ಸೋಮವಾರ, ಜನವರಿ 20, 2020
27 °C

ಹೊಸಪೇಟೆ: ನಿಷೇಧಾಜ್ಞೆ ಉಲ್ಲಂಘಿಸಿದ ಸಿಪಿಎಂ ಕಾರ್ಯಕರ್ತರು ಪೊಲೀಸರ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ನಿಷೇಧಾಜ್ಞೆ ಉಲ್ಲಂಘಿಸಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಮುಂದಾದ ಸಿಪಿಎಂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ನಗರದ ಶ್ರಮಿಕ ಭವನದ ಎದುರು ಸೇರಿದ ಕಾರ್ಯಕರ್ತರು, ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ರ್‍ಯಾಲಿ ನಡೆಸಲು ಮುಂದಾದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಕಾರ್ಯಕರ್ತರನ್ನು ವಶಕ್ಕೆ ಪಡೆದು, ಚಿತ್ತವಾಡ್ಗಿ ಠಾಣೆಗೆ ಕರೆದೊಯ್ದರು.

ಪ್ರತಿಭಟನೆಗೆ ಅಡ್ಡಿಪಡಿಸಿದ ಪೊಲೀಸರ ಕ್ರಮವನ್ನು ಕಾರ್ಯಕರ್ತರು ಖಂಡಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ‘ಪೌರತ್ವ ತಿದ್ದುಪಡಿ ಕಾಯ್ದೆಯು ದೇಶದ ಏಕತೆ, ಅಖಂಡತೆಗೆ ಮಾರಕವಾದುದು. ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿ ಈ ಕಾಯ್ದೆ ಜಾರಿಗೆ ತರಲಾಗಿದೆ’ ಎಂದು ಮುಖಂಡ ಬಿಸಾಟಿ ಮಹೇಶ್‌ ಆರೋಪಿಸಿದರು.

‘ತಮ್ಮ ಪಕ್ಷಕ್ಕೆ ಬಹುಮತವಿದೆ ಎಂದು ಕೇಂದ್ರ ಸರ್ಕಾರ ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳುತ್ತಿದೆ. ಸಂವಿಧಾನದ ಪ್ರಕಾರ ಎಲ್ಲ ಧರ್ಮೀಯರನ್ನು ಸಮಾನರಾಗಿ ಕಾಣಬೇಕು. ಆದರೆ, ಮುಸ್ಲಿಮರ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪಾಯಕಾರಿ ಬೆಳವಣಿಗೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕಾಯ್ದೆ ವಿರುದ್ಧ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅನೇಕ ಕಡೆ ಹಿಂಸಾಚಾರಗಳು ಸಂಭವಿಸಿವೆ. ನಿಷೇಧಾಜ್ಞೆ ಹೇರಿ ಜನರ ಪ್ರತಿಭಟನೆಯ ಹಕ್ಕು ಕಸಿದುಕೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ. ಜನಾಕ್ರೋಶಕ್ಕೆ ಬೆಲೆ ಕೊಟ್ಟು ಸರ್ಕಾರ ಕಾಯ್ದೆ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಭಾಸ್ಕರ್‌ ರೆಡ್ಡಿ, ಯಲ್ಲಾಲಿಂಗ, ಗೋಪಾಲ, ಕೆ.ಎಂ. ಸಂತೋಷ್‌ ಕುಮಾರ್‌, ಕೆ. ನಾಗರತ್ನಮ್ಮ, ಜಂಬಯ್ಯ ನಾಯಕ ಸೇರಿದಂತೆ ಹಲವರು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು