ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆ ನೀರು ಕುಡಿದು ಬಾಲಕಿ ದಾರುಣ ಸಾವು! ಕಂಪ್ಲಿಯಲ್ಲಿ ಕರುಣಾಜನಕ ಘಟನೆ

ಕಂಪ್ಲಿ ತಾಲ್ಲೂಕು ಗೋನಾಳು ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಬಾಲಕಿ ಸಾವು; 20 ಮಂದಿ ಅಸ್ವಸ್ಥ
Last Updated 25 ಜುಲೈ 2022, 13:33 IST
ಅಕ್ಷರ ಗಾತ್ರ

ಕಂಪ್ಲಿ/ಬಳ್ಳಾರಿ: ಕಲುಷಿತ ನೀರು ಕುಡಿದು ಅಸ್ವಸ್ಥಳಾಗಿದ್ದ ಬಾಲಕಿಯೊಬ್ಬಳು ಮೃತಪಟ್ಟು, 20 ಮಂದಿ ಅಸ್ವಸ್ಥರಾದ ಘಟನೆ ಕಂ‍ಪ್ಲಿ ತಾಲ್ಲೂಕಿನ ಹಂಪಾದೇವನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋನಾಳು ಗ್ರಾಮದಲ್ಲಿ ನಡೆದಿದೆ.

ಸುಕನ್ಯಾ (11) ಮೃತಪಟ್ಟ ಬಾಲಕಿ. ಈಕೆ ಐದನೇ ತರಗತಿ ವಿದ್ಯಾರ್ಥಿನಿ. ಹಂಪಾದೇವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋನಾಳು ಗ್ರಾಮದ ಕೆಲವರಿಗೆ ಶನಿವಾರ ಕಲುಷಿತ ನೀರು ಕುಡಿದ ಬಳಿಕ ವಾಂತಿ– ಭೇದಿ ಆರಂಭವಾಯಿತು. ಅಸ್ವಸ್ಥರಲ್ಲಿ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಳ್ಳಾರಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಇಬ್ಬರು, ಕಂಪ್ಲಿ ಅಭಯ ಆಸ್ಪತ್ರೆಗೆ ಇಬ್ಬರು ಮತ್ತು ಗಂಗಾವತಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೆಲವರು ದಾಖಲಾಗಿದ್ದಾರೆ.

ಭಾನುವಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಇಲಾಖೆ ಆರಂಭಿಸಿರುವ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ಬಾಲಕಿಗೆ ಚಿಕಿತ್ಸೆ ನೀಡಿ ಮನೆಗೆ ಕಳಿಸಲಾಗಿತ್ತು. ತಡರಾತ್ರಿ ಈಕೆಯ ಆರೋಗ್ಯದಲ್ಲಿ ಏರುಪೇರಾಯಿತು. ಸೋಮವಾರ ಬೆಳಿಗ್ಗೆ ಕಂಪ್ಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಬಾಲಕಿ ಮೃತಪಟ್ಟಳು.

ಗೋನಾಳು ಗ್ರಾಮಕ್ಕೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆ. ಲಿಂಗಮೂರ್ತಿ, ತಹಶೀಲ್ದಾರ್‌ ಗೌಸಿಯಾ ಬೇಗಂ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್‌.ಎಲ್‌ ಜನಾರ್ದನ್‌ ಭೇಟಿ ನೀಡಿದ್ದರು.

ಬಾಲಕಿ ಸಾವಿನಿಂದ ಆಕ್ರೋಶಗೊಂಡ ಗ್ರಾಮಸ್ಥರು ಆರೋಗ್ಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

’ಬಾಲಕಿ ಸಾವಿಗೆ ಕಲುಷಿತ ನೀರು ಸೇವನೆ ಕಾರಣ. ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಎರಡು ತಿಂಗಳಿಂದ ಕೆಟ್ಟಿದೆ. ಇದರಿಂದ ಕೊಳವೆ ಬಾವಿ ನೀರು ಸೇವನೆ ಅನಿವಾರ್ಯ ಆಗಿದೆ. ಈ ಕುರಿತು ಗ್ರಾಮ ಪಂಚಾಯಿತಿ ಪಿಡಿಒ ಗಮನಕ್ಕೆ ತಂದರೂ ನಿರ್ಲಕ್ಷ್ಯ ತೋರಿದರು‘ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಇದೇ 23ರಿಂದ ಗ್ರಾಮದಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಇಲ್ಲಿಯವರೆಗೆ 20ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಗ್ರಾಮಕ್ಕೆ ನೀರು ಪೂರೈಸುವ ‍‍ಪೈಪ್‌ಲೈನ್ ಬಂದ್ ಮಾಡಿ ಪರಿಶೀಲಿಸಲಾಗುತ್ತಿದೆ. ವಾಂತಿಭೇದಿ ನಿಯಂತ್ರಣಕ್ಕೆ ಬರುವವರೆಗೆ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಮುಂದುವರಿಸಲಾಗುವುದು ಎಂದು ಡಿಎಚ್ಒ ತಿಳಿಸಿದರು.

ಗ್ರಾಮದ ಸರ್ಕಾರಿ ಶಾಲೆಗೆ ಸೋಮವಾರದಿಂದ ಮೂರು ದಿನ ರಜೆ ಘೋಷಿಸಲಾಗಿದೆ. ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಸ್ಥಳಕ್ಕೆ ಭೇಟಿ ನೀಡಿದ್ದರು. ಅವರಿಗೂ ಜನ ಅಧಿಕಾರಿಗಳ ವಿರುದ್ಧ ದೂರು ಹೇಳಿದರು.

–––

ಕಾಲುವೆ ನೀರು ಕುಡಿದು ಸಾವು!

‘ಗೋನಾಳು ಗ್ರಾಮದ ಘಟನೆಗೆ ಕಾರಣವೇನೆಂದು ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗ್ರಾಮಕ್ಕೆ ಪೂರೈಸುತ್ತಿರುವ ನೀರಿನ ಸ್ಯಾಂಪಲ್‌ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ. ಶೀಘ್ರ ವರದಿ ಬರಲಿದೆ‘ ಎಂದು ಜಿಲ್ಲಾಧಿಕಾರಿ ಪವನಕುಮಾರ್‌ ಮಾಲಪಾಟಿ ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ತಿಳಿಸಿದರು.

’ಕಲುಷಿತ ನೀರು ಕುಡಿದು ಜನ ಅಸ್ವಸ್ಥರಾದ ವಿಷಯ ಭಾನುವಾರ ಬೆಳಿಗ್ಗೆ ಗಮನಕ್ಕೆ ಬಂತು. ತಹಶೀಲ್ದಾರ್‌ ವಿಷಯ ತಿಳಿಸಿದರು. ತಕ್ಷಣ ಅವರಿಗೆ ಗ್ರಾಮಕ್ಕೆ ತೆರಳುವಂತೆ ಸೂಚಿಸಿದೆ. ಇಂದು ತಾಲ್ಲೂಕು ಆರೋಗ್ಯಾಧಿಕಾರಿ ನೇತೃತ್ವದ ಆರೋಗ್ಯ ಸಿಬ್ಬಂದಿ ತಂಡ ಅಸ್ವಸ್ಥರ ಮನೆಗಳಿಗೆ ಹೋಗಿ ನೀರು ಮತ್ತು ಮಲದ ಸ್ಯಾಂಪಲ್‌ ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದೆ’ಎಂದು ಜಿಲ್ಲಾಧಿಕಾರಿ ಹೇಳಿದರು.

ಕಳೆದ ವರ್ಷ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮರಬ್ಬೀಹಳ್ಳಿಯಲ್ಲಿ ಕಲುಷಿತ ನೀರು ಕುಡಿದು ಕೆಲವರು ಅಸ್ವಸ್ಥರಾದ ಬಳಿಕ ಗ್ರಾಮೀಣ ಕುಡಿಯುವ ನೀರು ಯೋಜನೆಗೆ ಅತ್ಯಂತ ಪ್ರಾಮುಖ್ಯತೆ ನೀಡಲಾಗುತ್ತಿದೆ. ಗೋನಾಳು ಗ್ರಾಮಕ್ಕೂ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

’ಮೃತಪಟ್ಟ ಬಾಲಕಿ ಕಾಲುವೆ ನೀರು ಸೇವಿಸಿದ್ದಳು ಎಂದು ಪ್ರಾಥಮಿಕ ವರದಿ ಹೇಳಿದೆ. ಕಾರಣ ಏನೇ ಇರಲಿ ತ‍ಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು‘ ಎಂದು ಜಿಲ್ಲಾಧಿಕಾರಿ ಮಾಲಪಾಟಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT