ನಾಗತಿಬಸಾಪುರ ಶಾಲೆಯಲ್ಲಿ ಹೈಟೆಕ್‌ ಶಿಕ್ಷಣ,ಗ್ರಾಮೀಣ ಮಕ್ಕಳಿಗೆ ತಂತ್ರಜ್ಞಾನ ಅರಿವು

7
ದಾನಿಗಳ ನೆರವು

ನಾಗತಿಬಸಾಪುರ ಶಾಲೆಯಲ್ಲಿ ಹೈಟೆಕ್‌ ಶಿಕ್ಷಣ,ಗ್ರಾಮೀಣ ಮಕ್ಕಳಿಗೆ ತಂತ್ರಜ್ಞಾನ ಅರಿವು

Published:
Updated:
Deccan Herald

ಹೂವಿನಹಡಗಲಿ: ಸರ್ಕಾರಿ ಶಾಲೆಗಳೆಂದರೆ ಸೋರುವ ಮೇಲ್ಛಾವಣಿ, ಶಿಥಿಲ ಕಟ್ಟಡ, ಶಿಕ್ಷಕರು ಮತ್ತು ಮಕ್ಕಳ ಕೊರತೆ ಇರುವ ತರಗತಿಗಳು ಕಣ್ಣ ಮುಂದೆ ಬರುತ್ತವೆ. ಅದಕ್ಕೆ ಅಪವಾದವೆಂಬಂತೆ ತಾಲ್ಲೂಕಿನ ನಾಗತಿಬಸಾಪುರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ಹೈಟೆಕ್‌ ಶಿಕ್ಷಣ ಪದ್ಧತಿ ಅಳವಡಿಸಿಕೊಂಡು ಮಾದರಿಯಾಗಿದೆ.

ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿ ವರಗೆ ಎಲ್ಲ ಪಠ್ಯಗಳನ್ನು ಸ್ಮಾರ್ಟ್‌ ಕ್ಲಾಸ್‌ನಲ್ಲಿ ಬೋಧಿಸಲಾಗುತ್ತಿದೆ. ತರಗತಿ ವೇಳಾಪಟ್ಟಿಗೆ ಅನುಸಾರವಾಗಿ ಪಠ್ಯ ವಿಷಯಗಳನ್ನು ಆಡಿಯೊ, ವಿಡಿಯೊ ಮೂಲಕ ವಿವರಣೆ ನೀಡಲಾಗುತ್ತಿದೆ. ಇದರಿಂದ ಮಕ್ಕಳ ಗಮನ ಕೇಂದ್ರೀಕರಿಸಲು ಅನುಕೂಲವಾಗಿದ್ದು, ಮಕ್ಕಳ ಕಲಿಕಾ ಪ್ರಗತಿಯಲ್ಲಿ ಸುಧಾರಣೆ ಕಂಡಿದೆ.

ದಾನಿಗಳು, ಶಿಕ್ಷಣ ಪ್ರೇಮಿಗಳ ನೆರವಿನಿಂದ ತಾಲ್ಲೂಕಿನ 65 ಪ್ರಾಥಮಿಕ, 5 ಪ್ರೌಢಶಾಲೆಗಳಲ್ಲಿ ಈಗಾಗಲೇ ಸ್ಮಾರ್ಟ್‌ ಕ್ಲಾಸ್‌ ತೆರೆಯಲಾಗಿದೆ. ಇವೆಲ್ಲವುಗಳಿಗಿಂತ ಭಿನ್ನವಾದ, ಅತ್ಯುನ್ನತ ತಂತ್ರಜ್ಞಾನದ ‘ಸ್ಮಾರ್ಟ್ ಕ್ಲಾಸ್‌’ ನಾಗತಿಬಸಾಪುರ ಶಾಲೆಯಲ್ಲಿ ತೆರೆದಿರುವುದು ವಿಶೇಷ.

ಇದೇ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ಎಂಜಿನಿಯರ್ ಕಾನಹಳ್ಳಿ ಹನುಮಂತಪ್ಪ ಅವರು ಸ್ಮಾರ್ಟ್‌ ಕ್ಲಾಸ್‌ ತೆರೆಯಲು ₨65 ಸಾವಿರ ದೇಣಿಗೆ ನೀಡಿದ್ದಾರೆ. ಲಿಂಗೈಕ್ಯ ಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮೀಜಿ, ಜೆಸ್ಕಾಂ ಎಂಜಿನಿಯರ್ ಎಸ್.ಭೀಮಪ್ಪ ತಲಾ ₨10 ಸಾವಿರ ನೀಡಿದ್ದಾರೆ. ಈ ಹಣ ಬಳಸಿಕೊಂಡು ಶಾಲೆಯಲ್ಲಿ ಅತ್ಯುನ್ನತ ದರ್ಜೆಯ ಸ್ಮಾರ್ಟ್‌ ಕ್ಲಾಸ್‌ ತೆರೆಯಲಾಗಿದೆ.

ಶಾಲೆಯ ಭೌತಿಕ ಪ್ರಗತಿಗಾಗಿ ಊರಿನ ಶಿಕ್ಷಣ ಪ್ರೇಮಿಗಳು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು (ಎಸ್‌.ಡಿ.ಎಂ.ಸಿ.) ಒತ್ತಾಸೆಯಾಗಿ ನಿಂತಿದ್ದಾರೆ. ಶಾಲೆಯಲ್ಲಿರುವ ಎಂಟು ಜನ ಶಿಕ್ಷಕರು ಶಾಲೆಯ ಪ್ರಗತಿಗಾಗಿ ಶ್ರಮಿಸುತ್ತಿದ್ದಾರೆ. ರಾಷ್ಟ್ರೀಯ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಲೆಂದೇ 25 ಜನ ದಾನಿಗಳು ಹಣ ಠೇವಣಿ ಇರಿಸಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತವು ವಿದ್ಯಾರ್ಥಿಗಳಿಗಾಗಿ ಹೈಟೆಕ್‌ ಶೌಚಾಲಯ ನಿರ್ಮಿಸುತ್ತಿದೆ. ಶಾಲಾ ವಾತಾವರಣ ಬದಲಿಸಿ, ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆತರಲು ಮುಖ್ಯಶಿಕ್ಷಕ ಡಿ. ಕೆಂಚ ಹನುಮಪ್ಪ ಹಾಗೂ ಶಿಕ್ಷಕರು ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ.

ಇಡೀ ಶಾಲೆಗೆ ಸುಣ್ಣ ಬಣ್ಣ ಬಳಿಸಲು ಎಲ್ಲ ಶಿಕ್ಷಕರು ತಲಾ ₨5 ಸಾವಿರ ವಂತಿಗೆ ಹಾಕಿಕೊಂಡಿದ್ದಾರೆ. ಅದಕ್ಕೆ ಗ್ರಾಮದ ಕೆಲ ಶಿಕ್ಷಣ ಪ್ರೇಮಿಗಳು ನೆರವು ನೀಡುವ ವಾಗ್ದಾನ ಮಾಡಿದ್ದಾರೆ. ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸೇವಿಸಲು ಅನುಕೂಲ ಆಗುವಂತೆ ಹೆಚ್ಚುವರಿ ಕೊಠಡಿ ಬಳಸಿಕೊಂಡು ಭೋಜನಾಲಯ ನಿರ್ಮಿಸಲು ಯೋಜಿಸಿದ್ದಾರೆ.

ಬದಲಾವಣೆ ದಿಕ್ಕಿನಲ್ಲಿ ಸಾಗಿರುವ ಈ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಲು ಪೋಕಷರು ಉತ್ಸಾಹ ತೋರಿದ್ದಾರೆ. ಸದ್ಯ ಈ ಶಾಲೆಯಲ್ಲಿ 222 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !