ಹಂಪಿ ಉಳಿಸಲು ಆನ್‌ಲೈನ್‌ ಅಭಿಯಾನ: ಉತ್ತಮ ಪ್ರತಿಕ್ರಿಯೆ

7
ಯುನೆಸ್ಕೊ, ಪ್ರವಾಸೋದ್ಯಮ ಮಂಡಳಿಗೆ ಹಕ್ಕೊತ್ತಾಯ; 370ಕ್ಕೂ ಅಧಿಕ ಜನರಿಂದ ಬೆಂಬಲ

ಹಂಪಿ ಉಳಿಸಲು ಆನ್‌ಲೈನ್‌ ಅಭಿಯಾನ: ಉತ್ತಮ ಪ್ರತಿಕ್ರಿಯೆ

Published:
Updated:
Prajavani

ಹೊಸಪೇಟೆ: ‘ಹಂಪಿ ಉಳಿಸಿ’ ಹೆಸರಿನಲ್ಲಿ ಆನ್‌ಲೈನ್‌ ಅಭಿಯಾನ ಆರಂಭಿಸಲಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಹಂಪಿಯಲ್ಲಿ ಮೇಲಿಂದ ಮೇಲೆ ಸ್ಮಾರಕಗಳನ್ನು ಭಗ್ನಗೊಳಿಸುವ ಘಟನೆ ನಡೆಯುತ್ತಿವೆ. ಇತ್ತೀಚೆಗೆ ವಿಷ್ಣು ದೇಗುಲದ ಕಲ್ಲುಕಂಬ ಬೀಳಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ವಿಡಿಯೊ ವೈರಲ್‌ ಆಗಿ ಭಾರಿ ಸದ್ದು ಮಾಡಿತ್ತು. ವಿವಿಧ ಸಂಘಟನೆಗಳು ಬೀದಿಗಿಳಿದು ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ಸ್ಮಾರಕಗಳ ಸಂರಕ್ಷಣೆಗೆ ಒತ್ತು ಕೊಡಬೇಕು ಎಂದು ಆಗ್ರಹಿಸಿದ್ದವು. 

ಈಗ ಹಂಪಿ ಸ್ಮಾರಕಗಳ ಸಂರಕ್ಷಣೆಗೆ ಆನ್‌ಲೈನ್‌ ಅಭಿಯಾನ ಆರಂಭಿಸಲಾಗಿದ್ದು, ಸಾರ್ವಜನಿಕರಿಂದ ಬೆಂಬಲ ವ್ಯಕ್ತವಾಗುತ್ತಿದೆ. ಸ್ಥಳೀಯ ಮುಖಂಡ ಸಂದೀಪ್‌ ಸಿಂಗ್‌ ಅವರು ‘ಚೇಂಜ್‌ ಡಾಟ್‌ ಒ.ಆರ್‌.ಜಿ.’ (change. org) ಜಾಲತಾಣದಲ್ಲಿ ‘ಹಂಪಿ ಉಳಿಸಿ’ ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದಾರೆ. ಫೆ.5ರಂದು ಈ ಅಭಿಯಾನ ಆರಂಭಿಸಿದ್ದು, ಎರಡೇ ದಿನಗಳಲ್ಲಿ ಅಭಿಯಾನಕ್ಕೆ ಬೆಂಬಲ ಸೂಚಿಸಿ 376ಕ್ಕೂ ಹೆಚ್ಚು ಜನ ಸಹಿ ಮಾಡಿದ್ದಾರೆ.

‘ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್‌ ಆಗಿರುವುದರಿಂದ ಈ ಅಭಿಯಾನ ನಡೆಸಲಾಗುತ್ತಿದೆ. ಸಾರ್ವಜನಿಕರಿಂದ ಸಹಿ ಸಂಗ್ರಹಿಸಿದ ನಂತರ ಯುನೆಸ್ಕೊ, ಕರ್ನಾಟಕ ಪ್ರವಾಸೋದ್ಯಮ ಮಂಡಳಿಗೆ ಆನ್‌ಲೈನ್‌ ಮೂಲಕವೇ ಮನವಿ ಸಲ್ಲಿಸಿ, ಹಂಪಿ ಸ್ಮಾರಕಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹಕ್ಕೊತ್ತಾಯ ಮಾಡಲಾಗುವುದು’ ಎಂದು ಸಂದೀಪ್‌ ಸಿಂಗ್‌ ತಿಳಿಸಿದ್ದಾರೆ. 

‘ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ ಹಂಪಿ ಜೀವಂತ ಪರಂಪರೆಯ ಪ್ರತೀಕ. ಅದನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯ. ಸರ್ಕಾರ ಅಗತ್ಯ ಭದ್ರತೆ ಒದಗಿಸಬೇಕೆಂಬ ಕಳಕಳಿಯಿಂದ ಈ ಅಭಿಯಾನ ಆರಂಭಿಸಲಾಗಿದೆ. ಆನ್‌ಲೈನ್‌ನಲ್ಲಿ ಹೆಚ್ಚಿನ ವಿದ್ಯಾವಂತರೇ ಇರುವುದರಿಂದ ಅವರಲ್ಲಿ ಅರಿವು ಮೂಡಲಿದೆ. ಜತೆಗೆ ಅವರು ಇಂತಹ ಕೆಲಸಕ್ಕೆ ಬೆಂಬಲಿಸುತ್ತಾರೆ ಎಂಬ ಭರವಸೆ ಇದೆ’ ಎಂದು ಹೇಳಿದ್ದಾರೆ.

ಹಂಪಿ ಹೆಸರಿನಲ್ಲಿ ರಾಜಕೀಯ: ಹಂಪಿ ಹೆಸರಿನಲ್ಲಿ ರಾಜಕೀಯ ಶುರುವಾಗಿದೆ. ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವುದರಿಂದ ರಾಜಕೀಯ ಪಕ್ಷಗಳು ಹಂಪಿ ವಿಷಯದಲ್ಲಿ ಕಾಳಜಿ ತೋರಿಸುತ್ತಿವೆ. ಬೀದಿಗಿಳಿದು, ಹಂಪಿ ರಕ್ಷಣೆಗೆ ಹಕ್ಕೊತ್ತಾಯ ಮಾಡುತ್ತಿವೆ.

ಕಲ್ಲುಕಂಬ ಬೀಳಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ದಿನವೇ ‘ಸಮಾನ ಮನಸ್ಕರ ವೇದಿಕೆ’ ಹೆಸರಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ, ಅಂದಿನ ಪ್ರತಿಭಟನೆಯಲ್ಲಿ ಬಹುತೇಕ ಜನ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರೇ ಪಾಲ್ಗೊಂಡಿದ್ದರು.

ನಂತರ ಬಿಜೆಪಿ ಕಾರ್ಯಕರ್ತರು ವಿರೂಪಾಕ್ಷ ದೇಗುಲದ ಎದುರು ಪ್ರತಿಭಟನೆ ನಡೆಸಿ, ತಮಗೂ ಹಂಪಿ ಬಗ್ಗೆ ಕಳಕಳಿ ಇದೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. 

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !