ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಸಿದ್ದರಾಮಯ್ಯನವರ ವಿರೋಧಿ ಅಲ್ಲ: ಸಚಿವ ಶ್ರೀರಾಮುಲು

Last Updated 16 ಆಗಸ್ಟ್ 2022, 14:33 IST
ಅಕ್ಷರ ಗಾತ್ರ

ಬಳ್ಳಾರಿ: ’ರಾಮುಲು ಕುರುಬ ಸಮುದಾಯದ ವಿರುದ್ಧ ಅಥವಾ ಸಿದ್ದರಾಮಯ್ಯನವರ ವಿರೋಧಿ ಅಂತ ಯಾರೂ ತಿಳಿದುಕೊಳ್ಳಬೇಡ್ರಿ. ಕಾಂಗ್ರೆಸ್‌ನಲ್ಲಿ ಅವಕಾಶ ಸಿಕ್ಕರೆ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ‘ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

ಬಳ್ಳಾರಿ ನಗರದಲ್ಲಿ ಕುರುಬ ಸಮುದಾಯದ ವಿದ್ಯಾರ್ಥಿ ನಿಲಯವನ್ನು ಸೋಮವಾರ ತಡರಾತ್ರಿ ಉದ್ಘಾಟಿಸಿ ಮಾತನಾಡಿದ ಸಚಿವ ಶ್ರೀರಾಮುಲು, ’ಬೇಕಾದರೆ ಹೋಗಿ ರಾಮುಲು ಮುಖ್ಯಮಂತ್ರಿ ಆಗಬೇಕಾ ಅಂತ ಸಿದ್ದರಾಮಯ್ಯ ಅವರನ್ನು ಕೇಳಿ, ಬಿಜೆಪಿಯಲ್ಲಿ ಅವಕಾಶ ಬಂದರೆ ರಾಮುಲು ಮುಖ್ಯಮಂತ್ರಿ ಆಗಲಿ ಎಂದು ಸಿದ್ದರಾಮಯ್ಯ ಬಯಸುತ್ತಾರೆ‘ ಎಂಬುದಾಗಿ ಸಚಿವರು ಅಭಿ‍ಪ್ರಾಯಪಟ್ಟರು.

’ಹಿಂದುಳಿದವರ ವಿಚಾರ ಬಂದಾಗ ನಾನು ಸಿದ್ದರಾಮಯ್ಯ ಒಂದೇ. ಹಿಂದುಳಿದ ಜಾತಿಗಳನ್ನು ಒಂದು ಮಾಡುವ ಪ್ರಯತ್ಬವನ್ನು ನಾವು ಮಾಡುತ್ತಿದ್ದೇವೆ. ಎಲ್ಲೋ ಒಂದು ಕಡೆ ಕ್ರಾಂತಿ ಆಗಬೇಕು. ನಮ್ಮಲ್ಲಿ ಒಡಕಾಗಬಾರದು. ರಾಜಕಾರಣದಲ್ಲಿ ಪರಸ್ಪರರನ್ನು ಎದುರಿಸುತ್ತೇವೆ. ಆದರೆ, ವಾಸ್ತವವೇ ಬೇರೆ‘ ಎಂದು ಅವರು ವಿಶ್ಲೇಷಿಸಿದರು.

’ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಮುಲು ಎರಡು ಕಡೆ ನಿಂತರು, ಸಿದ್ದರಾಮಯ್ಯ ಎರಡು ಕಡೆ ನಿಂತರು. ರಾಮುಲು ಒಂದು ಕಡೆ ಸೋತರು, ಸಿದ್ದರಾಮಯ್ಯ ಒಂದು ಕಡೆ ಸೋತರು. ಅವರು ಗೆದ್ದಿದ್ದು ಹೇಗೆ, ನಾನು ಗೆದ್ದಿದ್ದು ಹೇಗೆ ಅಂಥ ಒಂದು ಸಲ ಯೋಚನೆ ಮಾಡಿ. ಸಂದರ್ಭ ಬಂದಾಗ ನಾನೇ ಹೇಳುತ್ತೇನೆ‘ ಎಂದು ಬಳ್ಳಾರಿ ಉಸ್ತುವಾರಿ ಸಚಿವರೂ ಆಗಿರುವ ರಾಮುಲು ವಿವರಿಸಿದರು.

’ಎಲ್ಲರ ಮುಂದೆಯೂ ನಾನು ಹೀಗೇ ಹೇಳುತ್ತೇನೆ. ನನಗೆ ಯಾರ ಭಯವೂ ಇಲ್ಲ. ನಾನು ಯಾರ ಗುಲಾಮನೂ ಅಲ್ಲ. ಏಕೆಂದರೆ, ನಮ್ಮ ದೋಸ್ತಿ ಹಂಗಿದೆ. ಒಳಗೊಳಗೆ ಏನೋ ಮಾಡುತ್ತೇವೆ. ಇಬ್ಬರೂ ರಾಜಕಾರಣದಲ್ಲಿ ಇರಬೇಕಲ್ಲ. ಹೇಗೋ ಮಾಡಿ ಇಬ್ಬರೂ ವಿಧಾನಸೌಧ ಪ್ರವೇಶ ಮಾಡುತ್ತೇವೆ‘ ಎಂದು ಸಚಿವರು ಹೇಳಿದರು.

’ಇಂಥ ದೊಡ್ಡ ಜಾತಿ ವ್ಯವಸ್ಥೆಯಲ್ಲಿ ಇವೆಲ್ಲ ನಾವು ಮಾಡಲೇಬೇಕು. ಇವು ರಾಜಕಾರಣದ ತಂತ್ರಗಳು. ನೀವೆಲ್ಲ ಹುಡುಗರು, ನಿಮಗೆ ಇವೆಲ್ಲ ಅರ್ಥ ಆಗೋಲ್ಲ. ಹಿಂದುಳಿದ ಸಮುದಾಯಗಳ ಪರಿಸ್ಥಿತಿ ನನಗೆ ತುಂಬಾ ಚೆನ್ನಾಗಿ ಗೊತ್ತಿದೆ. ನಮ್ಮ ಸಮಾಜಗಳು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು. ಅವಕಾಶ ದೊರೆತರೆ ನಾನು, ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತೇವೆ‘ ಎಂದು ರಾಮುಲು ತಮ್ಮ ಮನದಾಳದ ಇಂಗಿತ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT