ಶನಿವಾರ, ಜನವರಿ 16, 2021
28 °C

‘ಜ್ವಲಂತ ಸಮಸ್ಯೆ ಚರ್ಚೆಗೆ ಸಮುದಾಯ ಸಮಾವೇಶ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ‘ಸಮುದಾಯ ಕರ್ನಾಟಕ’ ಸಂಘಟನೆಯ ಬಳ್ಳಾರಿ ಜಿಲ್ಲಾ ಮಟ್ಟದ ಸಮಾವೇಶ ಜ. 10ರಂದು ನಗರದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದೆ’ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌. ದೇವೇಂದ್ರಗೌಡ ತಿಳಿಸಿದರು.

‘ರೈತರು, ಕಾರ್ಮಿಕರು, ಕಲಾವಿದರು ಸೇರಿದಂತೆ ಅನೇಕ ವಲಯಗಳ ಜನ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ಹುಸಿ ರಾಷ್ಟ್ರೀಯವಾದ, ಗೋಹತ್ಯೆಯಂಥಹ ವಿಚಾರಗಳನ್ನು ಪ್ರಭುತ್ವ ಮುನ್ನೆಲೆಗೆ ತಂದು, ಗಂಭೀರ ವಿಚಾರಗಳನ್ನು ಹಿನ್ನೆಲೆಗೆ ಸರಿಸಲು ಪ್ರಯತ್ನಿಸುತ್ತಿದೆ. ಈ ಸಮಾವೇಶದ ಮೂಲಕ ಅದರ ಬಗ್ಗೆ ತಿಳಿವಳಿಕೆ ಮೂಡಿಸಲಾಗುವುದು’ ಎಂದು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

‘1975ರ ತುರ್ತು ಪರಿಸ್ಥಿತಿಯಲ್ಲಿ ಹುಟ್ಟಿಕೊಂಡ ಈ ಸಂಘಟನೆಯು ನಿರಂತರವಾಗಿ ಸಮಾಜದ ಏಳಿಗೆಗಾಗಿ ಕೆಲಸ ಮಾಡುತ್ತಿದೆ. ರೈತರ ಜಾಥಾ, ವಿಶ್ವಶಾಂತಿಗೆ ನಡಿಗೆ, ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ, ಸಾಹಿತ್ತಿಕ ಕಾರ್ಯಕ್ರಮ, ಬೀದಿ ನಾಟಕಗಳ ಮೂಲಕ ಅರಿವು ಮೂಡಿಸುತ್ತಿದೆ. ಸಂವಿಧಾನದ ಮರು ಓದು ಕಾರ್ಯಕ್ರಮದ ಮೂಲಕ ಅದರ ಮಹತ್ವ ಸಾರಲಾಗಿದೆ’ ಎಂದು ಹೇಳಿದರು.

‘ಜ. 10ಕ್ಕೆ ಬೆಳಿಗ್ಗೆ 10.30ಕ್ಕೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಉದ್ಘಾಟಿಸುವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನ್‌ ಪ್ರೊ.ಸಿ.ಆರ್‌. ಗೋವಿಂದರಾಜು ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 12ಕ್ಕೆ ಪ್ರತಿನಿಧಿಗಳ ಸಮಾವೇಶ ನಡೆಯಲಿದೆ. ‘ಬಹುತ್ವ ಭಾರತ; ಸಾಂಸ್ಕೃತಿಕ ಸಂವಾದದ ದಾರಿಗಳು’, ‘ಬಹುತ್ವ ಭಾರತ; ಸಾಂಸ್ಕೃತಿಕ ಪರ್ಯಾಯ ಕಟ್ಟುವಲ್ಲಿ ನಮ್ಮ ಜವಾಬ್ದಾರಿಗಳು’ ಕುರಿತು ಗೋಷ್ಠಿಗಳು ನಡೆಯಲಿವೆ’ ಎಂದು ವಿವರಿಸಿದರು.

‘ಸಂಜೆ 5.30ಕ್ಕೆ ನಗರದ ರೋಟರಿ ವೃತ್ತ ಬಳಿಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಜನ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಕ್ಕೆ ಮಹಿಳಾ ಹೋರಾಟಗಾರ್ತಿ ಕೆ. ನೀಲಾ ಚಾಲನೆ ನೀಡುವರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ನಾಗರಾಜ ಪತ್ತಾರ್‌ ಅಧ್ಯಕ್ಷತೆ ವಹಿಸುವರು. ಬಳಿಕ ರಿವಾಯತ್‌ ಹಾಡು, ಕನ್ನಡದ ಕವಾಲಿ, ಸೂತ್ರ ಬೊಂಬೆಯಾಟ, ನಿದ್ದೆಯು ನಮಗಿಲ್ಲ ಎದ್ದೇಳಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ’ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕರುಣಾನಿಧಿ, ಮರಡಿ ಜಂಬಯ್ಯ ನಾಯಕ, ತಾಯಪ್ಪ ನಾಯಕ, ಭಾಸ್ಕರ್‌ ರೆಡ್ಡಿ, ದಯಾನಂದ ಕಿನ್ನಾಳ್‌, ಮುನಿರಾಜು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.