ಶುಕ್ರವಾರ, ಆಗಸ್ಟ್ 23, 2019
22 °C
ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆ ನಂತರ ಸಂಸದ ದೇವೇಂದ್ರಪ್ಪ ಹೇಳಿಕೆ

ಜಲಾಶಯದ ನೀರಿನಿಂದ ಐದು ಕೆರೆ ಭರ್ತಿ

Published:
Updated:
Prajavani

ಹೊಸಪೇಟೆ: ‘ತುಂಗಭದ್ರಾ ಜಲಾಶಯ ಕಾಲುವೆ ಭಾಗದ ಐದು ಕೆರೆಗಳನ್ನು ತುಂಬಿಸಲಾಗುವುದು’ ಎಂದು ಸಂಸದ ವೈ. ದೇವೇಂದ್ರಪ್ಪ ಭರವಸೆ ನೀಡಿದರು.

ಮಂಗಳವಾರ ನಗರದ ಅಮರಾವತಿ ಅತಿಥಿ ಗೃಹದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಮಲಾಪುರ ಕೆರೆ, ಅಳ್ಳಿಕೆರೆ, ಗೌರಮ್ಮ ಕೆರೆ, ವಿಠಲಾಪುರ ಕೆರೆ ಹಾಗೂ ದರೋಜಿ ಕೆರೆಗಳನ್ನು ತುಂಬಿಸಲಾಗುವುದು. ಕಮಲಾಪುರ ಹಾಗೂ ರಾಯರ ಕೆರೆ ಅತಿಕ್ರಮಣದ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಮುಂದುವರೆಯುತ್ತೇನೆ. ಒಂದುವೇಳೆ ಯಾರಾದರೂ ಕೆರೆ ಜಾಗ ಒತ್ತುವರಿ ಮಾಡಿಕೊಂಡಿದ್ದರೆ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು’ ಎಂದು ಹೇಳಿದರು.

‘ನಮ್ಮ ಸುತ್ತಮುತ್ತಲಿರುವ ಕೆರೆಗಳನ್ನು ತುಂಬಿಸಿದರೆ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಅದನ್ನೇ ನೆಚ್ಚಿಕೊಂಡು ಕೃಷಿ ಮಾಡುತ್ತಿರುವ ರೈತರು ಉಳುಮೆ ಮಾಡಲು ಸಾಧ್ಯವಾಗುತ್ತದೆ. ನಾನು ಕೂಡ ಒಬ್ಬ ರೈತನ ಮಗ. ರೈತರ ನೋವು ಏನೆಂಬುದು ನನಗೆ ಗೊತ್ತಿದೆ. ಅಧಿಕಾರಿಗಳ ಬೆನ್ನು ಹತ್ತಿ ನಾನೇ ಮುಂದಾಗಿ ಕೆರೆ ತುಂಬಿಸುತ್ತೇನೆ’ ಎಂದು ಅಭಯ ನೀಡಿದರು.

‘ನಮ್ಮ ಜಿಲ್ಲೆಯಲ್ಲಿ ದೊಡ್ಡದಾದ ಜಲಾಶಯವಿದ್ದರೂ ಜನ ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿರುವುದೇ ದುರದೃಷ್ಟಕರ ವಿಚಾರ. ಜಲಾಶಯದ ನೀರಿನಿಂದ ಕುಡಿಯುವ ನೀರು, ಕೆರೆ ಕಟ್ಟೆ ತುಂಬಿಸುವ ವಿಚಾರದಲ್ಲಿ ನಾನು ಬಹಳ ಗಂಭೀರವಾಗಿದ್ದೇನೆ. ಜಲಾಶಯದ ಹಿನ್ನೀರು ಕೂಡ ಹೇಗೆ ಸದ್ಭಳಕೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ತಜ್ಞರಿಂದ ಮಾಹಿತಿ ಪಡೆಯುತ್ತೇನೆ. ನೀರಾವರಿ ನನ್ನ ಮೊದಲ ಆದ್ಯತೆ’ ಎಂದು ಸ್ಪಷ್ಟಪಡಿಸಿದರು.

‘ಕೇಂದ್ರ ಹಾಗೂ ರಾಜ್ಯದಲ್ಲಿ ರೈತ ಪರವಾದ ಸರ್ಕಾರಗಳಿವೆ. ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಬಂದ್‌ ಆಗಿರುವುದರಿಂದ ಅನೇಕ ಕಬ್ಬು ಬೆಳೆಗಾರರು ಸಮಸ್ಯೆ ಎದುರಿಸುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಈ ಸಂಬಂಧ ಶೀಘ್ರದಲ್ಲೇ ಮುಖ್ಯಮಂತ್ರಿ ಬಳಿಗೆ ನಿಯೋಗ ಕರೆದೊಯ್ದು ಸಮಸ್ಯೆ ಬಗೆಹರಿಸಲು ಶ್ರಮಿಸುವೆ. ರೈತರ ಹಿತ ಕಾಪಾಡುವುದು ನನ್ನ ಮೊದಲ ಆದ್ಯತೆ’ ಎಂದು ಹೇಳಿದರು.

‘ತಾಲ್ಲೂಕಿನ ಪಿ.ಕೆ. ಹಳ್ಳಿಯ ಶೆಟ್ಟಿ ಕೆರೆ ಕಾಮಗಾರಿ ಒಂದುವೇಳೆ ಕಳಪೆಯಾಗಿದ್ದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಭಾಗದಲ್ಲಿ ಸರ್ಕಾರಿ ಯೋಜನೆಗಳು ಪ್ರಗತಿಯಲ್ಲಿದ್ದರೆ ಆ ಭಾಗದ ಜನ ಅವುಗಳ ಮೇಲೆ ನಿಗಾ ಇಡಬೇಕು. ಕಾಮಗಾರಿ ಕಳಪೆಯಾಗಿರುವುದು ಕಂಡು ಬಂದರೆ ಗಮನಕ್ಕೆ ತರಬೇಕು. ಎಲ್ಲರೂ ಜವಾಬ್ದಾರಿ ಅರಿತುಕೊಂಡು ಕೆಲಸ ಮಾಡಬೇಕಿದೆ’ ಎಂದರು.

ಮುಖಂಡರಾದ ಸಾಲಿ ಸಿದ್ದಯ್ಯ ಸ್ವಾಮಿ, ರಾಣಿ ಸಂಯುಕ್ತಾ, ಕಿಶೋರ ಪತ್ತಿಕೊಂಡ, ಅನಂತ ಪದ್ಮನಾಭ, ಕಟಗಿ ರಾಮಕೃಷ್ಣ, ರಾಮಚಂದ್ರಗೌಡ, ಶಂಕರ್‌ ಮೇಟಿ ಇದ್ದರು.

Post Comments (+)