ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಸ್ಮಾರಕಗಳ ವೀಕ್ಷಣೆಗೆ ಆನ್‌ಲೈನ್‌ ಟಿಕೆಟ್: ಪ್ರವಾಸಿಗರಿಗೆ‌ ಕಿರಿಕಿರಿ

ಹಂಪಿಯಲ್ಲಿ ನೆಟವರ್ಕ್‌ ಸಮಸ್ಯೆ; ಸ್ಮಾರ್ಟ್‌ಫೋನ್‌, ಇಮೇಲ್‌ ಇದ್ದರಷ್ಟೇ ಟಿಕೆಟ್‌
Last Updated 8 ಸೆಪ್ಟೆಂಬರ್ 2020, 8:17 IST
ಅಕ್ಷರ ಗಾತ್ರ

ಹೊಸಪೇಟೆ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎಎಸ್‌ಐ) ಹಂಪಿ ಸ್ಮಾರಕಗಳ ವೀಕ್ಷಣೆಗೆ ಆನ್‌ಲೈನ್‌ ಟಿಕೆಟ್‌ ಜಾರಿಗೆ ತಂದಿದೆ. ಆದರೆ, ಅದರಿಂದ ಪ್ರವಾಸಿಗರಿಗೆ ಕಿರಿಕಿರಿ ಉಂಟಾಗುತ್ತಿದೆ.

ಕಮಲಾಪುರ ಬಳಿಯಿರುವ ಎಎಸ್‌ಐಗೆ ಸೇರಿದ ವಸ್ತು ಸಂಗ್ರಹಾಲಯ ಹೊರತುಪಡಿಸಿದರೆ ಹಂಪಿಯ ಬೇರೆಲ್ಲೂ ನೆಟವರ್ಕ್‌ ಸಿಗುವುದಿಲ್ಲ. ನೆಟವರ್ಕ್‌ ಸಿಗದ ಕಾರಣ ವೆಬ್‌ಸೈಟ್‌ ಮೂಲಕ ಟಿಕೆಟ್‌ ಪಡೆಯಲು ಸಾಧ್ಯವಾಗುತ್ತಿಲ್ಲ. ಇದು ನೆಟವರ್ಕ್‌ ಸಮಸ್ಯೆಯಾದರೆ, ಹಳ್ಳಿಗಾಡಿನಿಂದ ಬರುವ ಬಹುತೇಕರಲ್ಲಿ ಸ್ಮಾರ್ಟ್‌ಫೋನ್‌ ಇರುವುದಿಲ್ಲ. ಒಂದುವೇಳೆ ಇದ್ದರೂ ಇಮೇಲ್‌ ಬಳಸುವವರು ಬಹಳ ವಿರಳ. ಇದರಿಂದ ಸಹಜವಾಗಿಯೇ ಪ್ರವಾಸಿಗರಿಗೆ ತೊಂದರೆ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ.

ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡ ಟಿಕೆಟ್‌ ಮೇಲೆ ಕ್ಯೂಆರ್‌ ಕೋಡ್‌ ಇರುತ್ತದೆ. ಫೋನಿನಲ್ಲಿರುವ ಟಿಕೆಟ್‌ ಅನ್ನು ಸ್ಮಾರಕಗಳ ಪ್ರವೇಶ ದ್ವಾರದ ಬಳಿ ತೋರಿಸಿದರೆ ಅಲ್ಲಿನ ಸಿಬ್ಬಂದಿ ಅದನ್ನು ಸ್ಕ್ಯಾನ್‌ ಮಾಡಿ ಪ್ರವಾಸಿಗರನ್ನು ಒಳಗೆ ಬಿಡುತ್ತಾರೆ. ಆದರೆ, ನೆಟವರ್ಕ್‌, ಸ್ಮಾರ್ಟ್‌ಫೋನ್‌, ಇಮೇಲ್‌ ವಿಳಾಸದ ಕಾರಣಕ್ಕಾಗಿ ಅನೇಕರಿಗೆ ಟಿಕೆಟ್‌ ಪಡೆಯಲು ಆಗುತ್ತಿಲ್ಲ. ಹೀಗಾಗಿ ಸ್ಮಾರಕಗಳನ್ನು ಕಣ್ತುಂಬಿಕೊಳ್ಳುವುದರಿಂದ ಜನ ವಂಚಿತರಾಗುತ್ತಿದ್ದಾರೆ ಎಂದು ಸ್ಥಳೀಯ ಗೈಡ್‌ಗಳು ತಿಳಿಸಿದ್ದಾರೆ.

‘ಹಂಪಿಯ ವಸ್ತು ಸಂಗ್ರಹಾಲಯ, ವಿಜಯ ವಿಠಲ ದೇವಸ್ಥಾನ ಹಾಗೂ ಕಮಲ ಮಹಲ್‌ ಸ್ಮಾರಕಗಳ ಹೊರಭಾಗದಲ್ಲಿ ಟಿಕೆಟ್‌ ಕೌಂಟರ್‌ಗಳಿವೆ. ಆದರೆ, ಕೊರೊನಾ ಕಾರಣಕ್ಕಾಗಿ ಸದ್ಯ ಅಲ್ಲಿ ಟಿಕೆಟ್‌ ನೀಡುತ್ತಿಲ್ಲ. ಅದರ ಬದಲು ವೆಬ್‌ಸೈಟಿನಿಂದ ಪ್ರವಾಸಿಗರು ಟಿಕೆಟ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಹಂಪಿಯ ಬಹುತೇಕ ಕಡೆ ನೆಟವರ್ಕ್‌ ಸಿಗುವುದಿಲ್ಲ. ಈ ವಿಷಯ ಗೊತ್ತಿಲ್ಲದೆಯೇ ಪ್ರವಾಸಿಗರು ನೇರವಾಗಿ ಸ್ಮಾರಕಗಳಿಗೆ ಬರುತ್ತಾರೆ. ನಂತರ ಟಿಕೆಟ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಆಗುವುದಿಲ್ಲ. ಸ್ಮಾರಕ ನೋಡಲಾಗದೆ ಅನೇಕ ಜನ ಹಿಂತಿರುಗುತ್ತಿದ್ದಾರೆ’ ಎಂದು ಹಂಪಿ ಗೈಡ್‌ ಗೋಪಾಲ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಹಳ್ಳಿಯಿಂದ ಬರುವ ಬಹುತೇಕರಲ್ಲಿ ಸ್ಮಾರ್ಟ್‌ಫೋನ್‌ ಇರುವುದಿಲ್ಲ. ಒಂದುವೇಳೆ ಇದ್ದರೂ ಇಮೇಲ್‌ ವಿಳಾಸ ಇರೊಲ್ಲ. ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿರುವುದರಿಂದ ಮತ್ತಷ್ಟು ತೊಂದರೆಯಾಗುತ್ತಿದೆ. ದೂರದಿಂದ ಅಪಾರ ಹಣ ಖರ್ಚು ಮಾಡಿಕೊಂಡು ಬರುವ ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ. ಇತ್ತೀಚೆಗೆ ಪ್ರವೇಶ ದ್ವಾರದ ಬಳಿಯಲ್ಲಿ ಎಎಸ್‌ಐ ಸಿಬ್ಬಂದಿಯೊಂದಿಗೆ ವಾಗ್ವಾದ ಕೂಡ ನಡೆದಿವೆ. ಕೌಂಟರ್‌ ತೆರೆಯದಿದ್ದರೂ ಯಾರಿಗೆ ನೆಟವರ್ಕ್‌ ಅಥವಾ ಇನ್ನಿತರೆ ಕಾರಣಗಳಿಂದ ಟಿಕೆಟ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವೋ ಅಂತಹವರಿಗೆ ಸ್ಥಳದಲ್ಲೇ ಟಿಕೆಟ್‌ ಕೊಡುವ ವ್ಯವಸ್ಥೆ ಜಾರಿಗೆ ತರಬೇಕು. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT