ಜೋಳ, ರಾಗಿ ರೊಟ್ಟಿಗೆ ಹೆಸರಾಗಿದೆ ಹೂವಿನಹಡಗಲಿಯ ಕುರುವತ್ತಿ ಬಸವೇಶ್ವರ ಖಾನಾವಳಿ

ಶುಕ್ರವಾರ, ಜೂಲೈ 19, 2019
24 °C

ಜೋಳ, ರಾಗಿ ರೊಟ್ಟಿಗೆ ಹೆಸರಾಗಿದೆ ಹೂವಿನಹಡಗಲಿಯ ಕುರುವತ್ತಿ ಬಸವೇಶ್ವರ ಖಾನಾವಳಿ

Published:
Updated:
Prajavani

ಹೂವಿನಹಡಗಲಿ: ಪಟ್ಟಣದ ಹೊಸ ಬಸ್‌ ನಿಲ್ದಾಣ ಹತ್ತಿರವಿರುವ ಕುರುವತ್ತಿ ಬಸವೇಶ್ವರ ಖಾನಾವಳಿಯು ಜೋಳದ ರೊಟ್ಟಿ, ರಾಗಿ ರೊಟ್ಟಿ, ರಾಗಿ ಮುದ್ದೆ ಊಟಕ್ಕೆ ಜನಪ್ರಿಯವಾಗಿದೆ.

ಇಲ್ಲಿ ಸಿಗುವ ಬಿಸಿ ರೊಟ್ಟಿ ಪಲ್ಯ, ಮುದ್ದೆ ಶೇಂಗಾ ಬಜ್ಜಿಯ ಊಟ ಸವಿದವರು ಮತ್ತೆ ಮತ್ತೆ ಈ ಕಡೆ ಬರುತ್ತಲೇ ಇರುತ್ತಾರೆ. ಸರ್ಕಾರಿ ಕಚೇರಿಗಳ ಸಿಬ್ಬಂದಿ, ದಿನಗೂಲಿ ನೌಕರರು, ವಿವಿಧ ಕಂಪೆನಿಗಳ ಸೇವಾ ಪ್ರತಿನಿಧಿಗಳು ಈ ಖಾನಾವಳಿಯ ಕಾಯಂ ಗ್ರಾಹಕರು.

ಪಟ್ಟಣ ನಿವಾಸಿ ಹಕ್ಕಂಡಿ ಚಂದ್ರು ಹಾಗೂ ಕುಟುಂಬದವರು ಐದು ವರ್ಷದಿಂದ ಈ ಖಾನಾವಳಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಶುಚಿ, ರುಚಿಗೆ ಆದ್ಯತೆ ನೀಡಿರುವುದರಿಂದ ಇಲ್ಲಿನ ಭೋಜನಕ್ಕೆ ನೌಕರ, ಸಿಬ್ಬಂದಿ ಹೆಚ್ಚು ಆಕರ್ಷಿತರಾಗಿದ್ದಾರೆ.

ಮಧ್ಯಾಹ್ನದ ಊಟಕ್ಕೆ ಜೋಳದ ರೊಟ್ಟಿ, ರಾಗಿ ರೊಟ್ಟಿ, ಚಪಾತಿ ಎರಡು ವಿಧದ ಪಲ್ಯ, ಸೌತೆಕಾಯಿ, ಈರುಳ್ಳಿ, ಅನ್ನ ಸಾಂಬರ್, ಹಪ್ಪಳ, ಉಪ್ಪಿನಕಾಯಿ, ಮೊಸರು ಇರುತ್ತದೆ, ಊಟದ ವೇಳೆಯಲ್ಲೇ ತಯಾರಿಸಿ ಬಡಿಸುವ ಬಿಸಿರೊಟ್ಟಿ, ರುಚಿಯಾದ ಪಲ್ಯಕ್ಕೆ ಗ್ರಾಹಕರು ಮನಸೋತಿದ್ದಾರೆ. ರಾಗಿ ಮುದ್ದೆ ಶೇಂಗಾ ಬಜ್ಜಿ ಈ ಹೋಟೆಲ್‌ನ ಮತ್ತೊಂದು ವಿಶೇಷ.

ರೊಟ್ಟಿ ಹಾಗೂ ರಾಗಿ ಮುದ್ದೆಯ ಪ್ಲೇಟ್‌ ಊಟಕ್ಕೆ ₹50, ಪ್ರತಿ ಸೋಮವಾರ ಮಾತ್ರ ಸಿಗುವ ಹೋಳಿಗೆ ಊಟಕ್ಕೆ ₹60 ದರ ನಿಗದಿಪಡಿಸಿದ್ದಾರೆ. ಮಧ್ಯಾಹ್ನ 12.30 ರಿಂದ 4 ಗಂಟೆವರೆಗೆ ಮತ್ತು ರಾತ್ರಿ 7.30 ರಿಂದ 9.30ರ ವರೆಗೆ ಊಟ ದೊರೆಯುತ್ತದೆ. ಪ್ರತಿದಿನ ಮಧ್ಯಾಹ್ನ, ರಾತ್ರಿ ಸೇರಿ 200ಕ್ಕೂ ಹೆಚ್ಚು ಜನರು ಊಟಕ್ಕೆ ಇಲ್ಲಿಗೆ ಭೇಟಿ ನೀಡುತ್ತಾರೆ. ಸರ್ಕಾರಿ ಕಚೇರಿ, ಸಂಘ ಸಂಸ್ಥೆಗಳ ಊಟದ ಆರ್ಡ್‌ರ್‌ಗಳನ್ನು ಮಾಡಿಕೊಡುತ್ತಾರೆ.

ಮಾಲೀಕ ಹಕ್ಕಂಡಿ ಚಂದ್ರು, ಪತ್ನಿ ದೇವಕ್ಕ ಅವರು ರುಚಿ ರುಚಿ ಅಡುಗೆ ತಯಾರಿಸುತ್ತಾರೆ. ಮಕ್ಕಳಾದ, ಪದವಿ ವಿದ್ಯಾರ್ಥಿ ಹೇಮಂತ್, ಲಾವಣ್ಯ ಕೆಲಸ ಕಾರ್ಯಗಳಿಗೆ ನೆರವಾಗುತ್ತಾರೆ. ರೊಟ್ಟಿ ತಯಾರಿಸಲು, ಶುಚಿಗೊಳಿಸಲು ನಾಲ್ಕು ಜನರಿಗೆ ಕೆಲಸ ಕೊಟ್ಟಿದ್ದಾರೆ.

‘ಕೆಲಸವಿಲ್ಲದೇ ಖಾಲಿ ಓಡಾಡಿಕೊಂಡಿದ್ದ ನನಗೆ ಕೆಲವರು ಖಾನಾವಳಿ ತೆರೆಯುವಂತೆ ಸಲಹೆ ನೀಡಿದರು. ಪತ್ನಿಗೆ ರೊಟ್ಟಿ ಹಾಗೂ ರುಚಿಯಾದ ಅಡುಗೆ ತಯಾರಿಕೆಯ ಒಲವು ಇದ್ದುದರಿಂದ ಈ ಕಡೆ ವಾಲುವಂತಾಯಿತು. ಸಂಬಂಧಿ ಗದ್ದಿಕೇರಿ ನಾಗಪ್ಪ, ತೋಟದ ಮನೆ ಕೊಟ್ರೇಶ ಆರಂಭದಲ್ಲಿ ಎಲ್ಲ ರೀತಿಯ ನೆರವು, ಮಾರ್ಗದರ್ಶನ ನೀಡಿದ್ದರಿಂದ ಖಾನಾವಳಿಯಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು’ ಎಂದು ಹಕ್ಕಂಡಿ ಚಂದ್ರು ನೆನಪು ಮಾಡಿಕೊಂಡರು.

‘ಶುಚಿ, ರುಚಿಗೆ ಹಾಗೂ ಗ್ರಾಹಕರ ಸಂತೃಪ್ತಿಗೆ ಮೊದಲ ಆದ್ಯತೆ ನೀಡಿದ್ದೇವೆ. ಪ್ರತಿದಿನ 200ಕ್ಕೂ ಹೆಚ್ಚು ಜನರು ನಮ್ಮಲ್ಲಿ ಊಟ ಮಾಡುತ್ತಾರೆ. ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆ’ ಎಂದು ಅವರು ಹೇಳಿದರು.
 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !