ಶನಿವಾರ, ಡಿಸೆಂಬರ್ 14, 2019
25 °C
ಮತಗಟ್ಟೆಗಳತ್ತ ಹೆಜ್ಜೆ

ವಿಜಯನಗರ ವಿಧಾನಸಭಾ ಕ್ಷೇತ್ರ: ಚುನಾವಣಾ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಡಿ. 5ರಂದು ನಡೆಯಲಿರುವ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಿಬ್ಬಂದಿ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬುಧವಾರ ನಗರದ ಲಿಟ್ಲ್ ಫ್ಲವರ್ ಶಾಲೆಯಿಂದ ಸಿಬ್ಬಂದಿ ಚುನಾವಣಾ ವಸ್ತುಗಳನ್ನು ತೆಗೆದುಕೊಂಡು ಮತಗಟ್ಟೆಗಳತ್ತ ಮುಖ ಮಾಡಿದರು.

ತಮಿಳುನಾಡಿನಿಂದ ಬಂದಿರುವ ಎಂ-3 ಮತಯಂತ್ರ, ಶಾಹಿ, ಮತದಾರರ ವಿವರ ಒಳಗೊಂಡ ಮತದಾರರ ಪಟ್ಟಿ ಸೇರಿದಂತೆ ಇತರೆ ವಸ್ತುಗಳೊಂದಿಗೆ ಸಿಬ್ಬಂದಿ ತೆರಳಿದರು.

ಒಟ್ಟು 247 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಒಂದು ಪಿಂಕ್ ಮತಗಟ್ಟೆ ಸ್ಥಾಪಿಸಲಾಗಿದೆ. 21 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಒಟ್ಟು 3,000  ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಿಬ್ಬಂದಿ ಮತಗಟ್ಟೆಗೆ ತೆರಳಲು 40 ಬಸ್ ಸೇರಿದಂತೆ ಒಟ್ಟು 60 ವಾಹನಗಳಿಗೆ ವ್ಯವಸ್ಥೆ ಮಾಡಲಾಗಿದೆ.

 24 ಸೆಕ್ಟರ್ ಅಧಿಕಾರಿಗಳು, ರಾಜ್ಯ ಸೇರಿದಂತೆ ತೆಲಂಗಾಣದಿಂದ ಬಂದಿರುವ ಕೆಎಸ್ಆರ್‌ಪಿ ತುಕಡಿ, ಸ್ಥಳೀಯ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಬುಧವಾರ ಇಲ್ಲಿನ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಚುನಾವಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಸಿದ್ಧತೆ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ನಕುಲ್, 'ಚುನಾವಣಾ ಸಿಬ್ಬಂದಿಗೆ ಮೂರು ಸಲ ತರಬೇತಿ ನೀಡಲಾಗಿದೆ. ಶಾಂತಿ, ಸುವ್ಯವಸ್ಥೆಯಿಂದ ಚುನಾವಣಾ ಪ್ರಕ್ರಿಯೆ ನಡೆಸಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ' ಎಂದು ಮಾಹಿತಿ ನೀಡಿದರು.

ದಾಖಲೆಗಳಿವು: ಮತದಾನ ಗುರುತಿನ ಚೀಟಿ, ಕಾರ್ಮಿಕ ಸಚಿವಾಲಯದ ಯೋಜನೆ ಅಡಿಯಲ್ಲಿ ನೀಡಿರುವ ಸ್ಮಾರ್ಟ್ ಕಾರ್ಡ್ ಮತ್ತು ಆರೋಗ್ಯ ವಿಮೆ ಕಾರ್ಡ್, ಪಾಸ್ ಪೋರ್ಟ್, ಎಂನರೇಗಾ  ಜಾಬ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಸೇವಾ ಗುರುತಿನ ಚೀಟಿ(ಕೇಂದ್ರ/ರಾಜ್ಯ ಸರಕಾರ ಇಲ್ಲವೆ ಪಿಎಸ್‍ಯುಗಳ ಗುರುತಿನ ಚೀಟಿ), ಭಾವಚಿತ್ರವಿರುವ ಪಿಂಚಣಿ ದಾಖಲೆ, ಬ್ಯಾಂಕ್/ಅಂಚೆ ಕಚೇರಿ ನೀಡಿರುವ ಭಾವಚಿತ್ರ ಇರುವ ಪಾಸ್‍ಬುಕ್, ಪಾನ್ ಕಾರ್ಡ್, ಆಧಾರ್ ಕಾರ್ಡ್, ಎಂಪಿ/ಎಂಎಲ್‍ಎ/ಎಂಎಲ್‍ಸಿಗಳಿಗೆ ನೀಡಿರುವ ಗುರುತಿನ ಚೀಟಿಯಲ್ಲಿ ಯಾವುದಾದರೊಂದು ದಾಖಲೆಗಳನ್ನು ಬಳಸಿಕೊಂಡು ಮತಚಲಾಯಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಮಾಧುಸ್ವಾಮಿ ವಿರುದ್ದ ಪ್ರಕರಣ: ‘ಜಾತಿ ಆಧಾರಿತ ಚುನಾವಣಾ ಪ್ರಚಾರ ಕೈಗೊಂಡಿರುವ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಪಟ್ಟಣ ಠಾಣೆಯಲ್ಲಿ ಮಂಗಳವಾರ ರಾತ್ರಿ ಪ್ರಕರಣ ದಾಖಲಿಸಲಾಗಿದೆ’ ಎಂದರು.

‘ಬಿಜೆಪಿ ಹೊರತುಪಡಿಸಿ ಅನ್ಯ ಪಕ್ಷದವರಿಗೆ ವೀರಶೈವ ಲಿಂಗಾಯತರು ಮತ ಹಾಕಿದರೆ ಬಿ.ಎಸ್. ಯಡಿಯೂರಪ್ಪನವರ ಕೆನ್ನೆಗೆ ಹೊಡೆದು ಅಪಮಾನ ಮಾಡಿದಂತೆ’ ಎಂದು ಮಾಧುಸ್ವಾಮಿ ಸೋಮವಾರ ಪ್ರಚಾರ ಸಭೆಯಲ್ಲಿ ಹೇಳಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು