ಮೋದಿ ಕೋಟೆಯ ಒಬ್ಬ ಸೇನಾನಿ ನಾನು: ದೇವೇಂದ್ರಪ್ಪ ಮನದಾಳ

ಮಂಗಳವಾರ, ಏಪ್ರಿಲ್ 23, 2019
33 °C
‘ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲುವ ಕೆಲಸ’ ಸಿದ್ಧಾಂತ ನಂಬಿದವನು'

ಮೋದಿ ಕೋಟೆಯ ಒಬ್ಬ ಸೇನಾನಿ ನಾನು: ದೇವೇಂದ್ರಪ್ಪ ಮನದಾಳ

Published:
Updated:
Prajavani

ಹೊಸಪೇಟೆ: ಮಂಗಳವಾರವಷ್ಟೇ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ವೈ. ದೇವೇಂದ್ರಪ್ಪನವರು ಬುಧವಾರ ಸುಡುವ ಬಿಸಿಲು ಲೆಕ್ಕಿಸದೆ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡರು. ಈ ವೇಳೆ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು. ಅದರ ವಿವರ ಇಲ್ಲಿದೆ.

ಪ್ರಶ್ನೆ: ಯಾವ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ಕೈಗೊಂಡಿದ್ದೀರಿ?

ಉತ್ತರ: ಬಳ್ಳಾರಿ ಜಿಲ್ಲೆಯ ಪಶ್ಚಿಮ ಭಾಗದವನಾದ ನನ್ನನ್ನು ಗುರುತಿಸಿ ಬಿಜೆಪಿ ಚುನಾವಣಾ ಕಣಕ್ಕಿಳಿಸಿದೆ. ಈ ಭಾಗದ ಕುಂದುಕೊರತೆ ಸೇರಿದಂತೆ ಸಮಸ್ತ ಜಿಲ್ಲೆಯ ಪ್ರಮುಖ ವಿಚಾರಗಳನ್ನು ಜನರಿಗೆ ತಿಳಿಸುತ್ತ ಪ್ರಚಾರ ಕೈಗೊಂಡಿರುವೆ.

ಪ್ರಶ್ನೆ: ಚುನಾವಣೆಯಲ್ಲಿ ಗೆದ್ದರೆ ಜಿಲ್ಲೆಗೆ ಏನು ಮಾಡಬೇಕು ಅಂದುಕೊಂಡಿದ್ದೀರಿ?

ಉತ್ತರ: ಚುನಾವಣೆಯ ಈ ಸಂದರ್ಭದಲ್ಲಿ ರೈಲು ಹರಿಸುತ್ತೇವೆ, ವಿಮಾನ ಹರಿಸುತ್ತೇವೆ ಎಂದು ನಾನು ಹೇಳಲು ಹೋಗುವುದಿಲ್ಲ. ತುಂಗಭದ್ರಾ ಜಲಾಶಯದಿಂದ ಹೂಳು ತೆಗೆಸುತ್ತೇನೆ. ಮಳೆಯಾಶ್ರಿತ ಪ್ರದೇಶಗಳಿಗೆ ನೀರು ಹರಿಸುತ್ತೇನೆ ಎಂದು ಸುಳ್ಳು ಭರವಸೆಗಳನ್ನು ಜನತೆಗೆ ಕೊಡಲು ಹೋಗುವುದಿಲ್ಲ. ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಸುಳ್ಳು ಭರವಸೆ ಕೊಡುವುದರಲ್ಲಿ ನಿಸ್ಸೀಮರು ಎಂಬುದು ಜನರಿಗೆ ಗೊತ್ತಿದೆ. ‘ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲುವ ಕೆಲಸ’ ಎಂಬ ತತ್ವ ಸಿದ್ಧಾಂತವನ್ನು ಬಲವಾಗಿ ನಂಬಿದ್ದೇನೆ. ಈ ಕಾರಣಕ್ಕಾಗಿಯೇ ಬಿಜೆಪಿ ಪಕ್ಷ ಕೂಡ ನನ್ನನ್ನು ಗುರುತಿಸಿ ಕಣಕ್ಕಿಳಿಸಿದೆ. ಚುನಾವಣೆಯಲ್ಲಿ ಆರಿಸಿ ಬಂದ ನಂತರ ಏನು ಮಾಡಬೇಕು ಎಂಬುದನ್ನು ತಿಳಿಸುತ್ತೇನೆ. ಜತೆಗೆ ಆ ನಿಟ್ಟಿನಲ್ಲಿ ಕೆಲಸ ಮಾಡಿ ತೋರಿಸುತ್ತೇನೆ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷನಾಗಿ, ಸಹಕಾರ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿ ತೋರಿಸಿದ್ದೇನೆ. ಈಗ ನನಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಜನ ನನ್ನನ್ನು ಆರಿಸಿ ಸಂಸತ್ತಿಗೆ ಕಳುಹಿಸುತ್ತಾರೆ ಎಂಬ ಭರವಸೆ ಇದೆ.

ಪ್ರಶ್ನೆ: ಲೋಕಸಭೆ ಉಪಚುನಾವಣೆಯಲ್ಲಿ ನಿಮ್ಮ ಪ್ರತಿಸ್ಪರ್ಧಿ ವಿ.ಎಸ್‌. ಉಗ್ರಪ್ಪನವರು 2.40 ಲಕ್ಷಕ್ಕೂ ಹೆಚ್ಚಿನ ಮತಗಳಿಂದ ಆರಿಸಿ ಬಂದಿದ್ದಾರೆ. ದೊಡ್ಡ ಅಂತರವನ್ನು ಮೀರುವ ಸವಾಲು ನಿಮ್ಮೆದುರಿಗಿದೆ. ಅದಕ್ಕಾಗಿ ಏನು ಯೋಜನೆ ರೂಪಿಸಿದ್ದೀರಿ.

ಉತ್ತರ: ಈ ಸಲ ಪಶ್ಚಿಮ ಭಾಗಕ್ಕೆ ಟಿಕೆಟ್‌ ಸಿಕ್ಕಿರುವುದರಿಂದ ಜನ ಖುಷಿಗೊಂಡಿದ್ದಾರೆ. ಖಂಡಿತವಾಗಿಯೂ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವ ಭರವಸೆ ಇದೆ. ನಿನ್ನೆ ನಾಮಪತ್ರ ಸಲ್ಲಿಸುವ ವೇಳೆ ನಿರೀಕ್ಷೆಗೂ ಮೀರಿ ಜನ ಸೇರಿದ್ದರು. ಜನ ಬದಲಾವಣೆ ಬಯಸಿದ್ದಾರೆ ಎಂಬುದನ್ನು ಇದರಿಂದ ಅರಿಯಬಹುದು. ಕಾರ್ಯಕರ್ತರು ಹಗಲಿರುಳು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಎಲ್ಲೆಡೆ ಮೋದಿಯವರ ಪರವಾದ ಅಲೆಯಿದೆ. ಖಂಡಿತವಾಗಿಯೂ ಉಪಚುನಾವಣೆಯಲ್ಲಿನ ದೊಡ್ಡ ಅಂತರವನ್ನು ಮೀರಿ ಗೆಲ್ಲುವೆ.

ಪ್ರಶ್ನೆ: ದೇವೇಂದ್ರಪ್ಪನವರ ಹೆಸರಿನಲ್ಲಿ ಮತ ಕೇಳುತ್ತಿದ್ದೀರಾ ಅಥವಾ ನರೇಂದ್ರ ಮೋದಿಯವರ ಹೆಸರಲ್ಲಿ ಮತ ಯಾಚಿಸುತ್ತಿದ್ದೀರಿ?

ಉತ್ತರ: ನಮಗೆ ಬೇಕಿರುವುದು ನರೇಂದ್ರ ಮೋದಿಯವರು. ಅವರು ಮತ್ತೆ ಪ್ರಧಾನಿಯಾಗಬೇಕು. ದೇವೇಂದ್ರಪ್ಪ ಬಳ್ಳಾರಿ ಕ್ಷೇತ್ರಕ್ಕಷ್ಟೇ ಸೀಮಿತ. ಮೋದಿಯವರು ಈ ದೇಶವನ್ನು ಮುನ್ನಡೆಸುವವರು. ನಾನು ಸೇರಿದಂತೆ ನನ್ನ ಪಕ್ಷದ ಮುಖಂಡರು, ಕಾರ್ಯಕರ್ತರು ಮೋದಿಯವರ ಕೋಟೆಯ ಸೇನಾನಿಗಳು. ಆ ಕೋಟೆಯನ್ನು ಭದ್ರ ಪಡಿಸಲು ಶ್ರಮಿಸುತ್ತಿದ್ದೇವೆ. ಈ ಭಾಗದ ಮನೆ ಮಗನಾಗಿ ಮತ ಭಿಕ್ಷೆ ಕೇಳುತ್ತಿದ್ದೇನೆ. 

ಪ್ರಶ್ನೆ: ನಿಮಗಿರುವ ಸಕಾರಾತ್ಮಕ ಅಂಶಗಳು ಯಾವುವು?

ಉತ್ತರ: ನಾನು ಈ ಜಿಲ್ಲೆ, ಈ ಮಣ್ಣಿನ ಮಗ. ಉಗ್ರಪ್ಪನವರು ಹೊರಗಿನವರು. ಅವರು ನಮ್ಮ ಜಿಲ್ಲೆಗೆ ಸಂಬಂಧಿಸಿದವರಲ್ಲ. ನಾನು ಈ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ವಿವಿಧ ರಂಗದಲ್ಲಿ ಕೆಲಸ ಮಾಡುತ್ತ ಬಂದಿದ್ದೇನೆ. ಜನರಿಗೆ ಚಿರಪರಿಚಿತನಾಗಿರುವುದೇ ನನಗೆ ಪ್ಲಸ್‌ ಪಾಯಿಂಟ್‌.

ಪ್ರಶ್ನೆ: ಚುನಾವಣೆಯ ಹೊಸ್ತಿಲಿನಲ್ಲಿ ಬಿಜೆಪಿ ಸೇರಿ ಆ ಪಕ್ಷದಿಂದ ಕಣಕ್ಕಿಳಿದ್ದೀರಿ. ಭೌಗೋಳಿಕವಾಗಿ ದೊಡ್ಡ ಕ್ಷೇತ್ರವಾಗಿದ್ದು, ವಿಪರೀತ ಬಿಸಿಲಿನಲ್ಲಿ ಎಲ್ಲ ಮತದಾರರನ್ನು ತಲುಪಲು ಏನು ಯೋಜನೆ ಹಾಕಿಕೊಂಡಿದ್ದೀರಿ?

ಉತ್ತರ: ಈಗಾಗಲೇ ನಾನು ಒಂದು ಸುತ್ತು ಎಲ್ಲ ತಾಲ್ಲೂಕುಗಳಲ್ಲಿ ಸಭೆ ನಡೆಸಿದ್ದೇನೆ. ಎಲ್ಲ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಸಭೆ ನಡೆಸಿ, ಚರ್ಚಿಸಿದ್ದೇನೆ. ಈಗ ಎರಡನೇ ಸುತ್ತಿನ ಪ್ರಚಾರ ಕೈಗೊಂಡಿದ್ದೇನೆ. ಕಾರ್ಯಕರ್ತರು ಅನೇಕ ದಿನಗಳಿಂದ ಪ್ರಚಾರ ನಡೆಸುತ್ತಿದ್ದಾರೆ.

ಪ್ರಶ್ನೆ: ಕಾಂಗ್ರೆಸ್‌ನ ಕೆಲ ಶಾಸಕರು ಮುನಿಸಿಕೊಂಡಿದ್ದಾರೆ. ಅತೃಪ್ತ ಶಾಸಕರು ನಿಮ್ಮನ್ನು ಸಂಪರ್ಕಿಸಿ ಬೆಂಬಲವೇನಾದರೂ ಸೂಚಿಸಿದ್ದಾರೆಯೇ?

ಉತ್ತರ: ಬರುವ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಕಾದು ನೋಡಿ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !