ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಿಪ್ಪೆಯನ್ನು ಉಪ್ಪರಿಗೆ ಮಾಡಿದವರು ಸಂಗನಬಸವ ಶ್ರೀ’

Last Updated 1 ಡಿಸೆಂಬರ್ 2021, 16:15 IST
ಅಕ್ಷರ ಗಾತ್ರ

ಹೊಸಪೇಟೆ(ವಿಜಯನಗರ): ‘ಕೊಟ್ಟೂರು ಸಂಸ್ಥಾನ ಮಠದ ಪೀಠಾಧಿಪತಿಯಾಗಿದ್ದ ಲಿಂಗೈಕ್ಯ ಸಂಗನಬಸವ ಸ್ವಾಮೀಜಿ ತಿಪ್ಪೆಯನ್ನು ಉಪ್ಪರಿಗೆ ಮಾಡಿದವರು. ಈ ಹಿಂದೆ ಮಠ ಗೋಶಾಲೆಯಂತಿತ್ತು. ಶ್ರಮ ವಹಿಸಿ ಅದರ ಚಹರೆ ಬದಲಿಸಿದರು’ ಎಂದು ಬಸವತತ್ವ ಚಿಂತಕ ಎಸ್‌. ಶಿವಾನಂದ ತಿಳಿಸಿದರು.

ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಗನಬಸವ ಸ್ವಾಮೀಜಿ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೇವಲ ಸ್ಥಿರಾಸ್ತಿ, ಸ್ಥಾವರಕ್ಕೆ ಸ್ವಾಮಿಯಾಗದೆ ಜನಾನುರಾಗಿಯಾಗಿ ಮಠವನ್ನು ಮುನ್ನಡೆಸಿದ್ದರು’ ಎಂದು ಸ್ಮರಿಸಿದರು.

‘ಕಾಶಿ, ಕೋಲ್ಕತ್ತದಲ್ಲಿ ಅಧ್ಯಯನ ಕೈಗೊಂಡಿದ್ದ ಸಂಗನಬಸವ ಸ್ವಾಮೀಜಿ ರಾಮ್ ಮನೋಹರ್ ಲೋಹಿಯಾ, ಜಯಪ್ರಕಾಶ್ ನಾರಾಯಣ್ ಅವರ ರಾಜಕೀಯ ಸಿದ್ಧಾಂತದಿಂದ ಪ್ರಭಾವಿತರಾಗಿದ್ದರು. ಭಕ್ತರ ಮನೆಗಳೆ ಮಠವಾಗಿದ್ದವು, ಎಲ್ಲಾ ಜನಾಂಗದ ಮನೆಗಳಿಗೆ ಭೇಟಿ ನೀಡಿ ಮಠಕ್ಕೆ ಆಹ್ವಾನಿಸುತ್ತಿದ್ದರು. ಇದ್ದ ಆಸ್ತಿ ಮಾರಿ ಕಾರ್ಯಕ್ರಮ ಮಾಡುತ್ತಿದ್ದರೆ ಹೊರತು ಇನ್ನೊಬ್ಬರನ್ನು ಎಂದೂ ಬೇಡುತ್ತಿರಲಿಲ್ಲ’ ಎಂದರು.

‘ಶಿಕ್ಷಣದ ಜೊತೆಗೆ ಕೃಷಿಯ ಬಗ್ಗೆ ಒಲವು ಹೊಂದಿದ್ದರು. ಒಣಬೇಸಾಯ, ಅರಣ್ಯ ಬೇಸಾಯದ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸುತ್ತಿದ್ದರು. ಮಠದಲ್ಲಿ ನಿರಂತರ ಅನ್ನದಾಸೋಹಕ್ಕೆ ವ್ಯವಸ್ಥೆ ಮಾಡಿದ್ದರು’ ಎಂದು ತಿಳಿಸಿದರು.

ಸಿದ್ಧಲಿಂಗ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ಶಂಕರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮಹೇಶ್ವರ ಸ್ವಾಮೀಜಿ, ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಮುಪ್ಪಿನ ಬಸವಲಿಂಗ ದೇವರು, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ವಿ.ಶರಣ ಸ್ವಾಮಿ, ಕಾರ್ಯದರ್ಶಿ ಕೆ.ರವಿಶಂಕರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ್ ಜೀರೆ, ಮುಖಂಡರಾದ ಸೋಮಶೇಖರ್, ಸಾಲಿ ಸಿದ್ದಯ್ಯ ಸ್ವಾಮಿ, ಜಾಲಿ ಪ್ರಕಾಶ್, ಕೋರಿಶೆಟ್ಟಿ ಲಿಂಗಪ್ಪ, ಕೊಟ್ರೇಶ್, ವಿಜಯ ಸಿಂಧಗಿ, ಗಂಗಾಧರಪ್ಪ, ಚಿತ್ತಪ್ಪ, ವಿರೂಪಾಕ್ಷ ರೆಡ್ಡಿ, ಶರಣಯ್ಯ, ಜೆ.ಕಾರ್ತಿಕ್, ಬಾಬುಲಾಲ್ ಜೈನ್, ಇಮಾಮ್‌ ನಿಯಾಜಿ ಇದ್ದರು.

/ಬಾಕ್ಸ್‌/

ಸ್ವಾಮೀಜಿ ಮರಣ ಪತ್ರ ಹಸ್ತಾಂತರ
ಅನಾರೋಗ್ಯದ ಹಿನ್ನೆಲೆಯಲ್ಲಿ ಜ.9ರಂದೇ ಸಂಗನಬಸವ ಸ್ವಾಮೀಜಿ ಬರೆಸಿದ್ದ ಮರಣಪತ್ರವನ್ನು ಕಾರ್ಯಕ್ರಮದಲ್ಲಿ ಓದಲಾಯಿತು. ನಾಲ್ಕು ಪುಟಗಳ ಮರಣಪತ್ರದಲ್ಲಿ ಶಿವಯೋಗ ಮಂದಿರದ ಮುಪ್ಪಿನ ಬಸವಲಿಂಗ ದೇವರನ್ನು ನನ್ನ ಮುಂದಿನ ಉತ್ತರಾಧಿಕಾರಿಯಾಗಿ ಘೋಷಿಸಿರುವ ಉಲ್ಲೇಖ ಇದೆ. ನಂತರ ಮರಣಪತ್ರವನ್ನು ನೂತನ ಪೀಠಾಧಿಪತಿಗಳಿಗೆ ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT