ವೆಂಕಟರಾವ್ ಘೋರ್ಪಡೆ ಸಂದರ್ಶನ: ಗೆದ್ದರೆ ಸಕ್ಕರೆ ಕಾರ್ಖಾನೆ ಆರಂಭಿಸುವೆ

‘ಗೆಲುವು ನನ್ನದೇ’ ಎನ್ನುವ ವಿಶ್ವಾಸದಲ್ಲಿರುವ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ, ‘ಪ್ರಚಾರಕ್ಕೆ ಸಾಕಷ್ಟು ಸಮಯ ಸಿಕ್ಕಿದೆ. ಕ್ಷೇತ್ರದ ಎಲ್ಲಾ ಮತದಾರರನ್ನು ತಲುಪಲು ಇಷ್ಟು ಸಮಯ ಸಾಕು’ ಎಂದು ಆತ್ಮವಿಶ್ವಾಸದ ಮಾತನಾಡುತ್ತಾರೆ.
* ಅನರ್ಹ ಶಾಸಕ ಆನಂದ್ ಸಿಂಗ್‌ರನ್ನು ಏಕೆ ಸೋಲಿಸಬೇಕು?
ಈ ಚುನಾವಣೆ ಬೇಕಾಗಿರಲಿಲ್ಲ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಕೆಲಸ ಮಾಡಿ ಜನರ ಮೇಲೆ ಚುನಾವಣೆ ಹೇರಲಾಗಿದೆ. ಸಮ್ಮಿಶ್ರ ಸರ್ಕಾರ ಬೀಳಲು ಆನಂದ್ ಸಿಂಗ್ ಕೂಡ ಕಾರಣರು. ಐದು ವರ್ಷಕ್ಕೆ ಆಯ್ಕೆ ಮಾಡಿದ ಜನರಿಗೆ ದ್ರೋಹ ಬಗೆದು ಸ್ವಾರ್ಥಕ್ಕಾಗಿ ರಾಜೀನಾಮೆ ಕೊಟ್ಟಿದ್ದಾರೆ.
* ನಿಮ್ಮನ್ನೇಕೇ ಆಯ್ಕೆ ಮಾಡಬೇಕು?
ಗೆದ್ದರೆ ನನ್ನ ಮೊದಲ ಆದ್ಯತೆ ಐ.ಎಸ್.ಆರ್. ಸಕ್ಕರೆ ಕಾರ್ಖಾನೆ ಆರಂಭಿಸುವುದು. ಅದು ರೈತರ ಜೀವನಾಡಿ. ರಾಜಕೀಯ ಕಾರಣಕ್ಕಾಗಿ ಅದನ್ನು ಮುಚ್ಚಲಾಗಿದೆ. ಹೊಸ ಜಲಾಶಯ ಕಟ್ಟಲು ಆಗುವುದಿಲ್ಲ. ಸಮನಾಂತರ ಜಲಾಶಯಕ್ಕೆ ನೀಲ ನಕಾಶೆ ಸಿದ್ಧಪಡಿಸಿ, ನೀರು ಸಂಗ್ರಹಿಸಲು ಪ್ರಯತ್ನಿಸುವೆ. ಕೆರೆಗಳ ಅಭಿವೃದ್ಧಿಗೆ ಒತ್ತು ಕೊಡುವೆ. ಎಲ್ಲಾ ವಾರ್ಡ್‌ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಶ್ರಮಿಸುವೆ.
* ನಿಮ್ಮ ಪ್ರಚಾರ ಹೇಗೆ ನಡೆಯುತ್ತಿದೆ?
ಪ್ರತಿಯೊಬ್ಬ ಮತದಾರರನ್ನು ನೇರವಾಗಿ ತಲುಪುತ್ತಿದ್ದೇನೆ. ಅಬ್ಬರದ ಪ್ರಚಾರ, ರ್‍ಯಾಲಿಗಳಿಗೆ ಹೆಚ್ಚಿನ ಒತ್ತು ಕೊಡುತ್ತಿಲ್ಲ. ನಾನು ಏನು ಮಾಡಬೇಕು ಅಂದುಕೊಂಡಿದ್ದೇನೊ ಆ ವಿಚಾರಗಳನ್ನು ತಿಳಿಸುತ್ತಿದ್ದೇನೆ.
* ಕೊನೆಯ ಹಂತದಲ್ಲಿ ಟಿಕೆಟ್ ಸಿಕ್ಕಿದೆ. ಪ್ರಚಾರಕ್ಕೆ ಕಡಿಮೆ ಅವಧಿ ಸಿಕ್ಕಿಲ್ಲವೇ?
ಯಾವ ಪಕ್ಷ ಕೂಡ ಮೊದಲೇ ಟಿಕೆಟ್ ಕೊಡುವುದಿಲ್ಲ. ಪೂರ್ವಾಪರ ಚರ್ಚಿಸಿದ ನಂತರ ಸೂಕ್ತರಾದವರಿಗೆ ಟಿಕೆಟ್ ಕೊಡುವ ಪರಂಪರೆ ಇದೆ. ಪ್ರಚಾರಕ್ಕೆ ಸಾಕಷ್ಟು ಸಮಯ ಸಿಕ್ಕಿದೆ. ಕ್ಷೇತ್ರದ ಎಲ್ಲಾ ಮತದಾರರನ್ನು ತಲುಪಲು ಇಷ್ಟು ಸಮಯ ಸಾಕು.
* ನೀವು ಹೊರಗಿನವರು ಎಂದು ಅಪಪ್ರಚಾರ ಮಾಡಲಾಗುತ್ತಿದೆಯಲ್ಲ?
ಈ ಚುನಾವಣೆಯಲ್ಲಿ ಅದರ ಅವಶ್ಯಕತೆಯಿಲ್ಲ. ಅವರಿಗೆ ನನ್ನನ್ನು ಟೀಕಿಸಲು ಬೇರೆ ವಿಚಾರಗಳಿಲ್ಲ. ಮೂಲತಃ ಆನಂದ್ ಸಿಂಗ್ ರಾಜಸ್ತಾನದವರು. ನಾನು ಸಂಡೂರಿನವನು. ಕ್ಷೇತ್ರ ಪುನರ್ ವಿಂಗಡಣೆಗೂ ಮುನ್ನ ವಿಜಯನಗರದ 18 ಹಳ್ಳಿಗಳು ಸಂಡೂರು ವ್ಯಾಪ್ತಿಗೆ ಒಳಪಟ್ಟಿದ್ದವು. ಎಲ್ಲರ ಪರಿಚಯ ನನಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.