ನಿವೃತ್ತ ಕಂಡಕ್ಟರ್‌ ಏಕಾಂಗಿ ಹೋರಾಟ!

ಮಂಗಳವಾರ, ಏಪ್ರಿಲ್ 23, 2019
27 °C
ನೌಕರಿಯಿಂದ ಸ್ವಯಂ ನಿವೃತ್ತಿ ಪಡೆದು ಸಮಾಜ ಸೇವೆ, ರಾಜಕೀಯಕ್ಕೆ

ನಿವೃತ್ತ ಕಂಡಕ್ಟರ್‌ ಏಕಾಂಗಿ ಹೋರಾಟ!

Published:
Updated:

ಹೊಸಪೇಟೆ: ಸಮಾಜ ಸೇವೆ ಮಾಡಬೇಕೆಂಬ ಹಂಬಲದಿಂದ ಸಾರಿಗೆ ಸಂಸ್ಥೆಯ ಕಂಡಕ್ಟರ್‌ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಕ್ಷೇತ್ರಕ್ಕೆ ದುಮುಕಿದವರು ಕಾರಿಗನೂರಿನ ಪಂಪಾಪತಿ.

‘ಕಂಡಕ್ಟರ್‌ ಪಂಪಾಪತಿ’ ಎಂದೇ ಚಿರಪರಿಚಿತರಾಗಿರುವ ಇವರು, 2013ರಿಂದ ಇದುವರೆಗೆ ನಡೆದ ಎಲ್ಲ ಚುನಾವಣೆಗಳಲ್ಲಿ ಸ್ಪರ್ಧಿಸುತ್ತ ಬಂದಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವುದು–ಸೋಲುವುದು ಅವರಿಗೆ ಮುಖ್ಯವಲ್ಲ. ‘ಮತದಾರರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ’ ಎನ್ನುತ್ತಾರೆ ಪಂಪಾಪತಿ.

2004ರಲ್ಲಿಯೇ ಹುದ್ದೆಗೆ ರಾಜೀನಾಮೆ ಕೊಟ್ಟು, ರಾಜಕೀಯ ಪ್ರವೇಶಿಸಲು ನಿರ್ಧರಿಸಿದ್ದರು. ಆದರೆ, ಸಂಸ್ಥೆ ಅವರ ರಾಜೀನಾಮೆ ಅಂಗೀಕರಿಸಲಿಲ್ಲ. ಸತತ ಪ್ರಯತ್ನದ ನಂತರ 2013ರಲ್ಲಿ ಅವರ ಆಸೆ ಈಡೇರಿತು. ಆ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಿಂದ ಕಣಕ್ಕಿಳಿದು, ಮೂರು ಸಾವಿರ ಮತ ಪಡೆದು ಪರಾಭವಗೊಂಡರು.

ಪುನಃ 2018ರ ನವೆಂಬರ್‌ನಲ್ಲಿ ನಡೆದ ಬಳ್ಳಾರಿ ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸಿದರು. 7,793 ಮತ ಪಡೆದರು. ಈಗ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗೆ ಮತ್ತೆ ಬಳ್ಳಾರಿಯಿಂದ ಕಣಕ್ಕಿಳಿದಿದ್ದಾರೆ. ‘ವಿಸಿಲ್‌’ (ಸೀಟಿ) ಇವರ ಚಿಹ್ನೆ ಎನ್ನುವುದು ವಿಶೇಷ.

ಪ್ರತಿ ಚುನಾವಣೆಯಲ್ಲಿ ಕರಪತ್ರಗಳನ್ನು ಮುದ್ರಿಸಿ, ಅವರೊಬ್ಬರೇ ಏಕಾಂಗಿಯಾಗಿ ಕ್ಷೇತ್ರದಾದ್ಯಂತ ಸಂಚರಿಸಿ ಮತ ಯಾಚಿಸುತ್ತಾರೆ. ಈ ಹಿಂದಿನ ಚುನಾವಣೆಗಳಲ್ಲಿ ಸೋತಿರುವುದರ ಬಗ್ಗೆ ಅವರಿಗೆ ಎಳ್ಳಷ್ಟೂ ಬೇಸರವಿಲ್ಲ. ‘ಮತದಾರರಿಗೆ ಯಾವುದೇ ರೀತಿಯ ಆಮಿಷವೊಡ್ಡದೆ, ನಯಾ ಪೈಸೆ ಖರ್ಚು ಮಾಡದ ನನಗೆ ಹಿಂದಿನ ಚುನಾವಣೆಯಲ್ಲಿ ಏಳು ಸಾವಿರಕ್ಕೂ ಹೆಚ್ಚು ಮತಗಳು ಬಿದ್ದಿವೆ. ಇದಕ್ಕಿಂತ ಇನ್ನೇನು ಬೇಕು. ಪ್ರಾಮಾಣಿಕರನ್ನು ಕೆಲವರಾದರೂ ಗುರುತಿಸಿ ಮತ ಹಾಕಿದ್ದಾರಲ್ಲ. ಅದು ನನಗೆ ಸಂತೋಷ ತಂದಿದೆ’ ಎಂದು ಹೇಳಿದರು.

‘ನನ್ನ ತಂದೆ ರೈಲ್ವೆ ಇಲಾಖೆಯಲ್ಲಿ ನೌಕರರಾಗಿದ್ದರು. ನಾನು ಅನೇಕ ವರ್ಷ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡಿರುವೆ. ಕಾರ್ಮಿಕರು, ಅವರ ಕುಟುಂಬ ಸದಸ್ಯರು ಎದುರಿಸುತ್ತಿರುವ ಸಮಸ್ಯೆಗಳ ಅರಿವಿದೆ. ಸರ್ಕಾರದ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಅನೇಕ ಸಲ ಹೋರಾಟ ನಡೆಸಿರುವೆ. ರಾಜಕೀಯ ಅಧಿಕಾರ ಸಿಕ್ಕರೆ ಇನ್ನಷ್ಟು ಪರಿಣಾಮಕಾರಿಯಾಗಿ ಅದನ್ನು ಮಾಡಬಹುದು ಅಂದುಕೊಂಡಿದ್ದೇನೆ. ಆರಿಸಿ ಬರದಿದ್ದರೆ ಸಮಾಜ ಸೇವೆ, ಕಾರ್ಮಿಕರ ಪರ ಹೋರಾಟ ಮಾಡುವುದು ಇದ್ದೇ ಇದೆಯಲ್ಲ’ ಎಂದರು.

‘ಈ ಹಿಂದಿನ ಚುನಾವಣೆಗಳಲ್ಲಿ ಸಾರಿಗೆ ಸಂಸ್ಥೆ ನೌಕರರು, ಕಾರ್ಮಿಕರು, ನಿವೃತ್ತ ನೌಕರರು ನನ್ನನ್ನು ಬೆಂಬಲಿಸಿದ್ದಾರೆ. ಈ ಸಲವೂ ಬೆಂಬಲಿಸುವ ಭರವಸೆ ಇದೆ. ಜನ ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೆ ಮತ ಹಾಕಿದರೆ ಖಂಡಿತವಾಗಿ ಆರಿಸಿ ಬರುವೆ. ಭ್ರಷ್ಟರಿಂದ ದುಡ್ಡು ಪಡೆದು, ಭ್ರಷ್ಟರಿಗೆ ಮತ ಹಾಕಿ ಆರಿಸಿದರೆ ಜನ ಅವರಿಗೆ ಮಾಡಿಕೊಳ್ಳುವ ಆತ್ಮವಂಚನೆ ಬಿಟ್ಟರೆ ಬೇರೇನೂ ಇಲ್ಲ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !