ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಿಗಷ್ಟೇ ರೈಲ್ವೆ ಇಲಾಖೆ ಆಸ್ಪತ್ರೆ!

Last Updated 23 ಜುಲೈ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ನಗರದ ರೈಲು ನಿಲ್ದಾಣದ ಬಳಿಯಿರುವ ರೈಲ್ವೆ ಇಲಾಖೆಗೆ ಸೇರಿದ ಆಸ್ಪತ್ರೆ ಕೇವಲ ಹೆಸರಿಗಷ್ಟೇ ಸೀಮಿತವಾಗಿದೆ.

ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೈದ್ಯ ಮೂರು ತಿಂಗಳ ಹಿಂದೆ ಸ್ವಯಂ ನಿವೃತ್ತಿ ತೆಗೆದುಕೊಂಡು ಹೋಗಿದ್ದಾರೆ. ಅದಾದ ಬಳಿಕ ಹೊಸಬರನ್ನು ಆ ಜಾಗಕ್ಕೆ ನೇಮಕ ಮಾಡಿಲ್ಲ. ಅಷ್ಟೇ ಅಲ್ಲ, ನರ್ಸ್‌ ಸೇರಿದಂತೆ ಯಾವುದೇ ಹುದ್ದೆ ಕಾಯಂ ಇಲ್ಲ.

ಗುತ್ತಿಗೆ ಆಧಾರದ ಮೇಲೆ ಒಬ್ಬ ನರ್ಸ್‌ ಅನ್ನು ನೇಮಕ ಮಾಡಿಕೊಳ್ಳಲಾಗಿದ್ದು, ರೋಗಿಗಳ ಆರೋಗ್ಯ ತಪಾಸಣೆ, ಚಿಕಿತ್ಸೆ, ಯಾರಾದರೂ ಗಾಯಗೊಂಡರೆ ಡ್ರೆಸಿಂಗ್‌, ಔಷಧ ವಿತರಣೆ ಅವರೊಬ್ಬರೇ ಮಾಡುತ್ತಾರೆ. ಒಂದುವೇಳೆ ಅವರು ಗೈರಾದರೆ ಆಸ್ಪತ್ರೆಯ ಅಟೆಂಡರ್‌ ಅವರ ಅನುಪಸ್ಥಿತಿಯಲ್ಲಿ ಸಣ್ಣಪುಟ್ಟ ಕಾಯಿಲೆಗಳಿಗೆ ಔಷಧೋಪಚಾರ ಮಾಡುತ್ತಾರೆ. ಹೀಗೆ ನರ್ಸ್‌ ಹಾಗೂ ಅಲ್ಲಿನ ಅಟೆಂಡರ್‌ ಬಹು ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

ಕಾಯಂ ವೈದ್ಯರ ನೇಮಕಾತಿ ಆಗದ ಕಾರಣ ಬಳ್ಳಾರಿ, ಗದಗ, ಹುಬ್ಬಳ್ಳಿಯಿಂದ ವಾರದಲ್ಲಿ ಎರಡ್ಮೂರು ದಿನ ವೈದ್ಯರೊಬ್ಬರು ಆಸ್ಪತ್ರೆಗೆ ಬಂದು ಹೋಗುತ್ತಾರೆ. ಅವರು ಯಾವ ದಿನದಂದು ಆಸ್ಪತ್ರೆಗೆ ಬರುತ್ತಾರೆ ಎಂಬುದು ಜನರಿಗೆ ಗೊತ್ತಿರುವುದಿಲ್ಲ. ರೋಗಗಳು, ಅಪಘಾತಗಳು ವೈದ್ಯರು ಬರುವ ದಿನ ನೋಡಿ ಆಗುವುದಿಲ್ಲ ಎಂದು ವ್ಯಂಗ್ಯವಾಡುತ್ತಾರೆ ರೈಲ್ವೆ ಸಿಬ್ಬಂದಿ.

ಈ ಆಸ್ಪತ್ರೆಯ ವ್ಯಾಪ್ತಿಗೆ ನಗರದ ರೈಲು ನಿಲ್ದಾಣ ಸೇರಿದಂತೆ ಸ್ವಾಮಿಹಳ್ಳಿ, ವ್ಯಾಸನಕೆರೆ, ಸಂಕ್ಲಾಪುರ, ಕಾರಿಗನೂರು, ಮುನಿರಾಬಾದ್‌ ನಿಲ್ದಾಣಗಳು ಬರುತ್ತವೆ. ಅಲ್ಲಿ ಕೆಲಸ ನಿರ್ವಹಿಸುತ್ತಿರುವ ರೈಲ್ವೆ ಇಲಾಖೆಯ ನೌಕರರು, ನಿವೃತ್ತ ನೌಕರರು, ಅವರ ಕುಟುಂಬದವರು ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ರೈಲು ಹೋಗುವಾಗ ಅಥವಾ ಅದರಲ್ಲಿ ಪ್ರಯಾಣಿಸುವಾಗ ಏನಾದರೂ ಅಪಘಾತ ಸಂಭವಿಸಿ ಪ್ರಯಾಣಿಕರು ಗಾಯಗೊಂಡರೆ ಇದೇ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಇಲ್ಲದ ಕಾರಣ ರೈಲ್ವೆ ನೌಕರರು ಹಾಗೂ ಪ್ರಯಾಣಿಕರಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ.

‘ರೈಲ್ವೆ ಇಲಾಖೆಯಲ್ಲಿ ಅನೇಕ ವರ್ಷಗಳ ಕಾಲ ಕೆಲಸ ನಿರ್ವಹಿಸಿ ಹಲವು ಜನ ನಿವೃತ್ತರಾಗಿದ್ದಾರೆ. ಇಳಿವಯಸ್ಸಿನಲ್ಲಿ ರಕ್ತದೊತ್ತಡ, ಸಕ್ಕರೆ ಸೇರಿದಂತೆ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರು ಆಸ್ಪತ್ರೆಗೆ ಹೋದರೆ ಸಕಾಲಕ್ಕೆ ಚಿಕಿತ್ಸೆ ಸಿಗುವುದಿಲ್ಲ. ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಹೆಚ್ಚಿನ ಹಣ ತೆತ್ತು ಚಿಕಿತ್ಸೆ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಇಲಾಖೆಯ ನೌಕರರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ರೈಲ್ವೆ ದೇಶದಲ್ಲಿಯೇ ದೊಡ್ಡ ಇಲಾಖೆ. ಅದರಲ್ಲೂ ನೈರುತ್ಯ ಇಲಾಖೆಯ ವಿಭಾಗೀಯ ಕಚೇರಿ ಹುಬ್ಬಳ್ಳಿ ಸನಿಹದಲ್ಲಿಯೇ ಇದೆ. ಹೀಗಿದ್ದರೂ ಇಷ್ಟೊಂದು ನಿರ್ಲಕ್ಷ್ಯ ತೋರಲಾಗುತ್ತಿದೆ. ಯಾರಾದರೂ ಹಿರಿಯ ಅಧಿಕಾರಿಗಳು ಭೇಟಿ ನೀಡಿದಾಗ ಎಲ್ಲವೂ ವ್ಯವಸ್ಥಿತವಾಗಿ ಇರುತ್ತದೆ. ಅವರು ಹೋದ ನಂತರ ಮತ್ತದೇ ಸ್ಥಿತಿ. ಕಾಯಂ ವೈದ್ಯರು, ನರ್ಸ್‌ಗಳು ಇಲ್ಲದರಿಂದ ಜನರಿಗೆ ತೊಂದರೆಯಾಗುತ್ತಿದೆ. ವೈದ್ಯರ ನಿರೀಕ್ಷೆಯಲ್ಲಿ ಜನ ನಿತ್ಯ ಆಸ್ಪತ್ರೆಗೆ ಬಂದು ಹೋಗುವಂತಹ ಪರಿಸ್ಥಿತಿ ಇದೆ. ಈ ರೀತಿ ಆಸ್ಪತ್ರೆ ನಡೆಸುವುದರ ಬದಲು ಮುಚ್ಚುವುದೇ ವಾಸಿ’ ಎಂದು ಹೇಳಿದರು.

ಈ ಕುರಿತು ರೈಲು ನಿಲ್ದಾಣದ ಅಧಿಕಾರಿಯನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT