ಮಂಗಳವಾರ, ಆಗಸ್ಟ್ 20, 2019
21 °C
ಮದಲಗಟ್ಟಿ ಮುಳುಗಡೆ ಸಂತ್ರಸ್ತರು ಅತಂತ್ರ

ಬಳ್ಳಾರಿಯ ಮದಲಗಟ್ಟಿಯ ಮಂದಿಗೆ ರಕ್ಷಣೆ ಇಲ್ಲ, ಅಲ್ಲಿ ಸೌಕರ್ಯವಿಲ್ಲ...

Published:
Updated:
Prajavani

ಹೂವಿನಹಡಗಲಿ: ತುಂಗಭದ್ರೆಯ ತಟದಲ್ಲಿರುವ ತಾಲ್ಲೂಕಿನ ಮದಲಗಟ್ಟಿ ಗ್ರಾಮದ ಜನರು ದಶಕಗಳಿಂದ ಪ್ರವಾಹದ ಭೀತಿಯಲ್ಲೇ ಬದುಕುತ್ತಿದ್ದಾರೆ. ಸತತ ನೆರೆ ಹಾವಳಿಗೆ ತುತ್ತಾಗುತ್ತಿರುವ ಗ್ರಾಮಸ್ಥರಿಗೆ ಪರಿಹಾರ ಎಂಬುದು ಕನ್ನಡಿಯೊಳಗಿನ ಗಂಟಾಗಿದೆ.

ಪ್ರತಿ ಮಳೆಗಾಲದಲ್ಲೂ ಮದಲಗಟ್ಟಿಗೆ ಪ್ರವಾಹದ ಭೀತಿ ಎದುರಾಗುತ್ತಿದ್ದು, ಇದರಿಂದ ರಕ್ಷಣೆಯೇ ಇಲ್ಲವಾಗಿದೆ. ಸಂತ್ರಸ್ತರಿಗಾಗಿ ರೂಪಿಸಿರುವ ನವಗ್ರಾಮದಲ್ಲಿ ಕನಿಷ್ಠ ಮೂಲಸೌಕರ್ಯಗಳಿಲ್ಲದೇ ಮುಳುಗಡೆ ಸಂತ್ರಸ್ತರು ಅತಂತ್ರರಾಗಿದ್ದಾರೆ.

ತುಂಗಭದ್ರಾ ಜಲಾಶಯ ಹಿನ್ನೀರಿನಲ್ಲಿ ಮದಲಗಟ್ಟಿ 'ಮುಳುಗಡೆ ಗ್ರಾಮ' ಎಂದು ಘೋಷಣೆಯಾಗ್ದಿದರೂ ಕಾರಣಾಂತರದಿಂದ ಸ್ಥಳಾಂತರಗೊಂಡಿರಲಿಲ್ಲ. ಸತತ ನೆರೆ ಹಾವಳಿ ಮತ್ತು ತುಂಗಭದ್ರಾ ಸೇತುವೆ ನಿರ್ಮಾಣದಿಂದ ಮನೆ ಕಳೆದುಕೊಂಡ ಗ್ರಾಮದ ನಿರಾಶ್ರಿತರ ನಿರಂತರ ಹೋರಾಟಕ್ಕೆ ಮಣಿದ ಸರ್ಕಾರ 2009ರಲ್ಲಿ ಪರಿಹಾರ ಕಲ್ಪಿಸುವ ನಿರ್ಧಾರ ಕೈಗೊಂಡಿತು.

ಆಸರೆ ಯೋಜನೆ ಅಡಿ ಗ್ರಾಮದ 64 ಕುಟುಂಬಗಳಿಗೆ ಮನೆ ಕಟ್ಟಿಕೊಡಲು ಗಣಿ ಕಂಪೆನಿಯೊಂದಕ್ಕೆ ವಹಿಸಲಾಗಿತ್ತು. ಗಣಿ ಉದ್ಯಮಿಗಳ ನೆರವಿನಿಂದ ನವಗ್ರಾಮದಲ್ಲಿ 50 ಮನೆಗಳು ನಿರ್ಮಾಣವಾಗಿದ್ದು, ಅವು ವಾಸಕ್ಕೆ ಯೋಗ್ಯವಾಗಿಲ್ಲ. 14 ಮನೆಗಳು ಬುನಾದಿಯ ಹಂತದಲ್ಲೇ ಉಳಿದಿವೆ. ಮನೆಗಳಿಗೆ ಕಿಟಕಿ, ಬಾಗಿಲುಗಳೇ ಇಲ್ಲ. ಸಂಪರ್ಕ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ರಸ್ತೆ ಮಧ್ಯೆ ನೇತಾಡುವ ವಿದ್ಯುತ್ ಲೈನ್‌ಗಳು ಪ್ರಾಣಕ್ಕೆ ಎರವಾಗಿವೆ. ನವಗ್ರಾಮದ ಸುತ್ತಲೂ ಜಾಲಿಪೊದೆಗಳು ಬೆಳೆದಿರುವುದರಿಂದು ಜನರು ವಿಷಜಂತುಗಳ ಭಯದಲ್ಲಿ ಬದುಕುವಂತಾಗಿದೆ. ಇಂತಹ ದುಸ್ಥಿತಿಯಲ್ಲಿರುವ ನವಗ್ರಾಮಕ್ಕೆ ತೆರಳಲು ಸಂತ್ರಸ್ತರು ಹಿಂದೇಟು ಹಾಕುತ್ತಿದ್ದಾರೆ.

ಮದಲಗಟ್ಟಿ ಗ್ರಾಮದ ಬಹುತೇಕ ಜನರು ಸುಕ್ಷೇತ್ರದಲ್ಲಿ ವ್ಯಾಪಾರಿ ಮಾಡಿಕೊಂಡು ಜೀವನ ಸಾಗಿಸುವವರಾಗಿದ್ದಾರೆ. ಮೂಲ ಗ್ರಾಮ ತೊರೆದರೆ ಜೀವನ ಕಷ್ಟವಾಗಬಹುದೆಂಬ ಆತಂಕ ಅವರನ್ನು ಕಾಡುತ್ತಿದೆ. ಸಂತ್ರಸ್ತರಿಗೆ ನವಗ್ರಾಮದಲ್ಲಿ ಮೂಲಸೌಕರ್ಯ ಒದಗಿಸಿ, ಮೂಲ ಗ್ರಾಮದಲ್ಲಿ ಜೀವನೋಪಾಯಕ್ಕೆ ಅನುಕೂಲ ಕಲ್ಪಿಸಿಕೊಡಬೇಕಿದೆ.

ಈಚೆಗೆ ತುಂಗಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿದ್ದರಿಂದ ಇಡೀ ಗ್ರಾಮ ಜಲಾವೃತಗೊಂಡಿತ್ತು. ತಾಲ್ಲೂಕು ಆಡಳಿತ ಎಲ್ಲ ಸಂತ್ರಸ್ತರನ್ನು ನವಗ್ರಾಮಕ್ಕೆ ಸ್ಥಳಾಂತರಿಸಿತ್ತು. ಇನ್ನೂ ಹಂಚಿಕೆಯಾಗದೇ ಇರುವ ಮನೆಗಳಲ್ಲಿ ಸಂತ್ರಸ್ತರು ತಾತ್ಕಾಲಿಕ ವಾಸ್ತವ್ಯ ಹೂಡಿದ್ದಾರೆ. ಆದರೆ, ಅಲ್ಲಿ ಸೌಲಭ್ಯಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. 

‘ನವಗ್ರಾಮದಲ್ಲಿ ಕನಿಷ್ಟ ಮೂಲಸೌಕರ್ಯಗಳಿಲ್ಲ. ಶೌಚಾಲಯ ಇಲ್ಲದೇ ಇರುವುದರಿಂದ ತಂಬಿಗೆ ಹಿಡಿದು ಬಯಲಿಗೆ ಹೋಗಬೇಕಿದೆ. ಹೊಲ, ಗದ್ದೆಗಳವರು ಬಾಯಿಗೆ ಬಂದಂತೆ ಮಾತಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿ ಬದುಕುವುದಾದರು ಹೇಗೆ’ ಎಂದು ಮಹಿಳೆಯರು ಪ್ರಶ್ನಿಸುತ್ತಿದ್ದಾರೆ.

‘ಮುಳುಗಡೆ ನೆಪ ಹೇಳಿ ಮೂಲ ಗ್ರಾಮದಲ್ಲಿಯೂ ನಮಗೆ ಸೌಲಭ್ಯ ನೀಡುತ್ತಿಲ್ಲ. ಇತ್ತ ನವಗ್ರಾಮಕ್ಕೂ ಮೂಲಸೌಕರ್ಯ ಕಲ್ಪಿಸುತ್ತಿಲ್ಲ. ಎಲ್ಲ ಕುಟುಂಬಗಳಿಗೆ ಮನೆ, ಹಿತ್ತಿಲು, ತಿಪ್ಪೆಗಳನ್ನು ಹಾಕಿಕೊಳ್ಳಲು ಜಾಗ, ಅಗತ್ಯ ಸೌಲಭ್ಯಗಳನ್ನು ನೀಡಿ ಸರ್ಕಾರ ಸಂತ್ರಸ್ತರನ್ನು ಸ್ಥಳಾಂತರಿಸಬೇಕು’ ಎಂದು ರಂಗಸ್ವಾಮಿ, ಹನುಮಂತಪ್ಪ ಶೀರನಹಳ್ಳಿ, ದೀಪದ ರಂಗಪ್ಪ ಒತ್ತಾಯಿಸಿದರು.

Post Comments (+)