ಮೌಢ್ಯದ ವಿರುದ್ಧ ಧ್ವನಿಯೆತ್ತಿದ್ದ ಪೆರಿಯಾರ್: ಬಿಸಾಟಿ ತಾಯಪ್ಪ ನಾಯಕ

ಹೊಸಪೇಟೆ: ‘ಪುರೋಹಿತಷಾಹಿಗಳು ವ್ಯವಸ್ಥಿತವಾಗಿ ಜನರಲ್ಲಿ ಮೂಢನಂಬಿಕೆ ಬಿತ್ತುತ್ತಿದ್ದಾರೆ. ಪೆರಿಯಾರ್ ರಾಮಸ್ವಾಮಿ ನಾಯಕರ್ ಅವರು ಅದರ ವಿರುದ್ಧ ದೊಡ್ಡ ಚಳವಳಿ ನಡೆಸಿದ್ದರು. ಅದು ಮತ್ತೊಮ್ಮೆ ನಡೆಯಬೇಕಿದೆ’ ಎಂದು ದಲಿತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಸಹ ಸಂಚಾಲಕ ಬಿಸಾಟಿ ತಾಯಪ್ಪ ನಾಯಕ ಹೇಳಿದರು.
ದಲಿತ ಹಕ್ಕುಗಳ ಸಮಿತಿ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಸಹಭಾಗಿತ್ವದಲ್ಲಿ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪೆರಿಯಾರ್ ರಾಮಸ್ವಾಮಿ ನಾಯಕರ್ ಅವರ 142ನೇ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
‘ಅರ್ಥವಿಲ್ಲದ ಆಚರಣೆಗಳು ಜಾರಿಯಲ್ಲಿವೆ. ಅವುಗಳಿಂದ ಜನ ಭಯಕ್ಕೆ ಒಳಗಾಗಿ ಜೀವನ ನಡೆಸುತ್ತಿದ್ದಾರೆ. ಮೌಢ್ಯ, ಕಂದಾಚಾರವನ್ನು ಜನರಿಂದ ಹೋಗಲಾಡಿಸಲು ಪೆರಿಯಾರ್, ಡಾ.ಬಿ.ಆರ್. ಅಂಬೇಡ್ಕರ್ ಸಾಕಷ್ಟು ಶ್ರಮಿಸಿದ್ದರು. ಅವರು ತತ್ವಾದರ್ಶಗಳನ್ನು ಅಳವಡಿಸಿಕೊಂಡು ಮೌಢ್ಯಕ್ಕೆ ತಿಲಾಂಜಲಿ ಹಾಡಬೇಕು’ ಎಂದು ಹೇಳಿದರು.
ಸಮಿತಿಯ ಜಿಲ್ಲಾ ಸಂಚಾಲಕರಾದ ಎಂ.ಜಂಬಯ್ಯ ನಾಯಕ, ‘ದೇವರು, ಧರ್ಮದ ಹೆಸರಿನಲ್ಲಿ ಜನರನ್ನು ಶೋಷಿಸಿ ರಾಜಕೀಯ ಮಾಡಲಾಗುತ್ತಿದೆ. ಪೆರಿಯಾರ್ ಅವರ ಜನಪರ ವಿಚಾರಧಾರೆಗಳು ಜನರಿಗೆ ತಲುಪದಂತೆ ವ್ಯವಸ್ಥಿತ ಹುನ್ನಾರ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಅದರಿಂದ ಹೊರಬರಬೇಕು’ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ನಾಗರಾಜ್ ಪತ್ತಾರ್, ‘ಪ್ರಭುತ್ವ ಬಂಡವಾಳಷಾಹಿಗಳು, ಪುರೋಹಿತಷಾಹಿಗಳ ಅಜೆಂಡಾ ಜಾರಿಗೆ ತರುತ್ತಿದೆ. ಅದರ ಬಗ್ಗೆ ಯುವಜನರು ತಿಳಿದುಕೊಂಡು ಧ್ವನಿ ಎತ್ತಬೇಕಿದೆ’ ಎಂದರು.
ಡಿ.ವೈ.ಎಫ್.ಐ. ರಾಜ್ಯ ಘಟಕದ ಉಪಾಧ್ಯಕ್ಷ ಬಿಸಾಟಿ ಮಹೇಶ್, ಸಿ.ಐ.ಟಿ.ಯು. ಮುಖಂಡ ಆರ್.ಭಾಸ್ಕರ್ ರೆಡ್ಡಿ, ಮುಖಂಡರಾದ ಕಲ್ಯಾಣಯ್ಯ, ಕಿನ್ನಾಳ್ ಹನುಮಂತ, ಇ.ಮಂಜುನಾಥ, ಸಿದ್ದಲಿಂಗಪ್ಪ, ಯಲ್ಲಾಲಿಂಗ, ಅಲ್ತಾಫ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.