ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆ ನಿರ್ವಹಣೆ ಗೊತ್ತಿಲ್ಲದ ಎಂಜಿನಿಯರ್‌ಗಳು!

ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸುಬೋಧ್‌ ಯಾದವ್‌ ಅಸಮಾಧಾನ
Last Updated 19 ಸೆಪ್ಟೆಂಬರ್ 2019, 13:28 IST
ಅಕ್ಷರ ಗಾತ್ರ

ಬಳ್ಳಾರಿ: ‘ಮಹಾನಗರ ಪಾಲಿಕೆಯಲ್ಲಿರುವ ಎಂಜನಿಯರ್‌ಗಳಿಗೆ ನೀರು ಸರಬರಾಜು ನಿರ್ವಹಣೆ ಬಗ್ಗೆ ಸ್ವಲ್ಪವೂ ಜ್ಞಾನವಿಲ್ಲ. ಮೊದಲು ಅವರಿಗೆ ಸೂಕ್ತ ತರಬೇತಿ ಕೊಡಿಸಿ’ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋಧ್‌ ಯಾದವ್ ಸೂಚಿಸಿದರು.

ಪಾಲಿಕೆಯಲ್ಲಿ ಗುರುವಾರ ಪ್ರಗತಿ ಪರಿಶೀಲನಾ ಸಭೆಯಲ್ಲು ಮಾತನಾಡಿದ ಅವರು, ‘ನೀರು ಸರಬರಾಜು ನಿರ್ವಹಣೆ ಕುರಿತು ಎಂಜನಿಯರ್‌ಗಳಿಗೆ ಸ್ಪಷ್ಟಜ್ಞಾನ ಇರದಿರುವುದು ನಗರ ನೀರು ಸರಬರಾಜು ಮತ್ತು ಒಳಚರಂಡಿ ವಿಷಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡಿದರೆ ಗೊತ್ತಾಗುತ್ತದೆ. ಸಮಸ್ಯೆ ಕಂಡುಬಂದರೆ ಅಲ್ಪಸ್ವಲ್ಪ ರಿಪೇರಿ ಮಾಡಿ ಕೈ ತೊಳೆದುಕೊಳ್ಳುತ್ತಾರೆಯೇ ಹೊರತು ಮೂಲ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ಕೆಲಸವನ್ನು ಮಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬಿಬಿಎಂಪಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ತರಬೇತಿ ನೀಡಿ ಅವರನ್ನು ಸಜ್ಜುಗೊಳಿಸಬೇಕು. ಕೂಡಲೇ ಈ ಕೆಲಸವಾಗಬೇಕು’ ಎಂದು ಸ್ಪಷ್ಟಪಡಿಸಿದರು.

‘ನೀರು ವಿತರಣೆ ಪಾಯಿಂಟ್‌ಗಳಿಲ್ಲದೆಯೇ ಅದು ಹೇಗೆ ಇಷ್ಟು ದಿನದಿಂದ ನಗರಕ್ಕೆ ನೀರು ಸರಬರಾಜು ಮಾಡಿದ್ದೀರಿ? ಒಳಚರಂಡಿ ವ್ಯವಸ್ಥೆ ಹೇಗೆ ನಿರ್ವಹಣೆ ಮಾಡಿದ್ದೀರಿ ಎಂಬುದೇ ನನಗೆ ಅರ್ಥವಾಗುತ್ತಿಲ್ಲ’ ಎಂದು ಅಚ್ಚರಿ ವ್ಯಕ್ತಪಡಿಸಿದರು.

‘ಪಾಲಿಕೆ ಪೂರೈಸುವ ನೀರಿನಲ್ಲಿ ಒಳಚರಂಡಿ ನೀರು ಸೇರಿಕೊಳ್ಳುವುದನ್ನು ಶಾಶ್ವತವಾಗಿ ನಿಯಂತ್ರಿಸಬೇಕು. ಪಾಲಿಕೆ ನೀರು ಬಿಟ್ಟ ಕೂಡಲೇ ಜನ ಸಂಗ್ರಹಿಸಿಕೊಳ್ಳದೆ ಒಂದು ಗಂಟೆ ಕಾಲ ಹೊರಕ್ಕೆ ಹರಿಸುತ್ತಾರೆ. ಚರಂಡಿ ನೀರು ಮಿಶ್ರಣವಾಗಿದ್ದರೆ ಹೋಗಲಿ ಎಂದೇ ಅದರ್ಥ. ಆ ಸಮಸ್ಯೆಯನ್ನು ಪರಿಹರಿಸಿದರೇ ಆ ನೀರನ್ನೂ ಉಳಿಸಬಹುದು’ ಎಂದರು.

ಸಾಪ್ಟವೇರ್ ಅಭಿವೃದ್ಧಿ: ‘ಪಾಲಿಕೆಯ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿ ನಿರ್ವಹಣೆಗಾಗಿ ಸಾಪ್ಟವೇರ್ ಅನ್ನು ಅಭಿವೃದ್ಧಿಪಡಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ‘ಬಿಬಿಎಂಪಿಯಲ್ಲಿ ಎಷ್ಟು ವಾರ್ಡ್‌ಗಳಲ್ಲಿ ಇದನ್ನು ಜಾರಿಗೆ ತರಲಾಗಿದೆ ಮತ್ತು ಸ್ಪಂದನೆ ಹೇಗಿದೆ ಎಂಬುದರ ವರದಿ ತರಿಸಿಕೊಂಡು ಮುಂದುವರಿಯಿರಿ’ ಎಂದು ಸೂಚಿಸಿದರು.

ಬಸ್‌ ನಿಲ್ದಾಣ: ನಗರದ ದುರ್ಗಮ್ಮ ದೇವಸ್ಥಾನದ ಬಳಿ ಹಾಗೂ ಸುಧಾ ಸರ್ಕಲ್ ಬಳಿ ಖಾಸಗಿ ಸಹಭಾಗಿತ್ವದ ಅಡಿ ಬಸ್ ತಂಗುದಾಣಗಳನ್ನು ಜಾಹೀರಾತು ಪ್ರದರ್ಶಿಸುವ ಷರತ್ತಿನೊಂದಿಗೆ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ’ ಎಂದು ಆಯುಕ್ತೆ ಎಂ.ವಿ.ತುಷಾರಮಣಿ ತಿಳಿಸಿದರು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT