ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಮೊದಲು, ಅನ್ಯ ಭಾಷೆ ನಂತರ

ಹೊಸಪೇಟೆ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಂಗೋಪಂತ ನಾಗರಾಜರಾಯ ಹೇಳಿಕೆ
Last Updated 27 ಜುಲೈ 2019, 8:46 IST
ಅಕ್ಷರ ಗಾತ್ರ

ಹೊಸಪೇಟೆ (ಬಸವರಾಜ ಮಲಶೆಟ್ಟಿ ವೇದಿಕೆ): ‘ಕನ್ನಡಿಗರಿಗೆ ಕನ್ನಡ ಭಾಷೆ ಮೊದಲ ಆದ್ಯತೆಯಾಗಬೇಕು. ನಂತರ ಮಿಕ್ಕುಳಿದೆಲ್ಲ ಭಾಷೆಗಳು. ಇತರೆ ಭಾಷೆಗಳು ಕನ್ನಡಿಗರಿಗೆ ಐಚ್ಛಿಕವಾಗಬೇಕು. ಹಾಗಂತ ಬೇರೆ ಭಾಷೆಗಳನ್ನು ದ್ವೇಷಿಸುವುದು ಬೇಡ’ ಎಂದು ಹಿರಿಯ ಗಮಕಿ ರಂಗೋಪಂತ ನಾಗರಾಜರಾಯರು ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮೂರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕನ್ನಡದ ಬೆಳವಣಿಗೆ ಇಷ್ಟಕ್ಕೆ ಸಾಲದು. ಇನ್ನೂ ಅದು ಬೆಳೆಯಬೇಕು. ಅದಕ್ಕಿಂತ ಮೊದಲು ನಮ್ಮ ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕು. ಶುದ್ಧ ಕನ್ನಡ ಮಾಯವಾಗಿದೆ. ಈಗಿನವರಿಗೆ ಅಲ್ಪಪ್ರಾಣ, ಮಹಾಪ್ರಾಣ, ದೀರ್ಘ–ಹೃಸ್ವಗಳೆಂದರೆ ಗೊತ್ತೇ ಇಲ್ಲ. ಶಾಲೆಗಳಲ್ಲಿ ಶಿಕ್ಷಕರು ಮಕ್ಕಳ ಭಾಷೆ ಶುದ್ಧಿಗಾಗಿ ಒತ್ತು ಕೊಡಬೇಕು’ ಎಂದು ತಿಳಿಸಿದರು.

‘ಸ್ವಚ್ಛ ಕನ್ನಡದ ಉಚ್ಚಾರದ ಕಡೆಗೆ ಹೆಚ್ಚು ಲಕ್ಷ್ಯ ವಹಿಸಿ ಪಠ್ಯಪುಸ್ತಕಗಳ ಜತೆಗೆ ಉತ್ತಮ ಸಾಹಿತಿಗಳ ಸಾಹಿತ್ಯ ಕೃತ್ಯಗಳನ್ನು ಓದುವ ಅಭಿರುಚಿ ಬೆಳೆಸಬೇಕು. ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ಕನ್ನಡವನ್ನು ತಪ್ಪು ತಪ್ಪಾಗಿ ಬಿತ್ತರಿಸಲಾಗುತ್ತಿದೆ. ಅದರ ನೇರ ಪರಿಣಾಮ ಹೊಸ ತಲೆಮಾರಿನ ಮೇಲೆ ಬೀಳುತ್ತಿದೆ. ಅಂತಹ ಕೆಲಸವಾಗದಂತೆ ನೋಡಿಕೊಳ್ಳಬೇಕು. ಅದೇ ಕನ್ನಡ ಭಾಷೆಗೆ ಸಲ್ಲಿಸುವ ಬಹುದೊಡ್ಡ ಗೌರವ’ ಎಂದರು.

‘ತಾಯಿಯ ಹಾಲಿನ ಶಕ್ತಿಯಂತೆ ಮಾತೃಭಾಷೆಯ ಶಕ್ತಿ ಹೆಚ್ಚು ಪುಷ್ಟಿದಾಯಕವಾದದ್ದು. ಈ ಅರಿವು ನಮ್ಮ ಯುವಪೀಳಿಗೆಗೆ ಆಗಬೇಕು. ಕುವೆಂಪು ರಾಷ್ಟ್ರಕವಿ ಆದದ್ದು ತಾಯಿಭಾಷೆ ಕನ್ನಡದಲ್ಲಿ ಬರೆಯಲು ಆರಂಭಿಸಿದ್ದರಿಂದ. ತಾಯಿನಾಡಿನ ಭಕ್ತಿಯಲ್ಲಿ ಬೆರೆತು ಹೋದದ್ದರಿಂದ ಜ್ಞಾನಪೀಠ ಪ್ರಶಸ್ತಿ ಅವರನ್ನು ಅರಸಿಕೊಂಡು ಬಂತು’ ಎಂದು ವಿವರಿಸಿದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ, ‘ಸಾಹಿತ್ಯದಲ್ಲಿ ಜನರ ಬದುಕು, ಸಂತಸ–ಸಂಭ್ರಮ ಇದೆ. ಜನರು ಕುಟ್ಟುವಾಗ, ಬೀಸುವಾಗ, ಉಳುಮೆ ಮಾಡುವಾಗ ಅದನ್ನು ನೋಡಬಹುದು. ಬಾಯಿಂದ ಬಾಯಿಗೆ ಬಂದ ಜನಪದ ಸಾಹಿತ್ಯ ನಮ್ಮ ನಡುವೆಯಿಂದ ದೂರವಾಗುತ್ತಿದೆ. ನಮ್ಮ ಜಾನಪದ ಕಲೆಗಳು, ಸಂಪ್ರದಾಯ, ಆಚರಣೆಗಳನ್ನು ಮರೆಯುತ್ತಿರುವುದು ದುರದೃಷ್ಟಕರ’ ಎಂದರು.

‘ರೈತರು ಉತ್ತಿ, ಬಿತ್ತಿ ಬೆಳೆಯುತ್ತಾರೆ. ಕರಕುಶಲ ಕರ್ಮಿಗಳು ಅನೇಕ ವಿಧವಾದ ವಸ್ತುಗಳನ್ನು ತಯಾರಿಸುತ್ತಾರೆ. ಆದರೆ, ಇಂದು ಅವರು ಸಂಕಷ್ಟದಲ್ಲಿದ್ದಾರೆ. ಅವರ ನೋವು–ನಲಿವು ಕುರಿತು ಸಮ್ಮೇಳನಗಳಲ್ಲಿ ಚರ್ಚೆಯಾಗಬೇಕು. ಸಮ್ಮೇಳನಗಳು ಯಾವ ಪ್ರದೇಶದಲ್ಲಿ ನಡೆಯುತ್ತವೆ ಅಂತಹ ಪ್ರದೇಶದ ಜನರ ಸಂಕಟಗಳನ್ನು ಎತ್ತಿ ತೋರಿಸುವ ಕೆಲಸವಾಗಬೇಕು’ ಎಂದು ತಿಳಿಸಿದರು.

ಹಿರಿಯ ಸಾಹಿತಿ ಮೃತ್ಯುಂಜಯ ರುಮಾಲೆ ಮಾತನಾಡಿ, ‘1920ರಲ್ಲಿ ಇಂದಿನ ಬಳ್ಳಾರಿ ಜಿಲ್ಲೆ ಆಂಧ್ರದ ಎರಡು ಜಿಲ್ಲೆಗಳನ್ನು ಒಳಗೊಂಡಂತೆ ವಿಶಾಲವಾದ ಜಿಲ್ಲೆಯಾಗಿತ್ತು. ಅಂದು ಆಡಳಿತ ತಮಿಳಿನಲ್ಲಿ, ಕಚೇರಿ ಕೆಲಸಗಳು ತೆಲುಗು ಭಾಷೆಯಲ್ಲಿ ನಡೆಯುತ್ತಿದ್ದವು. ಇಂತಹ ಸಂದರ್ಭದಲ್ಲಿ ಹೊಸಪೇಟೆ ಚಿತ್ತವಾಡ್ಗಿಯ ಹನುಮಂತಗೌಡ ಎಂಬುವರು ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿದ್ದರು’ ಎಂದು ನೆನಪಿಸಿದರು.

ಲೇಖಕ ದಯಾನಂದ ಕಿನ್ನಾಳ್‌ ಅವರ ‘ಬಾಳಬುತ್ತಿ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ, ತಾಲ್ಲೂಕು ಅಧ್ಯಕ್ಷ ಎತ್ನಳ್ಳಿ ಮಲ್ಲಯ್ಯ,ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ, ಮುಖಂಡರಾದ ಧರ್ಮೇಂದ್ರ ಸಿಂಗ್‌, ಕೆ.ಎಂ. ಹಾಲಪ್ಪ, ಗೊಗ್ಗ ಚನ್ನಬಸವರಾಜ, ಜಂಬಾನಹಳ್ಳಿ ಪರಶುರಾಮಪ್ಪ, ಅಮಾಜಿ ಹೇಮಣ್ಣ, ಕೆ. ಬಸವರಾಜ, ಮಧುರಚೆನ್ನಶಾಸ್ತ್ರಿ, ಪತ್ರಕರ್ತ ಹುಡೇಂ ಕೃಷ್ಣಮೂರ್ತಿ, ಎಚ್‌.ಎಂ. ಜಂಬುನಾಥ ಇದ್ದರು. ಅಂಜಲಿ ಭರತನಾಟ್ಯ ಕಲಾವಿದರ ತಂಡ ಸಮೂಹ ನೃತ್ಯ ಪ್ರಸ್ತುತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT