ಶುಕ್ರವಾರ, ನವೆಂಬರ್ 22, 2019
22 °C

ಹೊಸಪೇಟೆ ರೈಲು ನಿಲ್ದಾಣಕ್ಕೆ ಹೊಸ ಮೆರಗು

Published:
Updated:
Prajavani

ಹೊಸಪೇಟೆ: ರೈಲ್ವೆ ಇಲಾಖೆಯು ನಗರದ ರೈಲು ನಿಲ್ದಾಣಕ್ಕೆ ಹೊಸ ಮೆರಗು ನೀಡುತ್ತಿದೆ.

ಇಡೀ ರೈಲು ನಿಲ್ದಾಣಕ್ಕೆ ಬಣ್ಣ ಬಳಿಯಲಾಗುತ್ತಿದೆ. ಪ್ಲಾಟ್‌ಫಾರಂಗಳನ್ನು ಸ್ವಚ್ಛಗೊಳಿಸಿ ಅಲ್ಲಲ್ಲಿ ಬಣ್ಣ ಮಾಡಲಾಗುತ್ತಿದೆ. ರೈಲು ಸಂಚರಿಸುವ ಹಳಿಗಳ ಸುತ್ತ ಆವರಿಸಿಕೊಂಡಿದ್ದ ತ್ಯಾಜ್ಯವನ್ನು ತೆಗೆದು ವಿಲೇವಾರಿ ಮಾಡಲಾಗುತ್ತಿದೆ.

ಅಲ್ಲಲ್ಲಿ ಕೆಟ್ಟು ಹೋಗಿದ್ದ ಹಳೆಯ ವಿದ್ಯುದ್ದೀಪಗಳನ್ನು ತೆಗೆದು ಹೊಸದಾಗಿ ಅಳವಡಿಸಲಾಗಿದೆ. ಕೆಲ ಧ್ವನಿವರ್ಧಕಗಳನ್ನು ಬದಲಿಸಲಾಗಿದೆ. ಹೊರಗಿನಿಂದ ಬರುವ ಪ್ರವಾಸಿಗರ ಅನುಕೂಲಕ್ಕೆ ತೆರೆಯಲಾಗಿರುವ ಮಾಹಿತಿ ಕೇಂದ್ರವನ್ನು ಸ್ವಚ್ಛಗೊಳಿಸಿ, ಹಾಳಾಗಿದ್ದ ಅದರ ಮೇಲ್ಭಾಗವನ್ನು ಸರಿಪಡಿಸಲಾಗಿದೆ. ಹೊಸದಾದ ಚಿತ್ರಗಳನ್ನು ಹಾಕಲಾಗುತ್ತಿದೆ. ಕಸ ಹಾಕಲು ಕೆಲವೆಡೆ ಹೊಸದಾಗಿ ಡಸ್ಟ್‌ ಬೀನ್‌ಗಳನ್ನು ಅಳವಡಿಸಲಾಗಿದೆ.

ಬರುವ ಗುರುವಾರ (ಅ.17) ನಗರದಿಂದ ಕೊಟ್ಟೂರು ವರೆಗೆ ಪ್ರಯಾಣಿಕರ ರೈಲು ಓಡಾಟ ಶುರುವಾಗಲಿದೆ. ಅದಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಚಾಲನೆ ಕೊಡುವರು. ಅವರೊಂದಿಗೆ ಜಿಲ್ಲೆಯ ಜನಪ್ರತಿನಿಧಿಗಳು, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಈ ಸಮಾರಂಭದ ಹಿನ್ನೆಲೆಯಲ್ಲಿ ರೈಲು ನಿಲ್ದಾಣ ಮದುವೆ ಮನೆಯಂತೆ ಸಿಂಗಾರಗೊಳ್ಳುತ್ತಿದೆ.

ಸೆಪ್ಟೆಂಬರ್‌ನಲ್ಲೇ ರೈಲು ಸಂಚಾರ ಶುರುವಾಗಬೇಕಿತ್ತು. ಆದರೆ, ಉಪಚುನಾವಣೆ ಘೋಷಣೆಯಾಗಿದ್ದರಿಂದ ಅದು ನನೆಗುದಿಗೆ ಬಿದ್ದಿತ್ತು. ನ್ಯಾಯಾಲಯವು ಚುನಾವಣೆಗೆ ತಡೆ ನೀಡಿದ್ದು, ಡಿಸೆಂಬರ್‌ನಲ್ಲಿ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಸುಮಾರು ಎರಡು ದಶಕದಿಂದ ಜನ ಪ್ರಯಾಣಿಕರ ರೈಲು ಓಡಿಸಲು ಹೋರಾಟ ನಡೆಸುತ್ತಾ ಬಂದಿದ್ದಾರೆ. ಮತ್ತಷ್ಟು ವಿಳಂಬ ಮಾಡಿದರೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬಹುದು ಎಂಬ ದೃಷ್ಟಿಯಿಂದ ರೈಲ್ವೆ ಇಲಾಖೆ ಕೊನೆಗೂ ರೈಲು ಓಡಾಟಕ್ಕೆ ಮುಹೂರ್ತ ನಿಗದಿ ಮಾಡಿದೆ.

‘ಸತತವಾಗಿ ಈ ಭಾಗದ ಜನರ ಹೋರಾಟದ ಫಲವಾಗಿ ಕೊನೆಗೂ ಹೊಸಪೇಟೆ–ಕೊಟ್ಟೂರು ನಡುವೆ ಪ್ಯಾಸೆಂಜರ್‌ ರೈಲು ಓಡಿಸಲು ದಿನಾಂಕ ನಿಗದಿಪಡಿಸಿರುವುದು ಖುಷಿಯ ಸಂಗತಿಯಾಗಿದೆ. ಅದರ ಜತೆಗೆ ಹೊಸಪೇಟೆ ರೈಲು ನಿಲ್ದಾಣವನ್ನು ದುರಸ್ತಿಗೊಳಿಸುತ್ತಿರುವುದು ಒಳ್ಳೆಯ ಸಂಗತಿ’ ಎನ್ನುತ್ತಾರೆ ವಿಜಯನಗರ ರೈಲ್ವೆ ಕ್ರಿಯಾ ಸಮಿತಿ ಸದಸ್ಯ ಮಹೇಶ.

‘ನಗರದ ಅನಂತಶಯನಗುಡಿ ಬಳಿಯಿರುವ ರೈಲ್ವೆ ಗೇಟ್‌ ಬಳಿ ಮೇಲ್ಸೇತುವೆ ನಿರ್ಮಿಸಲು ಬಜೆಟ್‌ನಲ್ಲಿ ಹಣ ನೀಡಲಾಗಿದೆ. ಹೀಗಿದ್ದರೂ ಅದನ್ನು ವಿಳಂಬ ಮಾಡುತ್ತಿರುವುದು ಸರಿಯಲ್ಲ. ಹಂಪಿ ಸೇರಿದಂತೆ ಕಲ್ಯಾಣ ಕರ್ನಾಟಕದ ಅನೇಕ ಜಿಲ್ಲೆಗಳು, ಆಂಧ್ರ ಪ್ರದೇಶಕ್ಕೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಪದೇ ಪದೇ ರೈಲ್ವೆ ಗೇಟ್‌ ಹಾಕುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದಷ್ಟು ಶೀಘ್ರ ಸೇತುವೆ ನಿರ್ಮಿಸಬೇಕೆಂದು ನಗರಕ್ಕೆ ಬರುವ ರೈಲ್ವೆ ಸಚಿವರನ್ನು ಒತ್ತಾಯಿಸಲಾಗುವುದು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)