ಭಾನುವಾರ, ನವೆಂಬರ್ 27, 2022
26 °C
ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ ವಿದ್ಯಾರ್ಥಿಗಳು ಅತಂತ್ರ

ಪರೀಕ್ಷೆಗೆ ಒಂದೇ ದಿನ; ಸಿಗದ ಹಾಲ್‌ ಟಿಕೆಟ್‌- ಪದವಿ ವಿದ್ಯಾರ್ಥಿಗಳು ಅತಂತ್ರ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್‌) ಜಾರಿಗೆ ಬಂದು ವರ್ಷವಾಗುತ್ತಿದೆ. ಆದರೆ, ಇದುವರೆಗೆ ಈ ಸಮಸ್ಯೆಯಿಂದ ಇಲ್ಲಿನ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊರಬಂದಂತಿಲ್ಲ.

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದವರು ಯುಯುಸಿಎಂಎಸ್‌ಗೆ ಸಂಬಂಧಿಸಿದಂತೆ ಎಲ್ಲ ರೀತಿಯ ತಾಂತ್ರಿಕ ನೆರವು ಕೊಡಲು ಸಿದ್ಧರಿದ್ದಾರೆ. ಅದರೆ ನೆರವು ಪಡೆದು ಈಗಾಗಲೇ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳು ಅದಕ್ಕೆ ಹೊಂದಿಕೊಂಡಿವೆ. ಆದರೆ, ಶಂಕರ್‌ ಸಿಂಗ್‌ ಕಾಲೇಜಿನವರು ಇದುವರೆಗೆ ಆ ಸಮಸ್ಯೆಯಲ್ಲೇ ಇದ್ದಾರೆ. ಇದರ ಪರಿಣಾಮ ನೇರವಾಗಿ ವಿದ್ಯಾರ್ಥಿಗಳ ಮೇಲಾಗುತ್ತಿದೆ.

ಪದವಿ ದ್ವಿತೀಯ ಸೆಮಿಸ್ಟರ್‌ ಪರೀಕ್ಷೆಗೆ ಒಂದೇ ದಿನ ಬಾಕಿ ಉಳಿದಿದೆ. ಸೋಮವಾರ (ಸೆ.26) ಮಾತೃಭಾಷೆ ಕನ್ನಡ ಪರೀಕ್ಷೆ ನಡೆಯಲಿವೆ. ಶಂಕರ್‌ ಸಿಂಗ್‌ ಕಾಲೇಜಿನಲ್ಲಿ ಬಿ.ಎ, ಬಿಎಸ್ಸಿ ಹಾಗೂ ಬಿಕಾಂನಲ್ಲಿ ಒಟ್ಟು 3,900 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಮೊದಲ ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲರೂ ದ್ವಿತೀಯ ಸೆಮಿಸ್ಟರ್‌ ಪರೀಕ್ಷೆ ಎದುರಿಸಲು ಸಿದ್ದರಾಗಿದ್ದಾರೆ. ಆದರೆ, ಯುಯುಸಿಎಂಎಸ್‌ಗೆ ಸಂಬಂಧಿಸಿದ ಗೊಂದಲದಿಂದ ಶಂಕರ್‌ ಸಿಂಗ್‌ ಕಾಲೇಜು ಹೊರಬರದ ಕಾರಣ ಹೆಚ್ಚಿನ ವಿದ್ಯಾರ್ಥಿಗಳಿಗೆ ಶುಲ್ಕ ತುಂಬಲು ಸಾಧ್ಯವಾಗಿಲ್ಲ. ಪರೀಕ್ಷೆಗೆ ಒಂದೇ ದಿನ ಬಾಕಿ ಉಳಿದಿದ್ದು, ಅನೇಕರಿಗೆ ಹಾಲ್‌ ಟಿಕೆಟ್‌ ಸಿಕ್ಕಿಲ್ಲ. ಇದರಿಂದ ವಿದ್ಯಾರ್ಥಿಗಳು ಪೇಚಿಗೆ ಸಿಲುಕಿದ್ದಾರೆ.

‘ಯುಯುಸಿಎಂಎಸ್‌ನಲ್ಲಿ ಶುಲ್ಕ ತುಂಬಲು ಸಾಕಷ್ಟು ಪ್ರಯತ್ನಿಸಿದ್ದೇವೆ. ಆದರೆ, ಸಾಧ್ಯವಾಗಿಲ್ಲ. ಕಾಲೇಜಿನವರು ಯಾವುದೇ ರೀತಿಯ ಮಾಹಿತಿ ಕೊಡುತ್ತಿಲ್ಲ. ಪರೀಕ್ಷೆಗೆ ಒಂದೇ ದಿನ ಬಾಕಿ ಇದೆ. ಹಾಲ್‌ ಟಿಕೆಟ್‌ ಬಂದಿಲ್ಲ. ವಿಶ್ವವಿದ್ಯಾಲಯದವರನ್ನು ಕೇಳಿದರೆ ನಿಮ್ಮ ಕಾಲೇಜಿನವರನ್ನೇ ಕೇಳಿ ಎಂದು ವಾಪಸ್‌ ಕಳಿಸಿದ್ದಾರೆ. ಹಾಲ್‌ ಟಿಕೆಟ್‌ ಬರದ ಕಾರಣ ಅದರ ಚಿಂತೆಯಲ್ಲಿ ಪರೀಕ್ಷೆಗೆ ಕೊನೆಯ ಹಂತದ ಸಿದ್ಧತೆ ಮಾಡಿಕೊಳ್ಳಲು ಆಗುತ್ತಿಲ್ಲ’ ಎಂದು ಶಂಕರ್‌ ಆನಂದ್‌ ಸಿಂಗ್‌ ಕಾಲೇಜಿನ ಕೆಲ ವಿದ್ಯಾರ್ಥಿಗಳು ‘ಪ್ರಜಾವಾಣಿ’ಗೆ ಗೋಳು ತೋಡಿಕೊಂಡಿದ್ದಾರೆ.

ಈ ಸಂಬಂಧ ‘ಪ್ರಜಾವಾಣಿ’ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ರಮೇಶ ಓಲೇಕಾರ್‌ ಅವರನ್ನು ಸಂಪರ್ಕಿಸಿದಾಗ, ಶೈಕ್ಷಣಿಕ ವರ್ಷದ ಆರಂಭದಲ್ಲಿ ಯುಯುಸಿಎಂಎಸ್‌ ಜಾರಿಗೆ ಬಂದಾಗ ಸ್ವಲ್ಪ ಸಮಸ್ಯೆಯಾಗಿತ್ತು. ಈಗ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ಸಮಸ್ಯೆಯಿಲ್ಲ. ಶಂಕರ್‌ ಆನಂದ್‌ ಸಿಂಗ್‌ ಕಾಲೇಜಿನವರಿಗೆ ಎಲ್ಲ ರೀತಿಯ ನೆರವು ಕೊಡಲಾಗುವುದು ಎಂದು ತಿಳಿಸಿದ್ದರೂ ಅವರು ಪಡೆದಿಲ್ಲ ಎಂದು ಹೇಳಿದರು.

‘ಯುಯುಸಿಎಂಎಸ್‌ ಹೊಸ ವ್ಯವಸ್ಥೆ. ಈ ಕುರಿತು ಕಾಲೇಜಿನಲ್ಲಿ ಕೆಲ ಸಿಬ್ಬಂದಿಗೆ ತರಬೇತಿ ಕೊಡಿಸಿ, ಅವರನ್ನು ಆ ಕೆಲಸಕ್ಕಾಗಿಯೇ ಮೀಸಲಿಡಬೇಕು. ಯಾವುದೇ ವಿದ್ಯಾರ್ಥಿಗಳಿಗೆ ಅನುಮಾನ ಬಂದರೆ ಅವರು ಸಲಹೆ ಕೊಟ್ಟು ಬಗೆಹರಿಸಬೇಕು. ವಿದ್ಯಾರ್ಥಿಗಳು ಶುಲ್ಕ ಭರಿಸಿದ ನಂತರ ಅದಕ್ಕೆ ಸಂಬಂಧಿಸಿದ ಕಾಲೇಜಿನವರು ಒಪ್ಪಿಗೆ ಕೊಡಬೇಕು. ಕೊನೆಯ ಒಪ್ಪಿಗೆ ವಿ.ವಿ ನೀಡುತ್ತದೆ. ಅನಂತರ ಹಾಲ್‌ ಟಿಕೆಟ್‌ ಜನರೇಟ್‌ ಆಗುತ್ತದೆ. ಆದರೆ, ಶಂಕರ್‌ ಸಿಂಗ್‌ ಕಾಲೇಜಿನಿಂದ ಆ ಪ್ರಕ್ರಿಯೆಯೇ ಆಗಿಲ್ಲ. ಶನಿವಾರ, ಭಾನುವಾರವೂ ನಮ್ಮ ಕಡೆಯಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಲಾಗಿದೆ. ಮಿಕ್ಕುಳಿದದ್ದು ಅವರಿಗೆ ಬಿಟ್ಟದ್ದು’ ಎಂದು ತಿಳಿಸಿದರು.

ಈ ಸಂಬಂಧ ‘ಪ್ರಜಾವಾಣಿ’ ಶಂಕರ್‌ ಆನಂದ್‌ ಸಿಂಗ್‌ ಕಾಲೇಜಿನ ಪ್ರಾಚಾರ್ಯ ನಟರಾಜ ಪಾಟೀಲ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು