ಭಾನುವಾರ, ಜನವರಿ 26, 2020
18 °C
ಮೂಗಿಗೆ ತುಪ್ಪ ಸವರುವ ಕೆಲಸ; ದ್ವಿಪಥ ರಸ್ತೆಯ ಒಂದು ಬದಿಗಷ್ಟೇ ಹಣ ಮಂಜೂರು

ಅರೆಬರೆ ರೊಕ್ಕ, ಅರೆಬರೆ ರಸ್ತೆ ಕಾಮಗಾರಿ!

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಇಲ್ಲಿನ ಎಂ.ಪಿ. ಪ್ರಕಾಶ್‌ ನಗರ ಬಳಿಯ ದ್ವಿಪಥ ವರ್ತುಲ ರಸ್ತೆಯ ಒಂದು ಬದಿಗಷ್ಟೇ ಸರ್ಕಾರದಿಂದ ಅನುದಾನ ಮಂಜೂರಾಗಿರುವುದರಿಂದ ಸದ್ಯ ಆ ರಸ್ತೆಯನ್ನಷ್ಟೇ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇನ್ನೊಂದು ಬದಿಯ ರಸ್ತೆ ಸುಧಾರಣೆ ಸಾರ್ವಜನಿಕರನ್ನು ಚಿಂತೆಗೀಡು ಮಾಡಿದೆ.

ಅನಂತಶಯನ ಗುಡಿ ಕ್ರಾಸ್‌ನಿಂದ ಬಳ್ಳಾರಿ ರಸ್ತೆಗೆ ಕೂಡುವ ವರ್ತುಲ ರಸ್ತೆ ಮಳೆಗಾಲದಲ್ಲಿ ಸಂಪೂರ್ಣ ಹದಗೆಟ್ಟಿತ್ತು. ಆಳುದ್ದ ಗುಂಡಿಗಳು ಬಿದ್ದದ್ದರಿಂದ ವಾಹನ ಸಂಚಾರ ದುಸ್ತರವಾಗಿತ್ತು. ಸಾರ್ವಜನಿಕರ ಸತತ ಒತ್ತಾಯದ ಮೇರೆಗೆ ಲೋಕೋಪಯೋಗಿ ಇಲಾಖೆಯು ರಸ್ತೆ ಅಭಿವೃದ್ಧಿ ಪಡಿಸಲು ಮುಂದಾಗಿದೆ. ಆದರೆ, ದ್ವಿಪಥ ರಸ್ತೆಯ ಸಂಪೂರ್ಣ ಅಭಿವೃದ್ಧಿಗೆ ಅದರ ಬಳಿ ಅನುದಾನವೇ ಇಲ್ಲ.

ರಸ್ತೆ ಅಭಿವೃದ್ಧಿಗಾಗಿ ಮೂರು ತಿಂಗಳಿಂದ ಒಂದು ಬದಿಯಲ್ಲಿ ವಾಹನಗಳ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ. ಸಿ.ಸಿ. ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಅಂದಿನಿಂದ ಇನ್ನೊಂದು ಬದಿಯಲ್ಲೇ ವಾಹನಗಳು ಸಂಚರಿಸುತ್ತಿವೆ. ಆ ರಸ್ತೆಯಲ್ಲಿ ಅಸಂಖ್ಯ ಗುಂಡಿಗಳು ಬಿದ್ದಿವೆ.

ಅದಿರಿನ ಗಣಿ, ಉಕ್ಕಿನ ಕಾರ್ಖಾನೆ, ಶಾಲಾ–ಕಾಲೇಜು, ಬಳ್ಳಾರಿ ಹಾಗೂ ಆಂಧ್ರ ಪ್ರದೇಶದ ಅನಂತಪುರ ಸೇರಿದಂತೆ ಇತರೆ ಊರುಗಳಿಗೆ ಇದೇ ಮಾರ್ಗದ ಮೂಲಕ ನೂರಾರು ವಾಹನಗಳು ಓಡಾಡುತ್ತವೆ. ಸದಾ ವಾಹನ ದಟ್ಟಣೆಯಿಂದ ಕೂಡಿರುವ ದ್ವಿಪಥದಲ್ಲೇ ಸಾರ್ವಜನಿಕರು ಓಡಾಡುವುದು ಕಷ್ಟವಾಗಿತ್ತು. ಈಗ ಎಲ್ಲರೂ ಒಂದೇ ಮಾರ್ಗದಲ್ಲಿ ಓಡಾಡುವ ಅನಿವಾರ್ಯತೆ ಸೃಷ್ಟಿಯಾಗಿರುವುದರಿಂದ, ಜೀವಭಯದಲ್ಲೇ ತಿರುಗಾಡಬೇಕಿದೆ.

ಹಗಲು –ರಾತ್ರಿ ಪದೇ ಪದೇ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ. ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಅವರ ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ಅಲ್ಲದೇ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಪಾಂಡುರಂಗ ಕಾಲೊನಿ, ಎಂ.ಪಿ. ಪ್ರಕಾಶ್‌ ನಗರ ಬಡಾವಣೆಯ ಜನ ದಿನವೂ ಇದೇ ರಸ್ತೆಯ ಮೂಲಕ ಓಡಾಡುತ್ತಾರೆ. ವಾಹನ ದಟ್ಟಣೆ ನಡುವೆ ಅವರು ಓಡಾಡುವಂತಾಗಿದೆ. ದೂಳಿನ ಕಿರಿಕಿರಿ ಅವರ ನೆಮ್ಮದಿ ಹಾಳುಗೆಡವಿದೆ.

ಸದ್ಯ ಒಂದು ಬದಿಯ ರಸ್ತೆ ಅಭಿವೃದ್ಧಿಯಷ್ಟೇ ಮಾಡಲಾಗುತ್ತಿದೆ ಎಂಬ ವಿಷಯ ತಿಳಿದು ಸ್ಥಳೀಯರು ವಿಚಲಿತರಾಗಿದ್ದಾರೆ. ಸಾಕಷ್ಟು ಸಲ ಮನವಿ ಸಲ್ಲಿಸಿ, ಹೋರಾಟ ನಡೆಸಿದರೂ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಲು ವಿಫಲವಾಗಿದೆ. ಉಪಚುನಾವಣೆ ಇದ್ದದ್ದರಿಂದ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ಜನ ಆರೋಪಿಸುತ್ತಿದ್ದಾರೆ.

‘ಪೂರ್ಣ ಅನುದಾನ ಇರದಿದ್ದರೆ ಈಗ ಕಾಮಗಾರಿ ಕೈಗೆತ್ತಿಕೊಳ್ಳುವ ಅಗತ್ಯವಿರಲಿಲ್ಲ. ಉಪಚುನಾವಣೆ ನೋಡಿಕೊಂಡು ಸರ್ಕಾರ ಜನರಿಗೆ ತೋರಿಸುವ ಉದ್ದೇಶದಿಂದ ರಸ್ತೆ ಅಭಿವೃದ್ಧಿಪಡಿಸಲು ಮುಂದಾಗಿರುವುದು ಇದರಿಂದ ಗೊತ್ತಾಗುತ್ತದೆ. ಆದರೆ, ಇದು ಸರಿಯಾದ ಧೋರಣೆಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂ.ಪಿ. ಪ್ರಕಾಶ್‌ ನಗರದ ನಿವಾಸಿ ಕಾರ್ತಿಕ್‌.

‘ವರ್ತುಲ ರಸ್ತೆ ಆ ಊರಿನ ಪ್ರಮುಖ ಸಂಪರ್ಕ ರಸ್ತೆಯಾಗಿರುತ್ತದೆ. ಅದರ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರಿಸುತ್ತಿರುವುದು ಸರಿಯಲ್ಲ. ಒಂದು ಬದಿಯ ರಸ್ತೆ ಸುಧಾರಣೆಯಾದರೆ ಎಲ್ಲರೂ ಅದರ ಮೇಲೆಯೇ ಓಡಾಡುತ್ತಾರೆ. ಅದರಿಂದ ಮತ್ತೆ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತದೆ’ ಎಂದು ಎಚ್ಚರಿಸಿದರು.

‘ಸಿ.ಸಿ. ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವುದಕ್ಕೂ ಮುನ್ನ ಅದರ ಅಡಿಯಿಂದ ಹಾದು ಹೋಗಿರುವ ಕುಡಿಯುವ ನೀರು, ಒಳಚರಂಡಿ ಪೈಪ್‌ಲೈನ್‌ ಕೆಲಸ ಪೂರ್ಣಗೊಳಿಸಬೇಕಿತ್ತು. ಆದರೆ, ಆ ಕೆಲಸ ಆದಂತೆ ಕಾಣಿಸುತ್ತಿಲ್ಲ. ಈ ಕುರಿತು ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ’ ಎಂದು ಪಾಂಡುರಂಗ ಕಾಲೊನಿಯ ಶರತ್‌ ಅಳಲು ತೋಡಿಕೊಂಡರು.

ಪ್ರತಿಕ್ರಿಯಿಸಿ (+)