ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ನಮ್ಮೂರ ಹಬ್ಬ ಹಂಪಿ ಉತ್ಸವಕ್ಕೆ ಬನ್ನಿ

ಸಂಸದ, ಜಿಲ್ಲಾಧಿಕಾರಿಗಳಿಂದ ಮನೆ ಮನೆಗೆ ತೆರಳಿ ಆಮಂತ್ರಣ
Last Updated 1 ಮಾರ್ಚ್ 2019, 11:08 IST
ಅಕ್ಷರ ಗಾತ್ರ

ಹೊಸಪೇಟೆ: ‘ಮಾ. 2 ಮತ್ತು 3ರಂದು ನಮ್ಮೂರಿನ ಹಂಪಿ ಉತ್ಸವ ಹಬ್ಬ ನಡೆಯಲಿದೆ. ಮನೆ–ಮಂದಿಯೆಲ್ಲ ತಪ್ಪದೇ ಬರಬೇಕು. ನಮ್ಮೂರ ಜಾತ್ರೆ ಯಶಸ್ವಿಗೊಳಿಸಬೇಕು’

ಹೀಗೆಂದು ಸಂಸದ ವಿ.ಎಸ್‌. ಉಗ್ರಪ್ಪ, ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ಅವರು ಸಾರ್ವಜನಿಕರಲ್ಲಿ ಶುಕ್ರವಾರ ಮನವಿ ಮಾಡಿದರು.

ಕೇವಲ ಮನವಿಯಷ್ಟೇ ಮಾಡಲಿಲ್ಲ. ಪ್ರತಿಯೊಬ್ಬರ ಮನೆಗಳಿಗೆ ಭೇಟಿ ನೀಡಿ, ಅವರಿಗೆ ಹಂಪಿ ಉತ್ಸವದ ಆಹ್ವಾನ ಪತ್ರಿಕೆ, ಅರಿಶಿಣ ಕುಂಕುಮ ನೀಡಿ, ಎಲ್ಲರೂ ಬರಬೇಕೆಂದು ಕೈಮುಗಿದು ಬಂದರು. ಅದಕ್ಕೆ ಸಾರ್ವಜನಿಕರು ಕೂಡ ಅಷ್ಟೇ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದರು.

‘ಅನೇಕ ವರ್ಷಗಳಿಂದ ಹಂಪಿ ಉತ್ಸವ ನೋಡುತ್ತ ಬಂದಿದ್ದೇವೆ. ಆದರೆ, ಒಮ್ಮೆಯೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಈ ರೀತಿ ನಮ್ಮ ಮನೆಗೆ ಬಂದು ಉತ್ಸವಕ್ಕೆ ಕರೆದಿರಲಿಲ್ಲ. ಬಹಳ ಖುಷಿಯಾಗಿದೆ. ಖಂಡಿತವಾಗಿಯೂ ಹಾಜರಾಗುತ್ತೇವೆ. ಜನಪ್ರತಿನಿಧಿಗಳಂತೂ ಚುನಾವಣೆ ಸಂದರ್ಭದಲ್ಲಷ್ಟೇ ಮನೆಗೆ ಬಂದು ಭೇಟಿ ಕೊಡುತ್ತಾರೆ. ಅದಾದ ನಂತರ ಒಮ್ಮೆಯೂ ಸುಳಿಯುವುದಿಲ್ಲ’ ಎಂದು ನೆಹರೂ ಕಾಲೊನಿಯ ಶೋಭಾ ಹೇಳಿದರು.

‘ಹಂಪಿ ಉತ್ಸವದಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ಜಿಲ್ಲಾಡಳಿತ ಸದಾಶಯ. ಹಾಗಾಗಿ ಎಲ್ಲರ ಮನೆಗೆ ಹೋಗಿ ಆಹ್ವಾನಿಸುತ್ತಿದ್ದೇವೆ. ನಾನು ಹಾಗೂ ಸಂಸದರು ನೆಹರೂ ಕಾಲೊನಿಯಲ್ಲಿ ಈ ಕೆಲಸ ಮಾಡಿದರೆ, ಬೇರೆ ಬಡಾವಣೆಗಳಲ್ಲಿ ನಮ್ಮ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಆಹ್ವಾನಿಸುತ್ತಾರೆ’ ಎಂದು ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ತಿಳಿಸಿದರು.

ನಗರಸಭೆ ಅಧ್ಯಕ್ಷ ಗುಜ್ಜಲ್‌ ನಿಂಗಪ್ಪ, ಪೌರಾಯುಕ್ತ ವಿ. ರಮೇಶ್‌, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಡಿ. ಜೋಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT