ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂದಾಲ್‌ಗೆ‌ ಭೂಮಿ ಮಾರಾಟ: ಕಾಂಗ್ರೆಸ್‌ ಮುಖಂಡರ ದ್ವಂದ್ವ ನಿಲುವು

ಆನಂದ್‌ಸಿಂಗ್‌– ಅನಿಲ್‌ ಲಾಡ್‌ ಭಿನ್ನ ಹೇಳಿಕೆ
Last Updated 17 ಜೂನ್ 2019, 20:15 IST
ಅಕ್ಷರ ಗಾತ್ರ

ಬಳ್ಳಾರಿ: ಜಿಂದಾಲ್‌ಗೆ 3,666 ಎಕರೆ ಭೂಮಿಯನ್ನು ಮಾರಾಟ ಮಾಡುವ ಕುರಿತುಸೋಮವಾರದಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಬಲ ವಿರೋಧ ವ್ಯಕ್ತಪಡಿಸಿದರೂ, ವಿಜಯನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಆನಂದ್‌ಸಿಂಗ್‌ ಹಾಗೂ ಮಾಜಿ ಶಾಸಕ ಅನಿಲ್‌ಲಾಡ್‌ ಭಿನ್ನ ಹೇಳಿಕೆ ನೀಡಿ ಗಮನ ಸೆಳೆದರು.

‘ಲೀಸ್ ಕಮ್ ಸೇಲ್ ಡೀಡ್ ಮೂಲಕ‌ ಕಾರ್ಖಾನೆಗಳಿಗೆ ಭೂಮಿ ಕೊಡಬಾರದು. ಹಿಂದೆ‌ ಅಂಥ ‌ನಿರ್ಧಾರವಾಗಿದ್ದರೂ, ಅದನ್ನು ಸರ್ಕಾರ ರದ್ದು ಮಾಡಬೇಕು’ ಎಂದು ಆನಂದ್‌ ಸಿಂಗ್‌ ಒತ್ತಾಯಿಸಿದರು.

ಅವರೊಂದಿಗೆ ಇದ್ದ ಅನಿಲ್‌ಲಾಡ್‌, ‘ಜಿಂದಾಲ್‌ಗೆ‌ ನೀಡಿರುವ ಗುತ್ತಿಗೆ ಅವಧಿಯನ್ನು ಮುಂದುವರಿಸಲೇನೂ ಅಡ್ಡಿ ಇಲ್ಲ. ಆದರೆ ಮಾರಾಟ ಮಾಡಿದರೆ ಮಾತ್ರ ಭೂಮಿಯನ್ನು ಬ್ಯಾಂಕಿಗೆ ಅಡ ಇಡಬಾರದು ಎಂಬ ಷರತ್ತನ್ನು ಜಿಂದಾಲ್‌ಗೆ ವಿಧಿಸಲೇಬೇಕು’ ಎಂದು ಭಿನ್ನ ಹೇಳಿಕೆ ನೀಡಿದರು. 'ನಾವು‌ ಯಾವುದೇ ಕಾರ್ಖಾನೆ‌ಯ ವಿರುದ್ಧ ಇಲ್ಲ. ಆದರೆ ಸರ್ಕಾರ ಸರಿಯಾದ ನಿರ್ಧಾರ ಕೈಗೊಳ್ಳಬೇಕು’ ಎಂಬುದು ಇಬ್ಬರ ಪ್ರತಿಪಾದನೆಯಾಗಿತ್ತು.

‘ನನ್ನನ್ನು ಭೂಮಿಯೊಳಗೆ ಹೂತಿಟ್ಟರೂ, ಅಲ್ಲಿಂದಲೇ ನನ್ನ ವಿರೋಧದ ದನಿ ಕ್ಷೀಣವಾಗಿಯಾದರೂ ಹೊರಕ್ಕೆ ಬರುತ್ತದೆ. ಜಿಲ್ಲೆಯ ಆಸ್ತಿ ಉಳಿಸಲು ನಾನು ಎಂಥದ್ದೇ ತ್ಯಾಗಕ್ಕೂ ಸಿದ್ಧ. ಯಾವ ಪಕ್ಷ, ಸರ್ಕಾರ ಅಧಿಕಾರದಲ್ಲಿದ್ದರೂ ಸರಿ, ಹೋರಾಟ ನಡೆಸುವೆ’ ಎಂದು ಆನಂದ್‌ಸಿಂಗ್‌ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

'3,666 ಎಕರೆ ಭೂಮಿಯನ್ನು ಎಕರೆಗೆ ₹1.20 ಲಕ್ಷದಂತೆ, ₹ 43.99 ಕೋಟಿಗೆ ಮಾರಲು ಸರ್ಕಾರ ನಿರ್ಧರಿಸಿದೆ.‌ ಅದನ್ನು‌ ಪ್ರತಿ ಎಕರೆಗೆ ಕನಿಷ್ಠ ₹50 ಲಕ್ಷ ದರದಲ್ಲಿ ಜಿಂದಾಲ್ ಅಡವಿಟ್ಟರೆ ಅದಕ್ಕೆ ₹1,866 ಕೋಟಿ ಸಾಲ‌ ಸಿಗುತ್ತದೆ. ಲೆಕ್ಕಪರಿಶೋಧಕರ ಮೂಲಕ ಎಕರೆಗೆ ₹1 ಕೋಟಿಯಂತೆ ಮೌಲ್ಯಮಾಪನ ಮಾಡಿಸಿದರೆ, ₹3,666 ಕೋಟಿಯಷ್ಟು ದೊಡ್ಡ ಮೊತ್ತದ ಸಾಲ ಸಿಗುತ್ತದೆ. ಹೀಗಾಗಿ ಜಿಂದಾಲ್‌ಗೆ ಭೂಮಿ ಮಾರುವುದೇ ಆದರೆ, ಅದನ್ನು ‌ಬ್ಯಾಂಕಿನಲ್ಲಿ ಅಡ ‌ಇಡಬಾರದು ಎಂಬ ಷರತ್ತನ್ನು ವಿಧಿಸಬೇಕು' ಎಂದು ಅನಿಲ್ ಲಾಡ್ ಆಗ್ರಹಿಸಿದರು.

‘20 ಕೋಟಿ ಪಡೆದದ್ದು ಯಾರು’

ರಾಮನಗರ: ಜಿಂದಾಲ್ ಕಂಪನಿಯಿಂದ ₹20 ಕೋಟಿ ಮೊತ್ತದ ಚೆಕ್ ಪಡೆದು, ಜಮೀನಿನ ಲೀಸ್ ಕಮ್ ಸೇಲ್ ಕರಾರು ಪತ್ರಕ್ಕೆ ಸಹಿ ಹಾಕಿದ್ದು ಯಾರು ಎಂಬುದನ್ನು ಯಡಿಯೂರಪ್ಪ ಉತ್ತರಿಸಲಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಚನ್ನಪಟ್ಟಣ ತಾಲ್ಲೂಕಿನ ಇಗ್ಗಲೂರು ಬ್ಯಾರೇಜ್ ಸಮೀಪ ಪತ್ರಕರ್ತರ ಜತೆ ಅವರು ಮಾತನಾಡಿದರು.

‘ಯಡಿಯೂರಪ್ಪ ಜಿಂದಾಲ್ ನಿಂದ ಇಪ್ಪತ್ತು ಕೋಟಿ ಹಣದ ಚೆಕ್ ಪಡೆದಿದ್ದನ್ನು ಈ ಹಿಂದೆ ನಾನೇ ದಾಖಲೆ ಬಿಡುಗಡೆ ಮಾಡಿದ್ದೆ’ ಎಂದು ನೆನಪಿಸಿದರು.

‘ಸಂಸತ್‌ನಲ್ಲೂ ಪ್ರಸ್ತಾಪ’

ಮೈಸೂರು: ಜಿಂದಾಲ್‌ ಕಂಪನಿಗೆ ಭೂಮಿ ಮಾರಾಟ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವು ಖಂಡಿಸಿ, ಪಕ್ಷವು ಸಂಸತ್ತಿನಲ್ಲೂ ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೋಮವಾರ ಇಲ್ಲಿ ತಿಳಿಸಿದರು.

ಜಿಂದಾಲ್‌ ವಿಚಾರದಲ್ಲಿ ಸರ್ಕಾರ ಈ ವರೆಗೆ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ, ಕೈಗೊಳ್ಳುವುದೂ ಇಲ್ಲ’ ಎಂದರು. ‘ನಮ್ಮ ಧರಣಿಯನ್ನು ಬಹಳ ಹಗುರವಾಗಿ ಪರಿಗಣಿಸಿದ್ದಾರೆ’ ಎಂದರು.

* ಜಿಂದಾಲ್ ಕಂಪನಿಯಲ್ಲಿ ಉದ್ಯೋಗ ನೀಡುವಲ್ಲಿ ಬಳ್ಳಾರಿ ಜಿಲ್ಲೆಯ ಜನರಿಗೆ ಅನ್ಯಾಯವಾಗುತ್ತಿದೆ. ಅದರಲ್ಲೂ ವಿದ್ಯಾವಂತ ಯುವಕರಿಗೆ ಉದೋಗ ನೀಡಬೇಕು

-ಪಿ.ಟಿ. ಪರಮೇಶ್ವರ ನಾಯ್ಕ, ಮುಜರಾಯಿ ಹಾಗೂ ಕೌಶಲಾಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT