ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಮುಖಂಡರ ವಿರುದ್ಧ ಆಕ್ರೋಶ

ಉಪಚುನಾವಣೆಯಲ್ಲಿ ಸೋಲಿನ ಆತ್ಮಾವಲೋಕನ ಸಭೆ
Last Updated 13 ಡಿಸೆಂಬರ್ 2019, 8:41 IST
ಅಕ್ಷರ ಗಾತ್ರ

ಹೊಸಪೇಟೆ: ಗುರುವಾರ ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಕೆಲ ಮುಖಂಡರು, ಕಾರ್ಯಕರ್ತರು ಪರಾಜಿತ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಹಾಗೂ ಇತರೆ ಮುಖಂಡರ ವಿರುದ್ಧ ಅಸಮಾಧಾನ ಹೊರಹಾಕಿ ತೀವ್ರ ತರಾಟೆಗೆ ತೆಗೆದುಕೊಂಡರು ಎಂದು ಗೊತ್ತಾಗಿದೆ.

ಪಕ್ಷದ ಮುಖಂಡ ವಿ.ಎಸ್‌. ಉಗ್ರಪ್ಪ, ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಬಿ.ವಿ. ಶಿವಯೋಗಿ ಹಾಗೂ ಘೋರ್ಪಡೆಅವರ ಭಾವಚಿತ್ರಗಳಿದ್ದ ಬ್ಯಾನರ್ ಹರಿದು ಸಿಟ್ಟು ಹೊರ ಹಾಕಿದರು. ಸಭೆಗೆ ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಲಾಗಿತ್ತು.

‘ಸ್ಥಳೀಯರನ್ನು ಬಿಟ್ಟು ನಿಮಗೆ ಟಿಕೆಟ್ ಕೊಡಲಾಗಿತ್ತು. ಆದರೆ, ಸರಿಯಾಗಿ ಪ್ರಚಾರ ನಡೆಸಲಿಲ್ಲ. ಸಂಪನ್ಮೂಲ ಕ್ರೋಢೀಕರಿಸಿಕೊಂಡು ಬರದೇ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಸೋಲು ಕಾಣುವಂತಾಯಿತು' ಎಂದು ಘೋರ್ಪಡೆ ಅವರನ್ನು ಸ್ಥಳೀಯ ಮುಖಂಡರು ತರಾಟೆಗೆ ತೆಗೆದುಕೊಂಡರು.

'ಉಗ್ರಪ್ಪ, ಬಿ.ವಿ.ಶಿವಯೋಗಿ ಅವರು ವರಿಷ್ಠರಿಗೆ ತಪ್ಪು ಮಾಹಿತಿ ನೀಡಿದರು. ಅದರಿಂದಾಗಿ ಹೊರಗಿನವರಿಗೆ ಟಿಕೆಟ್ ಸಿಕ್ಕಿತ್ತು. ಈ ಇಬ್ಬರೂ ಮುಖಂಡರು ಹಾಗೂ ಘೋರ್ಪಡೆ ಅವರ ತಪ್ಪಿನಿಂದಾಗಿ ಪಕ್ಷಕ್ಕೆ ಗೆಲ್ಲುವ ಸಾಧ್ಯತೆಯಿದ್ದರೂ ಸೋಲು ಕಾಣುವಂತಾಯಿತು. ಕೂಡಲೇ ಅವರನ್ನು ಪಕ್ಷದ ಜವಾಬ್ದಾರಿಯಿಂದ ಬಿಡುಗಡೆಗೊಳಿಸಬೇಕು' ಎಂದು ಆಗ್ರಹಿಸಿದರು.

ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ಇಡೀ ಸಭೆ ಗೊಂದಲದ ಗೂಡಾಯಿತು. ಹೀಗಾಗಿ ಸಭೆಯನ್ನು ಅನಿವಾರ್ಯವಾಗಿ ಮೊಟಕುಗೊಳಿಸಬೇಕಾಯಿತು.

‘ಸೋಲಿನಿಂದ ಕೆಲ ಮುಖಂಡರು, ಕಾರ್ಯಕರ್ತರು ಬೇಸರಗೊಂಡಿದ್ದರು. ಅದನ್ನು ಅವರು ನೋವಿನಿಂದ ಹೇಳಿಕೊಂಡಿದ್ದಾರೆ’ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಇಮಾಮ್ ನಿಯಾಜಿ, ಮುಖಂಡರಾದ ಗುಜ್ಜಲ್ ನಾಗರಾಜ್, ಗುಜ್ಜಲ್ ರಘು, ನಿಂಬಗಲ್ ರಾಮಕೃಷ್ಣ, ಸೋಮಪ್ಪ, ಫಹೀಮ್ ಬಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT