ಗುರುವಾರ , ಮಾರ್ಚ್ 4, 2021
27 °C
ಹಣವಂತರಿಗಷ್ಟೇ ನಗರಸಭೆಯಲ್ಲಿ ಸುಲಭದಲ್ಲಿ ಕೆಲಸ ಆರೋಪ

ನಗರಸಭೆ ನಿಷ್ಕ್ರಿಯತೆ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯನಗರ (ಹೊಸಪೇಟೆ): ಫಾರಂ ನಂಬರ್‌ 3 ಸರ್ಕಾರದ ನಿಗದಿತ ಕಾಲಮಿತಿಯಲ್ಲಿ ಸಾರ್ವಜನಿಕರಿಗೆ ನೀಡುವಂತೆ ಆಗ್ರಹಿಸಿ ಜನಪರ ವೇದಿಕೆಯ ಕಾರ್ಯಕರ್ತರು ಮಂಗಳವಾರ ಇಲ್ಲಿನ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರಸಭೆಯಲ್ಲಿ ಜನಸಾಮಾನ್ಯರಿಗೆ ಸಂಬಂಧಿಸಿದ ಯಾವುದೇ ಕೆಲಸಗಳು ತ್ವರಿತ ಗತಿಯಲ್ಲಿ ಆಗುತ್ತಿಲ್ಲ. ಸಕಾಲ ಯೋಜನೆಯಡಿ ಇಂತಿಷ್ಟೇ ದಿನಗಳೊಳಗೆ ಸಾರ್ವಜನಿಕರ ಕೆಲಸಗಳು ಆಗಬೇಕು. ಆದರೆ, ಅದ್ಯಾವುದೂ ಆಗುತ್ತಿಲ್ಲ. ನಗರಸಭೆ ಹಣವಂತರಿಗೆ ಮಾತ್ರ ಎನ್ನುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ನಂತರ ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಗರಸಭೆ ಅಧಿಕಾರಿಗಳು ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ. ಫಾರಂ ನಂಬರ್‌ 3, ಖಾತಾ ಬದಲಾವಣೆ, ಜನನ ಮತ್ತು ಮರಣ ಪ್ರಮಾಣ ಪತ್ರ ಕೊಡಲು ಸಾಕಷ್ಟು ವಿಳಂಬ ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿಯೇ ಇಲ್ಲಿನ ನಗರಸಭೆ ಅತ್ಯಂತ ನಿಷ್ಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದೆ. ಅದಕ್ಕೆ ಚುರುಕು ಮುಟ್ಟಿಸುವ ಕೆಲಸ ಮೇಲಧಿಕಾರಿಗಳಿಂದ ಆಗುತ್ತಿಲ್ಲ ಎಂದು ದೂರಿದರು.

ಸಿಬ್ಬಂದಿ ಕೊರತೆಯು ಕೆಲಸ ವಿಳಂಬಕ್ಕೆ ಕಾರಣವಾಗಿದ್ದು, ಆದಷ್ಟು ಶೀಘ್ರ ಹೊರಗುತ್ತಿಗೆ ಆಧಾರದ ಮೇಲೆ ಖಾಲಿಯಿರುವ ತಾತ್ಕಾಲಿಕ ಹುದ್ದೆ ತುಂಬಬೇಕು. ಅರ್ಜಿಗಳ ಸ್ಥಿತಿಗತಿ ತಿಳಿಯಲು ಪ್ರತ್ಯೇಕ ಕೌಂಟರ್‌ ತೆರೆಯಬೇಕು. ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು. ಬಿಡಾಡಿ ದನ, ಹಂದಿ, ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ವೇದಿಕೆಯ ಅಧ್ಯಕ್ಷ ಡಿ. ವೆಂಕಟರಮಣ, ಪ್ರಧಾನ ಕಾರ್ಯದರ್ಶಿ. ಸಿ. ಗೋವಿಂದರಾಜ್‌, ಮುಖಂಡರಾದ ಪ್ರಕಾಶ್‌ಬಾಬು, ರಮೇಶ, ಕೃಷ್ಣ, ನಿಜಾಮುದ್ದೀನ್‌, ರಾಮಚಂದ್ರಬಾಬು, ಅಲ್ಲಾಭಕ್ಷಿ ಇತರರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.