ಸೋಮವಾರ, ಅಕ್ಟೋಬರ್ 18, 2021
27 °C
ಹೊಸಪೇಟೆ ಆರ್‌ಟಿಒಗೆ ಬರಬೇಕಿದೆ ₹13.59 ಕೋಟಿ

ತೆರಿಗೆ ಕಟ್ಟದವರಿಗೆ ‘ಡಿಮ್ಯಾಂಡ್‌ ನೋಟಿಸ್‌’; ಕರ ಸಂಗ್ರಹಕ್ಕೆ ಕಠಿಣ ಕ್ರಮ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ರಸ್ತೆ ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಮುಂದಾಗಿದೆ.

ಮೊದಲ ಹಂತದಲ್ಲಿ ವಾಹನ ಮಾಲೀಕರಿಗೆ ‘ಡಿಮ್ಯಾಂಡ್‌ ನೋಟಿಸ್‌’ ನೀಡಲಾಗುತ್ತದೆ. ಒಂದು ವಾರದೊಳಗೆ ತೆರಿಗೆ ತುಂಬದಿದ್ದಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿ, ಜೈಲಿಗೆ ಕಳುಹಿಸಲು ಸಿದ್ಧತೆ ನಡೆಸಿದೆ. ಈಗಾಗಲೇ ನೋಟಿಸ್‌ ಕಳುಹಿಸಿದ್ದರೂ ತೆರಿಗೆ ಕಟ್ಟದ 125 ಜನರ ವಿರುದ್ಧ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲು ತಯಾರಿ ನಡೆಸಲಾಗುತ್ತಿದೆ.

ಹೊಸಪೇಟೆ ಆರ್‌ಟಿಒ ವ್ಯಾಪ್ತಿಯ 5,098 ವಾಹನಗಳಿಂದ ಒಟ್ಟು ₹13.59 ಕೋಟಿ ರಸ್ತೆ ತೆರಿಗೆ ಬರಬೇಕಿದೆ. ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯಿಂದ ವಾಹನಗಳ ಮಾಲೀಕರು ತೆರಿಗೆ ಪಾವತಿಸಿಲ್ಲ. ಈ ಪೈಕಿ 400 ವಾಹನ ಮಾಲೀಕರು ತಲಾ ₹1 ಲಕ್ಷಕ್ಕಿಂತ ಹೆಚ್ಚಿನ ತೆರಿಗೆ ಕಟ್ಟಬೇಕಿದೆ. ಈ ಮೊತ್ತ ₹4 ಕೋಟಿಗೂ ಅಧಿಕವಾಗುತ್ತದೆ. ಹೀಗಾಗಿ ಇವರಿಗೆ ಮೊದಲ ಹಂತದಲ್ಲಿ ‘ಡಿಮ್ಯಾಂಡ್‌ ನೋಟಿಸ್’ ಕೊಟ್ಟು ತೆರಿಗೆ ವಸೂಲಿಗೆ ಮುಂದಾಗಿದೆ.

‘ಕಾಲಕಾಲಕ್ಕೆ ರಸ್ತೆ ತೆರಿಗೆ ಕಟ್ಟುವಂತೆ ವಾಹನಗಳ ಮಾಲೀಕರಿಗೆ ಸೂಚನೆ ನೀಡಲಾಗುತ್ತಿದೆ. ಆದರೆ, ಅವರು ನಿರ್ಲಕ್ಷಿಸುತ್ತ ಬಂದಿದ್ದಾರೆ. ಹೀಗಾಗಿ ಕಠಿಣ ಕಾನೂನು ಕ್ರಮ ಜರುಗಿಸಲು ತೀರ್ಮಾನಿಸಲಾಗಿದೆ. ಇತ್ತೀಚೆಗೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಗಿದೆ. ರಾಜಸ್ವ ಸಂಗ್ರಹಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಕೂಡ ಸೂಚನೆ ಕೊಟ್ಟಿದ್ದಾರೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಚವ್ಹಾಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಡೀ ರಾಜ್ಯದಲ್ಲಿ ಈ ವರ್ಷದ ಜುಲೈ ಅಂತ್ಯದವರೆಗೆ ₹2,329 ಕೋಟಿ ರಸ್ತೆ ತೆರಿಗೆ ಬರಬೇಕಿತ್ತು. ಆದರೆ, ₹1,472 ಕೋಟಿ ಬಂದಿದೆ. ಇನ್ನೂ ₹856 ಕೋಟಿ ಬರಬೇಕು. ಕೋವಿಡ್‌ ಲಾಕ್‌ಡೌನ್‌ನಿಂದ ತೆರಿಗೆ ವಸೂಲಿಯಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಈಗ ಎಲ್ಲವೂ ಸಹಜವಾಗಿದೆ. ವಾಹನ ಮಾಲೀಕರು ಸ್ವಯಂಪ್ರೇರಣೆಯಿಂದ ಬಂದು ತೆರಿಗೆ ತುಂಬಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಎದುರಿಸಲು ಸಿದ್ಧರಿರಬೇಕು’ ಎಂದು ಎಚ್ಚರಿಕೆ ನೀಡಿದರು.

‘ದಾವಣಗೆರೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ತೆರಿಗೆ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ದಾವಣಗೆರೆಯಲ್ಲಿ ಎಂಟು ಜನ ವಾಹನ ಮಾಲೀಕರು ಜೈಲು ಸೇರಿದ್ದಾರೆ. ನಮ್ಮ ವ್ಯಾಪ್ತಿಯ ವಾಹನ ಮಾಲೀಕರು ತೆರಿಗೆ ಕಟ್ಟದಿದ್ದಲ್ಲಿ ಅವರಿಗೂ ಇದೇ ಗತಿ ಆಗುತ್ತದೆ’ ಎಂದು ಎಚ್ಚರಿಸಿದರು.

‘ಪರವಾನಗಿ ನವೀಕರಣ, ವಾಹನ ಫಿಟ್‌ನೆಸ್‌, ಇನ್‌ಶೂರೆನ್ಸ್‌ ನವೀಕರಣ ಸೇರಿದಂತೆ ಇತರೆ ಶುಲ್ಕ ಕಟ್ಟಬೇಕಿರುವ 8,000 ಜನರಿಗೆ ಪ್ರಸಕ್ತ ಸಾಲಿನಲ್ಲಿ ನೋಟಿಸ್‌ ನೀಡಲಾಗಿದೆ. ಯಾರೂ ಕೂಡ ತೆರಿಗೆ ವಂಚಿಸಿ ವಾಹನಗಳನ್ನು ರಸ್ತೆಯಲ್ಲಿ ಓಡಿಸುವುದು ಸರಿಯಾದ ಕ್ರಮವಲ್ಲ. ತೆರಿಗೆ ವಸೂಲಾತಿಗಾಗಿಯೇ ಜನಜಾಗೃತಿ ಕಾರ್ಯಕ್ರಮ ಕೂಡ ನಡೆಸಲಾಗುತ್ತಿದೆ. ಸ್ಥಳದಲ್ಲೇ ತೆರಿಗೆ ಕೂಡ ಕಟ್ಟಿಸಿಕೊಳ್ಳಲಾಗುತ್ತಿದೆ. ಜನ ಇದರ ಪ್ರಯೋಜನ ಪಡೆಯಬೇಕು’ ಎಂದರು.

-------

ಕಾಡುತ್ತಿದೆ ಸಿಬ್ಬಂದಿ ಕೊರತೆ
ಹೊಸಪೇಟೆಯಲ್ಲಿ ಆರ್‌ಟಿಒ ಕಚೇರಿಗೆ ಒಟ್ಟು 28 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 18 ಹುದ್ದೆಗಳನ್ನು ಸರ್ಕಾರ ತುಂಬಿದೆ. ಅನ್ಯ ಇಲಾಖೆಯ ಇಬ್ಬರನ್ನು ಕರೆಸಿಕೊಳ್ಳಲಾಗಿದೆ. ಇನ್ನುಳಿದ ಎಂಟು ಹುದ್ದೆಗಳು ಖಾಲಿ ಇವೆ. ಇದರಿಂದ ದೈನಂದಿನ ಕೆಲಸದ ಮೇಲೆ ಪರಿಣಾಮ ಉಂಟಾಗುತ್ತಿದೆ. ‘ಕೆಲಸದ ಒತ್ತಡ ಹೆಚ್ಚಾಗಿದೆ. ಖಾಲಿ ಇರುವ ಹುದ್ದೆಗಳು ತುಂಬಿದರೆ ಬಹಳ ಅನುಕೂಲವಾಗುತ್ತದೆ. ಸಿಬ್ಬಂದಿ ಕೊರತೆ ಇರುವುದರಿಂದ ಗೃಹರಕ್ಷಕರ ಸೇವೆ ಪಡೆಯಲಾಗುತ್ತಿದೆ’ ಎಂದು ಆರ್‌ಟಿಒ ವಸಂತ ಚವ್ಹಾಣ್‌ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು