ಗುರುವಾರ , ಮೇ 13, 2021
19 °C

ಸ್ಮಾರಕಗಳಿಗೆ ಪ್ರವೇಶ ನಿರ್ಬಂಧ: ಪ್ರವಾಸಿಗರಿಲ್ಲದೆ ಕಳೆಗುಂದಿದ ಹಂಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ವ್ಯಾಪಕವಾಗಿ ಕೋವಿಡ್‌–19 ಹರಡುತ್ತಿರುವುದರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎಎಸ್‌ಐ), ಹಂಪಿ ಸ್ಮಾರಕಗಳ ವೀಕ್ಷಣೆಗೆ ನಿರ್ಬಂಧ ಹೇರಿದ್ದರಿಂದ ಶುಕ್ರವಾರ ವಿಶ್ವ ಪಾರಂಪರಿಕ ತಾಣ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿತ್ತು.

ಕಮಲಾಪುರದ ವಸ್ತು ಸಂಗ್ರಹಾಲಯ, ಹಂಪಿಯ ವಿಜಯ ವಿಠಲ ದೇವಸ್ಥಾನ, ಕಮಲ ಮಹಲ್, ರಾಣಿ ಸ್ನಾನಗೃಹ, ಸಾಸಿವೆಕಾಳು ಗಣಪ, ಕಡಲೆಕಾಳು ಗಣೇಶ ಸೇರಿದಂತೆ ಇತರೆ ಸ್ಮಾರಕಗಳ ಪ್ರವೇಶ ದ್ವಾರದಲ್ಲಿ ಪ್ರವೇಶದ ಮೇಲೆ ನಿರ್ಬಂಧ ಹೇರಿದ ಪತ್ರ ಅಂಟಿಸಲಾಗಿತ್ತು. ಪ್ರವೇಶ ದ್ವಾರಕ್ಕೆ ಬೀಗ ಜಡಿದು, ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು.

ಹಂಪಿ ವೀಕ್ಷಣೆಗೆಂದು ಗುರುವಾರ ಸಂಜೆ ದೂರದ ಊರುಗಳಿಂದ ನಗರಕ್ಕೆ ಬಂದು ವಿವಿಧ ಹೋಟೆಲ್‌ಗಳಲ್ಲಿ ತಂಗಿದ ಜನ ಶುಕ್ರವಾರ ಬೆಳಿಗ್ಗೆ ಸ್ಮಾರಕಗಳನ್ನು ನೋಡಲಾಗದೆ ನಿರಾಸೆಯಿಂದ ಹಿಂತಿರುಗಿದರು.

‘ವಾರಾಂತ್ಯದ ಮೂರು ದಿನ ಹಂಪಿಯಲ್ಲಿ ಕಳೆಯಬೇಕೆಂದು ಯೋಜನೆ ಮಾಡಿಕೊಂಡು ಕುಟುಂಬ ಸದಸ್ಯರೊಂದಿಗೆ ಗುರುವಾರ ಸಂಜೆ ಹೊಸಪೇಟೆಗೆ ಬಂದು, ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೆವು. ಆದರೆ, ಸ್ಮಾರಕಗಳ ವೀಕ್ಷಣೆಗೆ ನಿರ್ಬಂಧ ಹೇರಿರುವ ವಿಚಾರ ಶುಕ್ರವಾರ ಬೆಳಿಗ್ಗೆ ಗೊತ್ತಾಯಿತು. ಅನಿವಾರ್ಯವಾಗಿ ಹಿಂತಿರುಗುತ್ತಿದ್ದೇವೆ. ಹೋಟೆಲ್‌, ಕಾರು ಬಾಡಿಗೆಗೆ ಸಾಕಷ್ಟು ಹಣ ಖರ್ಚಾಗಿದೆ’ ಎಂದು ಬೆಂಗಳೂರಿನ ನಿವಾಸಿ ರಾಜೇಶ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಮಾರಕಗಳ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ವಿರೂಪಾಕ್ಷೇಶ್ವರ ದೇವಸ್ಥಾನದ ದ್ವಾರದ ಬಳಿ ಪತ್ರ ಅಂಟಿಸಲಾಗಿತ್ತು. ಆದರೆ, ಬೆರಳೆಣಿಕೆಯಷ್ಟು ಭಕ್ತರು ಎಂದಿನಂತೆ ದೇವರ ದರ್ಶನ ಪಡೆದರು.

‘ಪುರಾತತ್ವ ಇಲಾಖೆಯ ಸ್ಮಾರಕಗಳ ವೀಕ್ಷಣೆಗೆ ಸಂಬಂಧಿಸಿದಂತೆ ನಿರ್ಬಂಧ ಹೇರಲಾಗಿದೆ. ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಅಲ್ಲ. ಭಕ್ತರು ಮಾಸ್ಕ್‌ ಧರಿಸಿ, ಅಂತರ ಕಾಯ್ದುಕೊಂಡು ದರ್ಶನ ಪಡೆಯಬಹುದು. ಈ ತಾತ್ಕಾಲಿಕ ನಿಯಮ ಸರ್ಕಾರದ ಮುಂದಿನ ಆದೇಶದ ವರಗೆ ಜಾರಿಯಲ್ಲಿರುತ್ತದೆ’ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಪ್ರಕಾಶ್‌ ರಾವ್‌ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು