ಬುಧವಾರ, ನವೆಂಬರ್ 13, 2019
18 °C
ನೂರಾರು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಶಾಲಾ, ಕಾಲೇಜು ಸ್ಥಳಾಂತರಕ್ಕೆ ವಿರೋಧ

Published:
Updated:
Prajavani

ಹೊಸಪೇಟೆ: ನಗರದ ಸರ್ಕಾರಿ ಜೂನಿಯರ್‌ ಕಾಲೇಜು, ಬಾಲಕಿಯರ ಪ್ರೌಢಶಾಲೆಯನ್ನು ಬೇರೆಡೆ ಸ್ಥಳಾಂತರಿಸದಿರಲು ಒತ್ತಾಯಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ವಿದ್ಯಾರ್ಥಿನಿಯರು ಗುರುವಾರ ಇಲ್ಲಿನ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಂತರ ಪೌರಾಯುಕ್ತೆ ಪಿ. ಜಯಲಕ್ಷ್ಮಿ, ಉಪವಿಭಾಗಾಧಿಕಾರಿ ತನ್ವೀರ್‌ ಶೇಖ್‌ ಆಸಿಫ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ಮಾಡಕೂಡದು, ಮಾಡಕೂಡದು, ಶಾಲಾ–ಕಾಲೇಜು ಬೇರೆಡೆ ಸ್ಥಳಾಂತರ ಮಾಡಕೂಡದು’ ಎಂದು ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಬೆಳಗಿನಿಂದ ಮಧ್ಯಾಹ್ನದ ವರೆಗೆ ಪ್ರತಿಭಟನೆ ನಡೆಸಿದರು.

ಬಳಿಕ ಮಾತನಾಡಿದ ಸಿ.ಪಿ.ಎಂ. ಜಿಲ್ಲಾ ಅಧ್ಯಕ್ಷ ಆರ್‌. ಭಾಸ್ಕರ್‌ ರೆಡ್ಡಿ, ‘ನಗರದ ಮಧ್ಯಭಾಗದ ಸರ್ಕಾರಿ ಬಾಲಕಿಯರ ಜೂನಿಯರ್‌ ಕಾಲೇಜು ಹಾಗೂ ಪ್ರೌಢಶಾಲೆಗೆ ಶತಮಾನದ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲಿ ಆರಂಭಗೊಂಡ ಶಿಕ್ಷಣ ಸಂಸ್ಥೆಗಳು ಇಂದಿಗೂ ಕೆಲಸ ನಿರ್ವಹಿಸುತ್ತಿವೆ. ಬಸ್‌ ನಿಲ್ದಾಣ ಸನಿಹದಲ್ಲೇ ಇರುವುದರಿಂದ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿನಿಯರೇ ಬಹಳ ಅನುಕೂಲ. ಹಾಗಾಗಿ ಅದನ್ನು ಹೊರವಲಯಕ್ಕೆ ಸ್ಥಳಾಂತರಿಸಬಾರದು’ ಎಂದು ಒತ್ತಾಯಿಸಿದರು.

‘ನಗರದ ಮಧ್ಯಭಾಗದ ಈ ಜಾಗ ಕೋಟ್ಯಂತರ ರೂಪಾಯಿ ಬೆಲೆಬಾಳುತ್ತದೆ. ಕೆಲವರು ಸಮಾಜ ಸೇವೆಯ ನೆಪದಲ್ಲಿ ಕಾಲೇಜಿಗೆ ಸೇರಿದ ಈ ಜಾಗವನ್ನು ಕಬಳಿಸಲು ಹುನ್ನಾರ ನಡೆಸಿದ್ದಾರೆ. ಅದರಲ್ಲಿ ಯಶಸ್ವಿಯಾಗಲು ಅವರಿಗೆ ಬಿಡುವುದಿಲ್ಲ. ಒಂದುವೇಳೆ ನಗರಸಭೆ ಕಾಲೇಜು ಸ್ಥಳಾಂತರಿಸುವ ನಿರ್ಧಾರ ಕೈಬಿಡದಿದ್ದಲ್ಲಿ ಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಶಾಲೆ ಮತ್ತು ಕಾಲೇಜಿನಲ್ಲಿ ಒಟ್ಟು 2,860 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ ಶೇ 50ಕ್ಕಿಂತ ಹೆಚ್ಚಿನವರು ಗ್ರಾಮೀಣ ಪ್ರದೇಶದವರಾಗಿದ್ದಾರೆ. ಹಾಗಾಗಿ ಅಲ್ಲಿಯೇ ಶಾಲಾ, ಕಾಲೇಜು ಮುಂದುವರೆಸಬೇಕು. ಸ್ಥಳಾಂತರಿಸಲು ಉದ್ದೇಶಿಸಿರುವ ಅಮರಾವತಿಯ ಮೂರು ಎಕರೆ ಜಾಗದಲ್ಲಿ ಮಹಿಳಾ ಪದವಿ ಕಾಲೇಜು ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.

‘2018–19, 2019–20ನೇ ಸಾಲಿನಲ್ಲಿ ಶಾಲಾ ಕಟ್ಟಡಗಳಿಗೆ ಸರ್ಕಾರದಿಂದ ಬಿಡುಗಡೆಯಾದ ₹1.30 ಕೋಟಿ ಅನುದಾನ ಬೇರೆ ಉದ್ದೇಶಕ್ಕೆ ಬಳಸಬಾರದು. ಜೂನಿಯರ್‌ ಕಾಲೇಜಿನಲ್ಲಿ ಆದಷ್ಟು ಶೀಘ್ರ ಶೌಚಾಲಯ ನಿರ್ಮಾಣ ಆಮಗಾರಿ ಪೂರ್ಣಗೊಳಿಸಬೇಕು. ಶಾಲೆಯಲ್ಲಿ ಖಾಲಿ ಇರುವ ಇಂಗ್ಲಿಷ್‌ ಶಿಕ್ಷಕರ ಹುದ್ದೆ ತುಂಬಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.

ದಲಿತ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಮರಡಿ ಜಂಬಯ್ಯ ನಾಯಕ, ಮುಖಂಡರಾದ ಎಸ್. ಸತ್ಯಮೂರ್ತಿ, ಬಿ. ರಮೇಶಕುಮಾರ್, ಎಂ. ಗೋಪಾಲ್‌, ನಾಗರತ್ನಮ್ಮ, ಯಲ್ಲಾಲಿಂಗ, ಆಟೊ ಫೆಡರೇಶನ್‌ ಕೆ.ಎಂ. ಸಂತೋಷ್‌ ಕುಮಾರ್‌, ಎಸ್‌.ಎಫ್.ಐ. ಮುಖಂಡ ಶಿವಕುಮಾರ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.

ಪ್ರತಿಕ್ರಿಯಿಸಿ (+)