ್ಡನ್ ಅಭಿವೃದ್ಧಿಪಡಿಸಿ ಮಕ್ಕಳ ಆಟಿಕೆಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ. ರಾಷ್ಟ್ರೀಯ ಭೌಗೋಳಿಕ ಮಾನ್ಯತೆ ಪಡೆದಿರುವ ‘ಹಡಗಲಿ ಮಲ್ಲಿಗೆ’ ಮತ್ತು ಗುಲಾಬಿ ತೋಟವನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಲಂಕಾರಿಕ ಹೂ ಗಿಡ, ಸುಗಂಧರಾಜ, ಗೆಡ್ಡೆ ಜಾತಿಯ ಹೂ ಗಿಡ, ಔಷಧಿ ಮತ್ತು ಸುಗಂಧ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಇಲ್ಲಿ ಕಲ್ಯಾಣಿ ಮಾದರಿಯ ಬೃಹತ್ ಕೃಷಿ ಹೊಂಡ ನಿರ್ಮಾಣ ಹಾಗೂ ಹಳೆಯ ಬಾವಿಯನ್ನು ನವೀಕರಿಸಿ ಜಲಮೂಲವನ್ನು ಸಂರಕ್ಷಿಸುವುದು ಯೋಜನೆಯಲ್ಲಿ ಸೇರಿದೆ.

ಇಕೋ ಪಾರ್ಕ್‌ ನಿರ್ವಹಣೆಯನ್ನು ಸ್ತ್ರೀ ಶಕ್ತಿ ಸಂಘಗಳಿಗೆ ವಹಿಸಿಕೊಡುವ ಉದ್ದೇಶವಿದೆ. ಉದ್ಯಾನ ಆವರಣದಲ್ಲೇ ಮಹಿಳಾ ಸಭಾ ಭವನ ನಿರ್ಮಿಸಲಾಗುತ್ತಿದೆ. ಇಲ್ಲಿ ಬೆಳೆಯಲಾಗುವ ಮಲ್ಲಿಗೆ, ಗುಲಾಬಿ, ಇತರೆ ಅಲಂಕಾರಿಕ ಹೂಗಳಿಂದ ಮಹಿಳೆಯರ ಆದಾಯ ಚಟುವಟಿಕೆ ಹೆಚ್ಚಿಸಲು ಯೋಜಿಸಿದೆ. ಯೋಜನಾ ಸ್ಥಳಕ್ಕೆ ಈಚೆಗೆ ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ನಂದಿನಿ ಭೇಟಿ ನೀಡಿ ಪರಿಶೀಲಿಸಿ, ಯೋಜನಾ ವೆಚ್ಚ ಹೆಚ್ಚಾದರೂ ಅಡ್ಡಿಯಿಲ್ಲ. ಹಲವು ಮಾರ್ಪಾಡುಗಳೊಂದಿಗೆ ಸುಂದರ ಉದ್ಯಾನ ನಿರ್ಮಿಸಿ ಎಂದು ಸಲಹೆ ನೀಡಿದ್ದಾರೆ. ಮೇ ತಿಂಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು