ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಜಿಂದಾಲ್‌ನಿಂದ ಹಣ ಕೊಟ್ಟು ಭೂಮಿ ಸಕ್ರಮ‘

ಕಾರ್ಖಾನೆಗಳಿಂದ ಜಿಲ್ಲೆಯಲ್ಲಿ ನೀರಿನ ಅಭಾವ ಸೃಷ್ಟಿ–ಆನಂದ್‌ ಸಿಂಗ್‌ ಆರೋಪ
Last Updated 15 ಜೂನ್ 2019, 13:56 IST
ಅಕ್ಷರ ಗಾತ್ರ

ಹೊಸಪೇಟೆ: ’ಜಿಂದಾಲ್‌ ಕಂಪೆನಿಯು ಅಧಿಕಾರಿಗಳಿಗೆ ದುಡ್ಡು ಕೊಟ್ಟು ಜಮೀನು ಸಕ್ರಮ ಮಾಡಿಕೊಳ್ಳುವ ಕೆಲಸ ವ್ಯವಸ್ಥಿತವಾಗಿ ಮಾಡುತ್ತಿದೆ‘ ಎಂದು ಶಾಸಕ ಆನಂದ್‌ ಸಿಂಗ್‌ ಗಂಭೀರ ಆರೋಪ ಮಾಡಿದರು.

ಶನಿವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ’ವಿವಿಧ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ನಿವೃತ್ತರಾದ ನಂತರ ಅವರನ್ನು ಸಂಪರ್ಕಿಸಿ, ಹಣ ಕೊಟ್ಟು ಸರ್ಕಾರಕ್ಕೆ ಸೇರಿದ ಬೆಲೆಬಾಳುವ ಜಮೀನು ಸಕ್ರಮ ಮಾಡಿಕೊಳ್ಳುತ್ತಿದೆ‘ ಎಂದು ಹೇಳಿದರು.

’ತೋರಣಗಲ್‌ ಬಳಿ ₹15ರಿಂದ ₹20 ಲಕ್ಷ ಎಕರೆಗೆ ಜಮೀನು ಮಾರಾಟ ಮಾಡಲಾಗುತ್ತಿದೆ. ಆದರೆ, ಸರ್ಕಾರ ₹1.20 ಲಕ್ಷಕ್ಕೆ ಕೊಡಲು ಹೊರಟಿರುವುದು ಸರಿಯಾದುದಲ್ಲ. ಕಾರ್ಖಾನೆಗಳು ಯಥೇಚ್ಛವಾಗಿ ತುಂಗಭದ್ರಾ ಜಲಾಶಯದ ನೀರು ಉಪಯೋಗಿಸುತ್ತಿರುವ ಕಾರಣ ಜಿಲ್ಲೆಯಲ್ಲಿ ನೀರಿಗೆ ಅಭಾವ ಸೃಷ್ಟಿಯಾಗಿದೆ. ಕಾರ್ಖಾನೆಗಳು ಆರಂಭಿಸುವಾಗ ಇಂತಿಷ್ಟೇ ಜಲಾಶಯದ ನೀರು ಕೊಡಬೇಕೆಂದು ಒಪ್ಪಂದವಾಗಿತ್ತು. ಈಗ ಅವುಗಳು ದೊಡ್ಡ ಮಟ್ಟದಲ್ಲಿ ಬೆಳೆದಿವೆ. ಅವುಗಳ ಉತ್ಪಾದನೆ ಹೆಚ್ಚಾಗಿದೆ. ಸಹಜವಾಗಿಯೇ ಹೆಚ್ಚು ನೀರು ಬೇಕು. ಅದು ಯಾರ ಗಮನಕ್ಕೂ ಬರುತ್ತಿಲ್ಲ. ಇದರಿಂದ ರೈತಾಪಿ ವರ್ಗಕ್ಕೆ ತೊಂದರೆಯಾಗುತ್ತಿದೆ‘ ಎಂದರು.

’ಜಿಂದಾಲ್‌ ಕಂಪೆನಿ ತನ್ನ ಉತ್ಪಾದನೆ ಮೂಲಕ ದೇಶದಲ್ಲಿಯೇ ನಂಬರ್‌ ಒನ್‌ ಆಗಿದೆ. ಆದರೆ, ಸ್ಥಳೀಯರ ಬದುಕು ಬದಲಾಗಿಲ್ಲ. ಅದರ ದೂಳು, ವಿಷಕಾರಕ ಹೊಗೆಯಿಂದ ಅನೇಕ ಜನ ನರಳಾಡುತ್ತಿದ್ದಾರೆ. ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್‌.ಆರ್‌.) ನಿಧಿಯಿಂದ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಸ್ಥಳೀಯರಿಗೆ ಕೆಳಹಂತದ ನೌಕರಿ ಕೊಟ್ಟು ಕಣ್ಣೊರೆಸಲಾಗಿದೆ. ಜಿಲ್ಲೆಯ ಜನರಿಗೆ ಮೋಸ ಮಾಡುತ್ತಿರುವ ಇಂತಹ ಕಂಪೆನಿ ನಮ್ಮ ಜಿಲ್ಲೆಯಲ್ಲಿ ಏಕಿರಬೇಕು‘ ಎಂದು ಪ್ರಶ್ನಿಸಿದರು.

’ಕಾರ್ಖಾನೆ ಆರಂಭಿಸುವ ಒಪ್ಪಂದ ಮಾಡಿಕೊಂಡು ಅನೇಕ ಕಂಪೆನಿಗಳು ಜಿಲ್ಲೆಯಲ್ಲಿ ಸಾವಿರಾರು ಎಕರೆ ಜಮೀನಿಗೆ ಬೇಲಿ ಹಾಕಿಕೊಂಡಿವೆ. ಅನೇಕ ಕಂಪೆನಿಗಳು ಕಾರ್ಖಾನೆ ಆರಂಭಿಸಿಲ್ಲ. ಅಂತಹ ಜಮೀನು ಸರ್ಕಾರ ತನ್ನ ವಶಕ್ಕೆ ಪಡೆಯಬೇಕು. ಕಾರ್ಖಾನೆ ಆರಂಭಿಸುವಾಗ ಗುತ್ತಿಗೆ ಆಧಾರದ ಮೇಲೆ ಕೊಡಬೇಕು‘ ಎಂದು ಆಗ್ರಹಿಸಿದರು.

ಮುಖಂಡರಾದ ರತನ್‌ ಸಿಂಗ್‌, ಜೆ.ಕಾರ್ತಿಕ್‌, ಜಿ.ಕೆ. ಹನುಮಂತಪ್ಪ, ಗುಜ್ಜಲ್‌ ನಿಂಗಪ್ಪ, ಅಬ್ದುಲ್‌ ಖಾದರ್‌ ರಫಾಯ್‌, ಪರಶುರಾಮಪ್ಪ, ಕಾಶಿನಾಥ, ಅಶೋಕ್‌ ಜೀರೆ, ಎಂ.ಸಿ. ವೀರಸ್ವಾಮಿ, ಕಟಗಿ ಜಂಬಯ್ಯ, ಪಿ. ವೆಂಕಟೇಶ್‌, ಸಂತೋಷ ಕಲ್ಮಠ, ಕಿನ್ನಾಳ್‌ ಹನುಮಂತಪ್ಪ, ಬಿಸಾಟಿ ಮಹೇಶ್‌, ಸೋಮಶೇಖರ್‌, ಪಿ. ಮುನಿವಾಸುದೇವ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT