ಮಂಗಳವಾರ, ಜನವರಿ 26, 2021
16 °C
ಅವೈಜ್ಞಾನಿಕ ಕಾಮಗಾರಿಗೆ ತೀವ್ರ ವಿರೋಧ

ಬಳ್ಳಾರಿ: ಕೋಟೆ ಗೋಡೆ ಪುನರ್‌ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಪೈಪ್‌ಲೈನ್‌ ಕಾಮಗಾರಿಗೆ ಅಗೆದು ಹಾಳುಗೆಡವಿದ್ದ ತಾಲ್ಲೂಕಿನ ಕಮಲಾಪುರ ಸಮೀಪದ ವಿಜಯನಗರ ಕಾಲದ ಕೋಟೆ ಗೋಡೆ ಪುನರ್‌ ನಿರ್ಮಾಣ ಕೆಲಸವನ್ನು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ (ಬಿಟಿಪಿಎಸ್‌) ಕೈಗೆತ್ತಿಕೊಂಡಿದೆ.

ನಾರಾಯಣಪುರ ಜಲಾಶಯದಿಂದ ಕುಡುತಿನಿಯ ಬಿಟಿಪಿಎಸ್‌ ವರೆಗೆ ಪೈಪ್‌ಲೈನ್‌ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪೈಪ್‌ಲೈನ್‌ಗಾಗಿ ನೆಲ ಅಗೆದು ಕೋಟೆ ಗೋಡೆ ಕೆಡವಲಾಗಿತ್ತು. ಈ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿದ ನಂತರ ಜಿಲ್ಲಾಡಳಿತವು ಕಾಮಗಾರಿಗೆ ತಡೆಯೊಡ್ಡಿತ್ತು.

ಈಗ ಕೋಟೆ ಗೋಡೆಯನ್ನು ಮೊದಲಿನಂತೆ ನಿರ್ಮಿಸಲಾಗುತ್ತಿದೆ. ಆದರೆ, ಅದರ ಬೃಹತ್‌ ಕಲ್ಲುಗಳನ್ನು ಈ ಹಿಂದಿನಂತೆ ಮರು ಜೋಡಿಸಿ, ಕೋಟೆ ಗೋಡೆ ಕಟ್ಟುತ್ತಿಲ್ಲ. ಬದಲಾಗಿ ಆ ಕಲ್ಲುಗಳನ್ನು ತುಂಡರಿಸಿ, ಅವುಗಳನ್ನು ಸೈಜುಗಲ್ಲುಗಳಂತೆ ಮಾಡಿ ಗೋಡೆ ಕಟ್ಟಲಾಗುತ್ತಿದೆ. ಇದಕ್ಕೆ ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣ ಸೇನೆ ವಿರೋಧ ವ್ಯಕ್ತಪಡಿಸಿದೆ.

‘ಈ ಹಿಂದೆ ನಮ್ಮ ಹೋರಾಟ ಹಾಗೂ ‘ಪ್ರಜಾವಾಣಿ’ ವರದಿ ಪ್ರಕಟಿಸಿದ್ದರಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಆಗ ಮಾತು ಕೊಟ್ಟಿರುವಂತೆ ಕೋಟೆ ಗೋಡೆ ನಿರ್ಮಿಸಲಾಗುತ್ತಿದೆ. ಆದರೆ, ಪುರಾತನ ಕಲ್ಲುಗಳನ್ನು ಸೈಜುಗಲ್ಲುಗಳಾಗಿ ಪರಿವರ್ತಿಸಿ ಗೋಡೆ ಕಟ್ಟಲಾಗುತ್ತಿದೆ. ಇದು ಭಾರತೀಯ ಪುರಾತತ್ವ ಅಧಿನಿಯಮ 1961ರ ನಿಯಮಕ್ಕೆ ವಿರುದ್ಧವಾದುದು. ಪ್ರಾಚೀನ ಸ್ಥಳ ಅಥವಾ ಸ್ಮಾರಕಕ್ಕೆ ಸಂಬಂಧಿಸಿದ ಯಾವುದೇ ವಸ್ತು ವಿರೂಪಗೊಳಿಸುವುದು ಅಪರಾಧ’ ಎಂದು ಸೇನೆಯ ಅಧ್ಯಕ್ಷ ವಿಶ್ವನಾಥ ಮಾಳಗಿ ಆರೋಪಿಸಿದ್ದಾರೆ.

‘ಕಾನೂನು ಉಲ್ಲಂಘಿಸಿ ಗೋಡೆ ನಿರ್ಮಿಸುತ್ತಿರುವುದನ್ನು ಕೂಡಲೇ ತಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಅವರು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು